Oscars 2023 : ವಿಶ್ವದ ಅತಿ ದೊಡ್ಡ ಸಿನಿಮಾ ಕ್ಷೇತ್ರದ ಪ್ರಶಸ್ತಿ ಆಸ್ಕರ್. ಅದರಲ್ಲೂ ಈ ಬಾರಿಯ ಆಸ್ಕರ್ ಅವಾರ್ಡ್ ಪ್ರತಿ ಭಾರತೀಯನಿಗೂ ವಿಶೇಷವಾಗಿತ್ತು. ನಿನ್ನೆ ನಡೆದ ಅವಾರ್ಡ್ ಸಮಾರಂಭದಲ್ಲಿ ಭಾರತ 2 ಆಸ್ಕರ್ ಪ್ರಶಸ್ತಿಗಳನ್ನು ಗೆದ್ದು ಬೀಗಿದೆ. ಅದರಲ್ಲೂ ಆ ಎರಡು ಪ್ರಶಸ್ತಿ ಬಂದಿದ್ದು, ಸೌತ್ ಸಿನಿಮಾಗಳಿಗೆ ಎಂಬುದು ಮತ್ತಷ್ಟೂ ವಿಶೇಷ. ಆದರೆ ಈ ಎಲ್ಲದರ ನಡುವೆ ಕೆಲ ಸಂಗತಿಗಳು ನಿನ್ನೆಯ ಆಸ್ಕರ್ ಸಮಾರಭದಲ್ಲಿ ಹೈಲೈಟ್ ಆಗಿವೆ. ಅವುಗಳನ್ನು ಕನ್ನಡಿಗರು ಗರ್ವದಿಂದ ಹೇಳಿಕೊಳ್ಳಬಹುದು.
ಕರ್ನಾಟಕಕ್ಕೆ ಹೆಮ್ಮೆ ಏಕೆ ಗೊತ್ತಾ?
ಈ ಬಾರಿಯ ಆಸ್ಕರ್ 2023 ಕರುನಾಡಿಗೆ ತುಂಬಾ ಸ್ಪೆಷಲ್. ಈಗ ನಿಮ್ಮೆಲ್ಲರ ತಲೆಯಲ್ಲೂ ಯಾಕೆ ಎಂಬ ಪ್ರಶ್ನೆ ಮೂಡಿರಲೇ ಬೇಕು. ಇದಕ್ಕೆ ಉತ್ತರ ಈ ಇಲ್ಲಿದೆ.
ನಟಿ ದೀಪಿಕಾ ಪಡುಕೋಣೆ:
ನಿನ್ನೆ ಆಸ್ಕರ್ ಸಮಾರಂಭದಲ್ಲಿದ್ದ ಅನೇಕ ಸ್ಟಾರ್‌ಗಳಿಗೂ ಕರುನಾಡಿಗೂ ಒಂದು ನಂಟಿದೆ. ಆಸ್ಕರ್ 2023ರ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ನಟಿ ದೀಪಿಕಾ ಪಡುಕೋಣೆ, ಭಾರತೀಯ ಚಿತ್ರರಂಗಕ್ಕೆ ಹೊಸ ಹಿರಿಮೆ ತಂದು ಕೊಟ್ಟಿದ್ದಾರೆ. ಇಲ್ಲಿಂದಲೇ ಆರಂಭವಾಗುತ್ತೆ ನಮ್ಮ ಕರುನಾಡಿನ ನಂಟು. ದೀಪಿಕಾ ಪಡುಕೋಣೆ ಮಂಗಳೂರು ಮೂಲದವರು. ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲ್ ಆಗಿದ್ದರು. 2006 ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕನ್ನಡ ಸಿನಿಮಾ ʻಐಶ್ವರ್ಯʼ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು.
ಇದನ್ನೂ ಓದಿ : Deepika Padukone Tattoo: ರಣವೀರ್ ಅಲ್ಲ.. ಹಾಗಾದ್ರೆ ದೀಪಿಕಾ ಕಿವಿ ಹಿಂದಿರುವ ಟ್ಯಾಟೂ ಹೆಸರು ಯಾರದ್ದು?
ಆರ್‌ಆರ್‌ಆರ್ ಗೂ ಕರುನಾಡ ಬಂಧ :
ಆರ್‌ಆರ್‌ಆರ್‌ನ 'ನಾಟು ನಾಟು' ಹಾಡು ಇತ್ತೀಚಿನ ದಿನಗಳಲ್ಲಿ ಅನೇಕ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪ್ರಶಸ್ತಿಗಳನ್ನು ತಂದಿದೆ. 'ನಾಟು ನಾಟು' ನಿನ್ನೆ ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪಡೆದಿದೆ. ಈ ಸಿನಿಮಾದ ಅನೇಕ ಸ್ಟಾರ್‌ಗಳಿಗೂ ಕರುನಾಡ ಬಂಧವಿದೆ.
