ಫೆಬ್ರವರಿ 10, ಶುಕ್ರವಾರದಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ನಿರ್ಮಾಣದ ಆರನೇ ರಾಕೆಟ್ ಆದ, ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಎಸ್ಎಸ್ಎಲ್‌ವಿ-ಡಿ2) ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳಿಸಿತು. ಈ ಕಾರ್ಯಾಚರಣೆ ಇಒಎಸ್-07 ಭೂ ವೀಕ್ಷಣಾ ಉಪಗ್ರಹ ಮತ್ತು ಸ್ಟಾರ್ಟಪ್ ಸಂಸ್ಥೆಗಳು ತಯಾರಿಸಿರುವ ಇತರ ಎರಡು ಉಪಗ್ರಹಗಳಾದ ಜಾನುಸ್-1 ಹಾಗೂ ಆಜ಼ಾದಿಸ್ಯಾಟ್2 ಗಳನ್ನು 450 ಕಿಲೋಮೀಟರ್ ವ್ಯಾಪ್ತಿಯ ಭೂಮಿಯ ಕೆಳ ಕಕ್ಷೆಯಲ್ಲಿ ಜೋಡಿಸಲಿದೆ.
350 ಕೆಜಿಗಿಂತ ಹೆಚ್ಚು ಭಾರ ಹೊಂದಿರುವ ಪೇಲೋಡ್‌ಗಳನ್ನು ಹೊತ್ತು ಸಾಗಿದ ರಾಕೆಟ್ 15 ನಿಮಿಷಗಳ ಪ್ರಯಾಣದಲ್ಲಿ ಭೂಮಿಯ ಕೆಳಕಕ್ಷೆಯನ್ನು ತಲುಪಿತು.
ಉಡಾವಣೆಗೊಂಡ ಬಹುತೇಕ 13 ನಿಮಿಷಗಳ ಬಳಿಕ ಈ ಮೂರು ಹಂತಗಳ ರಾಕೆಟ್ ಇಒಎಸ್-07 ಉಪಗ್ರಹವನ್ನು ಕಕ್ಷೆಗೆ ಕಳುಹಿಸಿತು. ಅದಾಗಿ 1.6 ನಿಮಿಷಗಳ ಬಳಿಕ ಇತರ ಎರಡು ಉಪಗ್ರಹಗಳಾದ ಜಾನುಸ್-1 ಹಾಗೂ ಆಜಾ಼ದಿಸ್ಯಾಟ್‌ಗಳನ್ನು ಕಕ್ಷೆಗೆ ಕಳುಹಿಸಲಾಯಿತು.
ಇದನ್ನೂ ಓದಿ- ಬೆಂಗಳೂರಿನಲ್ಲಿ ಬಾಹ್ಯಾಕಾಶ ನೌಕೆ ತಯಾರಕ ಘಟಕ ಆರಂಭಿಸಿದ ಅನಂತ್ ಟೆಕ್ನಾಲಜೀಸ್
ಇದರ ಬೆನ್ನಲ್ಲೇ ಇಸ್ರೋ "ಎಸ್ಎಸ್ಎಲ್‌ವಿ-ಡಿ2/ಇಒಎಸ್-07 ಕಾರ್ಯಾಚರಣೆ ಯಶಸ್ವಿಯಾಗಿದೆ. ಎಸ್ಎಸ್ಎಲ್‌ವಿ-ಡಿ2 ಇಒಎಸ್-07, ಜಾನುಸ್-1 ಹಾಗೂ ಆಜಾ಼ದಿಸ್ಯಾಟ್-2 ಉಪಗ್ರಹಗಳನ್ನು ಅವುಗಳ ಉದ್ದೇಶಿತ ಕಕ್ಷೆಗೆ ಜೋಡಿಸಿದೆ" ಎಂದು ಟ್ವೀಟ್ ಮಾಡಿತು.
ಎಸ್ಎಸ್ಎಲ್‌ವಿ ರಾಕೆಟ್ ಅನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್‌ವಿ) ನಿಂದ ಜವಾಬ್ದಾರಿ ಪಡೆದುಕೊಳ್ಳಲು ಮತ್ತು ಸಣ್ಣ ಉಪಗ್ರಹಗಳ ಉಡಾವಣಾ ಉದ್ಯಮಕ್ಕೆ ಸೇವೆ ನೀಡಲು ನಿರ್ಮಿಸಲಾಗಿದೆ.
ಆರುವರೆ ಗಂಟೆಗಳ ಕೌಂಟ್ ಡೌನ್ ಪೂರ್ಣಗೊಂಡ ಬಳಿಕ, ಇಸ್ರೋ ನಿರ್ಮಿತ 34 ಮೀಟರ್ ಎತ್ತರದ ರಾಕೆಟ್ ಬೆಳಗ್ಗೆ 9:18ರ ಸುಮಾರಿಗೆ ಉಡಾವಣೆಗೊಂಡಿತು.
