ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಲೀಗಲ್ ನೋಟಿಸ್!

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ 10 ಪರ್ಸೆಂಟ್ ಸರ್ಕಾರ, ಸೀದಾ ರುಪಯ್ಯಾ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಆರೋಪಿಸಿದ್ದರು.

Last Updated : May 7, 2018, 06:11 PM IST
ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಲೀಗಲ್ ನೋಟಿಸ್! title=

ಬೆಂಗಳೂರು: '10 ಪರ್ಸೆಂಟ್ ಸಿದ್ದರಾಮಯ್ಯ', 'ಸೀದಾ ರುಪಯ್ಯ ಸರ್ಕಾರ' ಎಂದು ತಮ್ಮ ವಿರುದ್ಧ ಮಾಡಿದ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದಾರೆ. 

ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮಾಹಿತಿ ನೀಡಿದ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರು, ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ 40 ಲಕ್ಷ ರೂ. ಮೌಲ್ಯದ ವಾಚ್ ಸ್ವೀಕರಿಸಿದ್ದಾರೆ, 10 ಪರ್ಸೆಂಟ್  ಸಿದ್ದರಾಮಯ್ಯ, ಯೋಜನೆಗಳ ಅನುಮೋದನೆಗಾಗಿ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ, ವಿದೇಶಿ ಉದ್ಯಮಿಯೊಬ್ಬರಿಂದ 70 ಲಕ್ಷ ರೂ. ಮೌಲ್ಯದ ಹ್ಯೂಬ್ಲಟ್ ವಾಚ್ ನ್ನು  ಪಡೆದಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಟ್ವೀಟರ್ ಮೂಲಕ ಆರೋಪಿಸಿದ್ದರೆ, ಮತ್ತೊಂದೆಡೆ  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ 10 ಪರ್ಸೆಂಟ್ ಸರ್ಕಾರ, ಸೀದಾ ರುಪಯ್ಯಾ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಉಡುಪಿಯಲ್ಲಿ ನಡೆದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಆರೋಪಿಸಿದ್ದರು.

ಈ ಎಲ್ಲಾ ಆರೋಪಗಳನ್ನು ಬಹಳ ಗಂಭಿರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅತ್ಯಂತ ಉನ್ನತ ಹುದ್ದೆಯಲ್ಲಿರುವ ಪ್ರಧಾನಿ ಮೋದಿ ಅವರು ಕೆಳಮಟ್ಟದ ಮಾತುಗಳನ್ನಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಪ್ರಧಾನಿ ಮೋದಿಗೆ ಲೀಗಲ್ ನೋಟಿಸ್ ನೀಡಿದ್ದೇವೆ. ಹಾಗಾಗಿ ಮೋದಿ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದರೆ ಸಿವಿಲ್, ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಉಗ್ರಪ್ಪ ಹೇಳಿದರು.

Trending News