ಬೆಂಗಳೂರು : ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ತಮಿಳು ನಟ ರಜನಿಕಾಂತ್ ಹಾಗೂ ಕಮಲ್ ಹಾಸನ್ ಸಿನಿಮಾಗಳ ಪ್ರದರ್ಶನವನ್ನು ರಾಜ್ಯದಲ್ಲಿ ನಿಷೇಧಿಸಲು ನಿರ್ಧರಿಸಲಾಗಿದೆ.
ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಹೇಳಿಕೆ ನೀಡಿದ್ದು, ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರು ರಾಜಕೀಯ ಪಕ್ಷಗಳನ್ನು ಕಟ್ಟಿ ತಮಿಳುನಾಡು ರಾಜಕೀಯ ರಂಗಕ್ಕೆ ಕಾಲಿಟ್ಟಿದ್ದಾರೆ. ಹಾಗಾಗಿ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಪರ ಸಂಘಟನೆಗಳನ್ನು, ನಿರ್ಧಾರಗಳನ್ನು ಅವರು ಬೆಂಬಲಿಸುವುದು ಸರಿ. ಆದರೆ, ಕರ್ನಾಟಕದವರೇ ಆದ ರಜನಿಕಾಂತ್ ಕರ್ನಾಟಕದ ವಿರುದ್ಧ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಹಾಗಾಗಿ ಈ ಇಬ್ಬರು ನಟರ ಸಿನಿಮಾಗಳನ್ನು ರಾಜ್ಯದಲ್ಲಿ ಪ್ರದರ್ಶಿಸದಂತೆ ನಿಷೇದ ಹೇರಲಾಗಿದೆ ಎಂದಿದ್ದಾರೆ.
ಈಗಾಗಲೇ ಚಲನಚಿತ್ರ ವಿತರಕರಿಗೆ ಕಮಲಹಾಸನ್ ಮತ್ತು ರಜನಿಕಾಂತ್ ಚಿತ್ರಗಳನ್ನು ಖರೀದಿಸದಂತೆ ಸೂಚನೆ ನೀಡಲಾಗಿದೆ. ಹಾಗೆಯೇ ಚಲನಚಿತ್ರ ಮಂದಿರಗಳಲ್ಲಿ ಈ ನಟರ ಚಿತ್ರ ಪ್ರದರ್ಶಿಸದಂತೆ ಪ್ರದರ್ಶಕರನ್ನು ಕೋರಲಾಗಿದ್. ಒಂದು ವೇಳೆ ಪ್ರದರ್ಶಿಸಿದರೆ ಹೋರಾಟ ನಡೆಸುವುದಾಗಿಯೂ ಸಾ.ರಾ.ಗೋವಿಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಕನ್ನಡಪರ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ಕಾವೇರಿ ನಿರು ಹಂಚಿಕೆಗೆ ಸಮಬಂಧಿಸಿದಂತೆ ಕರ್ನಾಟಕ ವಿರೋಧಿ ಹೇಳಿಕೆ ನೀಡುತ್ತಿರುವ ರಜನಿಕಾಂತ್ ಹಾಗೂ ಕಮಲಹಾಸನ್ ಸಿನಿಮಾಗಳ ಪ್ರದರ್ಶನವನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ನಟ ರಜನಿಕಾಂತ್ ‘ಸಿನಿಮಾ ಕರ್ನಾಟಕದಲ್ಲಿ ಪ್ರದರ್ಶನಗೊಳ್ಳುವ ಬಗ್ಗೆ ಚಿತ್ರದ ನಿರ್ಮಾಪಕರು, ವಿತರಕರು ಹಾಗೂ ಕರ್ನಾಟಕದ ರಾಜ್ಯ ಸರ್ಕಾರದವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಿನಿಮಾ ಪ್ರದರ್ಶನವನ್ನು ನಿಷೇಧಿಸುವ ನಿರ್ಧಾರವನ್ನು ಕರ್ನಾಟಕದ ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂಬ ನಂಬಿಕೆ ನನಗಿದೆ’ ಎಂದಿದ್ದರು.
ಈ ಸಂಬಂಧ ಪ್ರತಿಕ್ರಿಯಿಸಿದ ಸಾ.ರಾ.ಗೋವಿಂದು ಅವರು, "ಸಿನಿಮಾ ಪ್ರದರ್ಶನದ ಬಗ್ಗೆ ರಾಜ್ಯ ಸರ್ಕಾರ, ನಿರ್ಮಾಪಕರು ಹಾಗೂ ವಿತರಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಲು ಅವರ್ಯರು? ನಾವು ಕಮಲ್ ಹಾಗು ರಜನಿ ಸಿನಿಮಾಗಳನ್ನು ರಾಜ್ಯದಲ್ಲಿ ಪ್ರದರ್ಶನ ಮಾಡಬಾರದು ಎಂದು ನಿರ್ಧಾರ ತೆಗೆದುಕೊಂಡಿದ್ದೇವೆ. ಹಾಗೆಯೇ ಅವರ ರಾಜಕೀಯ ಪಕ್ಷಗಳು ಕರ್ನಾಟಕದಲ್ಲಿ ನೆಲೆಯೂರಲು ನಾವು ಬಿಡುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ನಾಳೆ(ಏ.12) ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕಲು ಕನ್ನಡಪರ ಸಂಘಟನೆಗಳು ನಿರ್ಧರಿಸಿದ್ದು, ಇದಕ್ಕೆ ಕನ್ನಡ ಚಿತ್ರರಂಗ ಕೂಡ ಬೆಂಬಲ ಸೂಚಿಸಿದೆ.