ಬೆಂಗಳೂರು: ಭಾರತ ಚಲನಚಿತ್ರ ಕಂಡ ಅತ್ಯುತ್ತಮ ಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಮಣಿರತ್ನಂ (Mani Ratnam ) ಅವರಿಗೆ ಇಂದು 64 ನೇ ಹುಟ್ಟುಹಬ್ಬದ ಸಂಭ್ರಮ. ಇಂತಹ ಸಂದರ್ಭದಲ್ಲಿ ಅವರು ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದು ಹೇಗೆ? ಎನ್ನುವುದರ ಕುರಿತಾಗಿ ತಿಳಿಯೋಣ.
ರಾವಣ್, ಗುರು, ದಿಲ್ ಸೇ, ಇರುವರ್' ಅಂತಹ ಹಿಟ್ ಸಿನಿಮಾಗಳನ್ನು ಭಾರತೀಯ ಚಲನ ಚಿತ್ರರಂಗಕ್ಕೆ ನೀಡಿರುವ ಮಣಿರತ್ನಂ, ಕನ್ನಡದ ಮೂಲಕ ಸಿನಿ ಪ್ರಪಂಚಕ್ಕೆ ಕಾಲಿಟ್ಟಿದ್ದರು ಎನ್ನುವುದು ನಿಜಕ್ಕೂ ನಮಗೆಲ್ಲ ಹೆಮ್ಮೆಯ ಸಂಗತಿ. ಇದುವರೆಗೆ ಅವರು ಸುಮಾರು 26 ಸಿನಿಮಾಗಳನ್ನು ತಮ್ಮದೇ ಪ್ರೊಡಕ್ಷನ್ ಕಂಪನಿಯಾಗಿರುವ ಮದ್ರಾಸ್ ಟಾಕೀಸ್ ಅಡಿಯಲ್ಲಿ ನಿರ್ದೇಶಿಸಿದ್ದಾರೆ. ಅಚ್ಚರಿ ಸಂಗತಿ ಎಂದರೆ ಆರಂಭದಲ್ಲಿ ಯಾವುದೇ ಸಿನಿಮಾ ಕುರಿತ ತರಬೇತಿಯನ್ನು ಪಡೆಯದೇ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು.
ಸಂದರ್ಶನವೊಂದರಲ್ಲಿ ಮಣಿರತ್ನಂ ಹೇಳುವಂತೆ ಶಿವಾಜಿ ಗಣೇಶನ್ ಹಾಗೂ ನಾಗೇಶ್ ರಂತಹ ಮಹಾನ್ ನಟರ ಸಿನಿಮಾಗಳನ್ನು ನೋಡುವುದರ ಮೂಲಕ ಸಿನಿಮಾ ಆಸಕ್ತಿಯನ್ನು ಬೆಳೆಸಿಕೊಂಡರು.ಮದ್ರಾಸ್ ವಿವಿಯ ಅಡಿಯಲ್ಲಿ ಬರುವ ರಾಮ್ ಕೃಷ್ಣ ಮಿಶನ್ ವಿವೇಕಾನಂದ ಕಾಲೇಜ್ ನಲ್ಲಿ ವಾಣಿಜ್ಯ ಪದವಿಯನ್ನು ಪಡೆದು ಮುಂದೆ ಅವರು ಮುಂಬೈನಲ್ಲಿ ಎಂಬಿಎ ಶಿಕ್ಷಣವನ್ನು ಪಡೆದರು.ತದನಂತರ ಅವರು ಬಾಲ ಚಂದರ್ ಅವರ ಗರಡಿಯಲ್ಲಿ ಪಳಗುವ ಮೂಲಕ ಅಧಿಕೃತವಾಗಿ 1983 ರಲ್ಲಿ ಕನ್ನಡ ಚಲನಚಿತ್ರ ಪಲ್ಲವಿ ಅನುಪಲ್ಲವಿ ನಿರ್ದೇಶಿಸಿದರು.ವಿಶೇಷವೆಂದರೆ ಈ ಚಿತ್ರ ಬಾಲಿವುಡ್ ನಟ ಅನಿಲ್ ಕಪೂರ್ ಗೆ ಕೂಡ ಚೊಚ್ಚಲ ಕನ್ನಡ ಚಿತ್ರವಾಗಿತ್ತು. ಚಿತ್ರ ವಿಮರ್ಶಕರ ಮೆಚ್ಚುಗೆ ಪಡೆದ ಈ ಸಿನಿಮಾ ಮುಂದೆ ಮಣಿರತ್ಮ ಅವರಿಗೆ ಚಿತ್ರರಂಗದಲ್ಲಿ ಅಡಿಪಾಯ ಹಾಕಿತು ಎಂದೇ ಹೇಳಬಹುದು.