MI vs CSK, IPL 2022: ಧೋನಿ ಬ್ಯಾಟಿಂಗ್ ಅಬ್ಬರ, ಸತತ ಸೋಲಿನಲ್ಲಿ ಹೊಸ ದಾಖಲೆ ನಿರ್ಮಿಸಿದ ಮುಂಬೈ

ಐಪಿಎಲ್ ಇತಿಹಾಸದಲ್ಲಿಯೇ ತಂಡವೊಂದು ಸತತ 7 ಸೋಲು ಕಂಡಿರಲಿಲ್ಲ. ಇದೇ ಮೊದಲ ಬಾರಿ ಈ ದಾಖಲೆಯನ್ನು ಮುಂಬೈ ಇಂಡಿಯನ್ಸ್ ತನ್ನ ಹೆಸರಿಗೆ ಬರೆಸಿಕೊಂಡಿದೆ.

Written by - Puttaraj K Alur | Last Updated : Apr 22, 2022, 12:04 AM IST
  • ಎಂ.ಎಸ್.ಧೋನಿ ಬ್ಯಾಟಿಂಗ್ ಅಬ್ಬರಕ್ಕೆ ತತ್ತರಿಸಿ ಹೋದ ಮುಂಬೈ ಇಂಡಿಯನ್ಸ್
  • ಐಪಿಎಲ್ ಇತಿಹಾಸಲ್ಲಿಯೇ ಮೊದಲ ಬಾರಿಗೆ ಸತತ 7 ಸೋಲು ಕಂಡು ದಾಖಲೆ ನಿರ್ಮಿಸಿದ ರೋಹಿತ್ ಪಡೆ
  • ಗೆಲುವಿನ ಖಾತೆ ತೆರೆಯುವ ಮುಂಬೈ ಇಂಡಿಯನ್ಸ್ ತಂಡದ ಕನಸಿಗೆ ತಣ್ಣೀರೆರಚಿದ ಧೋನಿ ಬ್ಯಾಟಿಂಗ್
MI vs CSK, IPL 2022: ಧೋನಿ ಬ್ಯಾಟಿಂಗ್ ಅಬ್ಬರ, ಸತತ ಸೋಲಿನಲ್ಲಿ ಹೊಸ ದಾಖಲೆ ನಿರ್ಮಿಸಿದ ಮುಂಬೈ title=
ಧೋನಿ ಬ್ಯಾಟಿಂಗ್ ಅಬ್ಬರಕ್ಕೆ ತತ್ತರಿಸಿದ ಮುಂಬೈ

ಮುಂಬೈ: ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ರೋಚಕ ಗೆಲುವು ದಾಖಲಿಸಿದೆ. ಎಂ.ಎಸ್.ಧೋನಿ ಬ್ಯಾಟಿಂಗ್ ಅಬ್ಬರದ ಮುಂದೆ ರೋಹಿತ್ ಶರ್ಮಾ ಪಡೆ ಮಂಕಾಯಿತು.

ಸೋಲುವ ಪಂದ್ಯದಲ್ಲಿ 3 ವಿಕೆಟ್‍ಗಳ ರೋಚಕ ಗೆಲುವು ಸಾಧಿಸುವ ಮೂಲಕ ಚೆನ್ನೈ ಸಂಭ್ರಮಿಸಿದರೆ, ಐಪಿಎಲ್ ಟೂರ್ನಿಯಲ್ಲಿಯೇ ಮೊದಲ ಬಾರಿಗೆ ಸತತ 7 ಸೋಲು ಕಾಣುವ ಮೂಲಕ ಮುಂಬೈ ಹೊಸ ದಾಖಲೆ ನಿರ್ಮಿಸಿತು.

ಧೋನಿಗೆ ಧೋನಿಯೇ ಸಾಟಿ!

ಸೋಲುವ ಪಂದ್ಯವನ್ನು ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ.ಎಸ್.ಧೋನಿ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಗೆಲ್ಲಿಸಿಕೊಟ್ಟರು. ಕೊನೆ ಓವರ್ ನಲ್ಲಿ ಚೆನ್ನೈ ಗೆಲುವಿಗೆ 16 ರನ್‍ಗಳ ಅವಶ‍್ಯಕತೆ ಇತ್ತು. ಒತ್ತಡ ಮುಕ್ತವಾಗಿ ಬ್ಯಾಟಿಂಗ್ ನಡೆಸಿದ ಧೋನಿ 13 ಎಸೆತಗಳಲ್ಲಿ ಅಜೇಯ 28 ರನ್‌ ಸಿಡಿಸಿ ಚೆನ್ನೈ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ಧೋನಿ​ ಕ್ರಿಕೆಟ್​ ಜಗತ್ತಿನ ಗ್ರೇಟ್​ ಫಿನಿಶರ್​ ಮಾತ್ರವಲ್ಲ ಅವರಿಗೆ ಅವರೇ ಸಾಟಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ರೋಚಕ ಗೆಲುವು ದಾಖಲಿಸಿದ ಚೆನ್ನೈ!