ನಿರ್ದೇಶಕ ರಾಜಮೌಳಿ :
RRR ಸಿನಿಮಾದ ನಿರ್ದೇಶಕ ರಾಜಮೌಳಿ ಅವರಿಗೂ ಸಹ ಕರ್ನಾಟಕದ ನಂಟಿದೆ. ಇವರು ಹುಟ್ಟಿದ್ದೇ ಕರ್ನಾಟಕದಲ್ಲಿ. ರಾಯಚೂರು ಜಿಲ್ಲೆಯ ಮಾನ್ವಿ ಬಳಿಯ ಅಮರೇಶ್ವರ ಕ್ಯಾಂಪ್‌ನಲ್ಲಿ ರಾಜಮೌಳಿ ಜನಿಸಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಹಾಗೂ ತಾಯಿ ರಾಜ ನಂದಿನಿ ಆಂಧ್ರದಲ್ಲಿ ಭೂಮಿ ಕಳೆದುಕೊಂಡ ಬಳಿಕ ಕೆಲ ಕಾಲ ಕರ್ನಾಟಕದಲ್ಲಿ ನೆಲೆಸಿದ್ದರು. ತಾವು ಹುಟ್ಟಿದ ರಾಯಚೂರು ಬಗ್ಗೆ ರಾಜಮೌಳಿ ವಿಶೇಷ ಗೌರವ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಮೌಳಿ ಅವರನ್ನು ರಾಯಚೂರು ಜಿಲ್ಲೆಯ ಚುನಾವಣಾ ರಾಯಭಾರಿಯನ್ನಾಗಿ ಈ ಬಾರಿ ಆಯ್ಕೆ ಮಾಡಲಾಗಿದೆ.
ಜೂನಿಯರ್ ಎನ್‌ಟಿಆರ್ :
ಈ ಸಿನಿಮಾದ ನಾಯಕ ನಟರಲ್ಲಿ ಒಬ್ಬರಾದ ಜೂನಿಯರ್ ಎನ್‌ಟಿಆರ್ ಆಗಾಗ ಕನ್ನಡದ ಮೇಲೆ ತಮಗಿರುವ ವಿಶೇಷ ಪ್ರೀತಿಯನ್ನು ಬಹಿರರಂಗಪಡಿಸುತ್ತಲೇ ಇರುತ್ತಾರೆ. ಅನೇಕ ವೇದಿಕೆಗಳಲ್ಲಿ ಅವರು ಈ ವಿಚಾರವನ್ನು ಹೇಳಿಕೊಂಡಿದ್ದುಂಟು. ಇವರಿಗೂ ಕೂಡ ಕರ್ನಾಟಕದ ವಿಶೇಷ ನಂಟಿದೆ. ಜೂನಿಯರ್ ಎನ್‌ಟಿಆರ್ ಅವರ ತಾಯಿ ಕರ್ನಾಟಕದ ಕುಂದಾಪುರದವರು ಎಂಬುದು ಸ್ಪೆಷಲ್ ವಿಚಾರ. ಇದೇ ಕಾರಣಕ್ಕೆ ಜೂನಿಯರ್ ಎನ್‌ಟಿಆರ್ ಕೂಡ ಅಚ್ಚುಕಟ್ಟಾಗಿ ಕನ್ನಡ ಮಾತನಾಡುತ್ತಾರೆ.
ಇದನ್ನೂ ಓದಿ : Oscars 2023 Winner: ʻನಾಟು ನಾಟುʼ ಹಾಡಿಗೆ ಆಸ್ಕರ್ ಪ್ರಶಸ್ತಿ, ಇತಿಹಾಸ ಸೃಷ್ಟಿಸಿದ RRR
ಸಂಗೀತ ನಿರ್ದೇಶಕ ಎಂಎಂ ಕೀರವಾಣಿ:
ಸದ್ಯ ಎಲ್ಲೆಲ್ಲೂ ನಾಟು ನಾಟು ಹಾಡಿನದ್ದೇ ಹವಾ. ಈ ಹಾಡಿನ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಖ್ಯಾತಿ ವಿಶ್ವದೆಲ್ಲೆಡೆ ಹಬ್ಬಿದೆ. ಕೀರವಾಣಿ ತೆಲುಗಿನ ಜೊತೆಗೆ ಹಿಂದಿ, ತಮಿಳು ಮತ್ತು ಕನ್ನಡದ ಸಿನಿಮಾಗಳಿಗೂ ಕೆಲಸ ಮಾಡಿದ್ದಾರೆ ಎಂಬುದು ಸ್ಪೆಷಲ್. ಸ್ಯಾಂಡಲ್ವುಡ್ ಸಿನಿಮಾಗಳಿಗೆ ಸಹ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ಎಂ ಎಂ ಕೀರವಾಣಿ ಅಳಿಮಯ್ಯ, ಅಪ್ಪಾಜಿ, ಭೈರವ, ಸ್ವಾತಿ, ಕರ್ನಾಟಕ ಸುಪುತ್ರ, ದೀಪಾವಳಿ, ಜಮೀನ್ದಾರ್ರು ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.
ಲಹರಿ ಮ್ಯೂಸಿಕ್ :
ಎಸ್ ಎಸ್ ರಾಜಮೌಳಿಯವರ RRR ನ ನಾಟು ನಾಟು ಹಾಡಿನ ಹಕ್ಕುಗಳನ್ನು ಪಡೆದವರು ಲಹರಿ ಮ್ಯೂಸಿಕ್. ಇಬ್ಬರು ಸಹೋದರರಾದ ಜಿ ಮನೋಹರನ್ ನಾಯ್ಡು ಮತ್ತು ಜಿ ತುಳಸಿರಾಮ್ ಲಹರಿವೇಲು ಈ ಮ್ಯೂಸಿಕ್ ಲೇಬಲ್ ಅನ್ನು ಮುನ್ನಡೆಸುತ್ತಿದ್ದಾರೆ. ಈ ಇಬ್ಬರೂ ಸಹೋದರರು ಬೆಂಗಳೂರಿನವರಾಗಿದ್ದು, ಇಂತಹ ಅತ್ಯುನ್ನತ ಪ್ರಶಸ್ತಿ ಪಡೆಯುವಲ್ಲಿ ಇವರ ಪಾತ್ರವೂ ಮಹತ್ವದ್ದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.