ನವದೆಹಲಿ: ಭಾರತ ಮೂಲದ ಅಮೆರಿಕದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸೇರಿದಂತೆ ಮೂವರು ಅರ್ಥಶಾಸ್ತ್ರಜ್ಞರಿಗೆ 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
ಜಾಗತಿಕ ಬಡತನ ನಿವಾರಿಸಲು ಕೈಗೊಂಡ ಪ್ರಾಯೋಗಿಕ ಅಧ್ಯಯನವನ್ನು ಪರಿಗಣಿಸಿ ಸ್ವಿಡಿಶ್ ಅಕಾಡೆಮಿಯು ಅಭಿಜಿತ್ ಬ್ಯಾನರ್ಜಿ, ಫ್ರೆಂಚ್-ಅಮೇರಿಕಾದ ಪ್ರಜೆ ಎಸ್ತರ್ ಡುಫ್ಲೋ ಮತ್ತು ಅಮೆರಿಕದ ಮೈಕೆಲ್ ಕ್ರೆಮರ್ ಅವರನ್ನು ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಿ ಘೋಷಿಸಿದೆ. ಪ್ರಶಸ್ತಿಯ ಬಹುಮಾನವಾಗಿ ಒಂಬತ್ತು ಮಿಲಿಯನ್ ಸ್ವೀಡಿಷ್ ಕ್ರೋನಾ ಘೋಷಿಸಲಾಗಿದ್ದು, ಮೂವರು ವಿಜೇತರಿಗೆ ಸಮನಾಗಿ ಹಂಚಿಕೆಯಾಗಲಿದೆ.
ಅಮೆರಿಕದ ಎಂಐಟಿ ಅಭಿಜಿತ್ ಬ್ಯಾನರ್ಜಿ ಅವರು ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಎರಡನೇ ಭಾರತೀಯ ಅರ್ಥಶಾಸ್ತ್ರಜ್ಞ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಅರ್ಥಶಾಸ್ತ್ರ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ಅಮರ್ತ್ಯ ಸೇನ್ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು.
2019 Economic Sciences Laureates Abhijit Banerjee and Esther Duflo, often with Michael Kremer, soon performed similar studies of other issues and in other countries, including India. Their experimental research methods now entirely dominate development economics.#NobelPrize
— The Nobel Prize (@NobelPrize) October 14, 2019
ಅಭಿಜಿತ್ ಬ್ಯಾನರ್ಜಿ (58)
ಯುಎಸ್ ನ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ ಯ ಪ್ರಾಧ್ಯಾಪಕರಾದ 58 ವರ್ಷದ ಅಭಿಜಿತ್ ಬ್ಯಾನರ್ಜಿ ಮೂಲತಃ ಭಾರತದ ಪಶ್ಚಿಮ ಬಂಗಾಳದವರು. ಫೆಬ್ರವರಿ 21, 1961ರಲ್ಲಿ ಮುಂಬೈನಲ್ಲಿ ಜನಿಸಿದ ಬ್ಯಾನರ್ಜಿ ಅವರ ತಂದೆ ಮತ್ತು ತಾಯಿ ಇಬ್ಬರೂ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಕೋಲ್ಕತ್ತಾದ ಸೌತ್ ಪಾಯಿಂಟ್ ಶಾಲೆ ಮತ್ತು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಬ್ಯಾನರ್ಜಿ ಅರ್ಥಶಾಸ್ತ್ರ ಪದವಿ ಪಡೆದರು. ಬಳಿಕ 1983ರಲ್ಲಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದು, ಬಳಿಕ ಹೋವರ್ಡ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು.
ಎಸ್ಥರ್ ಡಫ್ಲೋ (47)
ಪ್ಯಾರಿಸ್ನಲ್ಲಿ ಜನಿಸಿದ ಎಸ್ಥರ್ ಡುಫ್ಲೋ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಎಂಐಟಿಯಿಂದ ಪಿಎಚ್‌ಡಿ ಕೂಡ ಮಾಡಿದ್ದಾರೆ. ಮತ್ತೊಂದು ವಿಶೇಷವೆಂದರೆ 2015ರಲ್ಲಿ ಅಭಿಜಿತ್ ಬ್ಯಾನರ್ಜಿಯನ್ನು ಎಸ್ತರ್ ಡುಫ್ಲೋ ವಿವಾಹವಾಗಿದ್ದು, ಇದೀಗ ಪತಿ-ಪತ್ನಿ ಇಬ್ಬರಿಗೂ ನೊಬೆಲ್ ಪ್ರಶಸ್ತಿ ಲಭಿಸಿದೆ.
ಮೈಕೆಲ್ ಕ್ರಾಮರ್ (55)
ಮೈಕೆಲ್ ಕ್ರಾಮರ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದು, ಅದೇ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಮಾಡಿದ್ದಾರೆ.