ಇಸ್ರೋ ಅಭಿವೃದ್ಧಿ ಪಡಿಸಿರುವ ಎಸ್ಎಸ್ಎಲ್‌ವಿ 500 ಕೆಜಿ ತೂಕ ಹೊಂದಿರುವ ಉಪಗ್ರಹಗಳನ್ನು ಬೇಡಿಕೆಗೆ ಅನುಗುಣವಾಗಿ ಭೂಮಿಯ ಕೆಳ ಕಕ್ಷೆಗೆ ಕೊಂಡೊಯ್ಯಲು ಸಮರ್ಥವಾಗಿದೆ. ಇದು ಕಡಿಮೆ ವೆಚ್ಚದಲ್ಲಿ ಉಡಾವಣೆ ನಡೆಸುವ ಅನುಕೂಲತೆಗಳನ್ನು ಒದಗಿಸುತ್ತದೆ. ಅದರೊಡನೆ ಇದನ್ನು ಅತ್ಯಂತ ಕ್ಷಿಪ್ರವಾಗಿ, ಅಂದರೆ 72 ಗಂಟೆಗಳೊಳಗೆ ಜೋಡಿಸಿ, ಸಿದ್ಧಗೊಳಿಸಬಹುದಾಗಿದೆ. ಇದು ಕನಿಷ್ಠ ಉಡಾವಣಾ ಸೌಕರ್ಯಗಳೊಡನೆ ಹಲವು ಉಪಗ್ರಹಗಳನ್ನು ಕೊಂಡೊಯ್ಯಬಲ್ಲದು. ಭೂ ವೀಕ್ಷಣಾ ಉಪಗ್ರಹ ಇಒಎಸ್-07 ಒಂದು 156.3 ಕೆಜಿಯ ಉಪಗ್ರಹವಾಗಿದ್ದು, ಇದನ್ನು ಇಸ್ರೋ ಸಂಸ್ಥೆ ನಿರ್ಮಿಸಿದೆ.
ಇದನ್ನೂ ಓದಿ- ಇಸ್ರೋದಿಂದ ಹೊಸ ಮೈಲಿಗಲ್ಲು: ಒಂದೇ ಬಾರಿಗೆ Oceansat-3 ಸೇರಿದಂತೆ 9 ಉಪಗ್ರಹಗಳು ಉಡಾವಣೆ
ಎಸ್ಎಸ್ಎಲ್‌ವಿ ನೂತನ ಪ್ರಯೋಗಗಳಾದ ಎಂಎಂ-ವೇವ್ ಹ್ಯುಮಿಡಿಟಿ ಸೌಂಡರ್, ಸ್ಪೆಕ್ಟ್ರಮ್ ಮಾನಿಟರಿಂಗ್ ಪೇಲೋಡ್‌ಗಳನ್ನು ಒಳಗೊಂಡಿದೆ.
ಜಾನುಸ್-1 ಉಪಗ್ರಹ 10.2 ಕೆಜಿ ಭಾರ ಹೊಂದಿದೆ. ಆಜ಼ಾದಿಸ್ಯಾಟ್-2 ಉಪಗ್ರಹವನ್ನು ದೇಶಾದ್ಯಂತ 750 ವಿದ್ಯಾರ್ಥಿನಿಯರು ಚೆನ್ನೈ ಮೂಲದ ಸ್ಪೇಸ್ ಕಿಡ್ಸ್ ಸಂಸ್ಥೆಯ ಮಾರ್ಗದರ್ಶನದಲ್ಲಿ ನಿರ್ಮಿಸಿದ್ದಾರೆ. ಈ ಉಪಗ್ರಹ 8.7 ಕೆಜಿ ತೂಕ ಹೊಂದಿದೆ.
ಎಸ್ಎಸ್ಎಲ್‌ವಿ ಮೊದಲ ಬಾರಿಗೆ ಆಗಸ್ಟ್ 7, 2022ರಂದು ಉಡಾವಣೆಗೊಂಡಿತ್ತು. ಆದರೆ ಆ ಪ್ರಯತ್ನದಲ್ಲಿ ರಾಕೆಟ್‌ನ ಆರ್ಬಿಟ್ ಕಳಚಿಕೊಂಡು, ತನ್ನ ಉದ್ದೇಶಿತ ಪಥವನ್ನು ತಪ್ಪಿಸಿಕೊಂಡ ಕಾರಣ ವೈಫಲ್ಯ ಅನುಭವಿಸಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.