156 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ್ದ CSK ಆರಂಭಿಕ ಆಘಾತ ಅನುಭವಿಸಿತ್ತು. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಸೊನ್ನೆ ಸುತ್ತಿದರು. ರಾಬಿನ್ ಉತ್ತಪ್ಪ(30), ಮಧ್ಯಮ ಕ್ರಮಾಂಕದಲ್ಲಿ ಅಂಬಾಟಿ ರಾಯುಡು (40), ಧೋನಿ (ಅಜೇಯ 28) ಮತ್ತು ಡ್ವೇನ್‌ ಪ್ರಿಟೋರಿಯಸ್‌(22) ಉತ್ತಮ ಬ್ಯಾಟಿಂಗ್‍ನಿಂದ ಕೊನೆ ಓವರ್ ನ ಕೊನೆ ಎಸೆತದವರೆಗೂ ಹೋರಾಡಿ ವಿಜಯದ ನಗೆ ಬೀರಿತು. ಮುಂಬೈ ಪರ ಡೇನಿಯೆಲ್‌ ಸ್ಯಾಮ್ಸ್‌ 4 ವಿಕೆಟ್‌ ಕಬಳಿಸಿದರೆ, ಜಯದೇವ್ ಉನದ್ಕತ್ 2 ವಿಕೆಟ್ ಪೆಡದರು.

ಸ್ಪರ್ಧಾತ್ಮಕ ಮೊತ್ತ ಗಳಿಸಿದ್ದ ಮುಂಬೈ

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು. ಮುಂಬೈ ಪರ ತಿಲಕ್ ವರ್ಮಾ(51) ಆಕರ್ಷಕ ಅರ್ಧಶತಕ ಭಾರಿಸಿದರು. ಇನ್ನುಳಿದಂತೆ ಸೂರ್ಯಕುಮಾರ್ ಯಾದವ್(32), ಹೃತಿಕ್ ಶೋಕೀನ್(25), ಜಯದೇವ್ ಉನದ್ಕತ್(ಅಜೇಯ 19) ರನ್ ಗಳಿಸಿದರು. ಚೆನ್ನೈ ಪರ ಮುಖೇಶ್ ಚೌಧರಿ, 3, ಡ್ವೇನ್‌ ಬ್ರಾವೋ, 2, ಮಿಚೆಲ್‌ ಸ್ಯಾಂಟ್ನರ್‌ ಮತ್ತು ಮಹೀಶ್ ತೀಕ್ಷಣ ತಲಾ 1 ವಿಕೆಟ್‌ ಕಬಳಿಸಿದರು.

ಸತತ ಸೋಲಿನಲ್ಲಿ ಮುಂಬೈ ದಾಖಲೆ

ಐಪಿಎಲ್ ಇತಿಹಾಸದಲ್ಲಿಯೇ ತಂಡವೊಂದು ಸತತ 7 ಸೋಲು ಕಂಡಿರಲಿಲ್ಲ. ಇದೇ ಮೊದಲ ಬಾರಿ ಈ ದಾಖಲೆಯನ್ನು ಮುಂಬೈ ಇಂಡಿಯನ್ಸ್ ತನ್ನ ಹೆಸರಿಗೆ ಬರೆಸಿಕೊಂಡಿದೆ. 5 ಬಾರಿಯ ಐಪಿಎಲ್ ಚಾಂಪಿಯನ್ ತಂಡ ಮುಂಬೈ ಸತತ 7 ಸೋಲು ಕಾಣುವ ಮೂಲಕ ಭಾರೀ ಮುಖಭಂಗ ಅನುಭವಿಸಿದೆ. ಪ್ರಸಕ್ತ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಲು ಎಷ್ಟೇ ಹೋರಾಟ ನಡೆಸಿದರೂ ರೋಹಿತ್ ಪಡೆಗೆ ಅದೃಷ್ಟ ಪದೇ ಪದೇ ಕೈಕೊಡುತ್ತಿದೆ. ಈ ಸೋಲಿನ ಮೂಲಕ ಮುಂಬೈ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಬಹುತೇಕ ಹೊರಬಿದ್ದಂತಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News