ಚಂದನವನದಲ್ಲಿ ಮಿಂಚಿ ಮರೆಯಾದ ಸಂಗೀತ ಮಾಂತ್ರಿಕ ಟಿ.ಜಿ.ಲಿಂಗಪ್ಪ

1945 ರಲ್ಲಿ ಸಂಗೀತ ನಿರ್ದೇಶಕ ಆರ್‌ ಸುದರ್ಶನ್‌ ಅವರ ಮಾರ್ಗದರ್ಶನದಲ್ಲಿ ಶ್ರೀವಲ್ಲಿ ಎಂಬ ಚಿತ್ರಕ್ಕೆ ವಾದ್ಯಗಳನ್ನು ನುಡಿಸಿದ್ರು. ಈ ನಡೆವೆ ತಮಿಳು ಸಿನಿಮಾ ರಂಗದ ಸಂಗೀತ ನಿರ್ದೇಶಕರಾದ ಜಿ. ರಾಮನಾಥನ್‌, ಎಸ್‌.ವಿ. ವೆಂಕಟರಾಮಣ್‌ ಹಾಗೂ ಕೆ.ವಿ. ಮಹಾದೇವನ್‌ ಅವರ ಪರಿಚಯವೂ ಬೆಳೆಯಿತು.. 1951ರಲ್ಲಿ ಟಿ.ಆರ್‌. ಮಹಾಲಿಂಗಂ ಅವರ ʻಮಹಾ ಸುಂದರಂʼ ಎಂಬ ಚಿತ್ರದಲ್ಲಿ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಬೆಳಕಿಗೆ ಬಂದರು. 

Written by - Ananth Uppar | Edited by - Manjunath N | Last Updated : Jan 20, 2023, 05:18 PM IST
  • 1945 ರಲ್ಲಿ ಸಂಗೀತ ನಿರ್ದೇಶಕ ಆರ್‌ ಸುದರ್ಶನ್‌ ಅವರ ಮಾರ್ಗದರ್ಶನದಲ್ಲಿ ಶ್ರೀವಲ್ಲಿ ಎಂಬ ಚಿತ್ರಕ್ಕೆ ವಾದ್ಯಗಳನ್ನು ನುಡಿಸಿದ್ರು.
  • ಈ ನಡೆವೆ ತಮಿಳು ಸಿನಿಮಾ ರಂಗದ ಸಂಗೀತ ನಿರ್ದೇಶಕರಾದ ಜಿ. ರಾಮನಾಥನ್‌, ಎಸ್‌.ವಿ. ವೆಂಕಟರಾಮಣ್‌ ಹಾಗೂ ಕೆ.ವಿ. ಮಹಾದೇವನ್‌ ಅವರ ಪರಿಚಯವೂ ಬೆಳೆಯಿತು.
  • 1951ರಲ್ಲಿ ಟಿ.ಆರ್‌. ಮಹಾಲಿಂಗಂ ಅವರ ʻಮಹಾ ಸುಂದರಂʼ ಎಂಬ ಚಿತ್ರದಲ್ಲಿ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಬೆಳಕಿಗೆ ಬಂದರು.
ಚಂದನವನದಲ್ಲಿ ಮಿಂಚಿ ಮರೆಯಾದ ಸಂಗೀತ ಮಾಂತ್ರಿಕ ಟಿ.ಜಿ.ಲಿಂಗಪ್ಪ title=
Photo Courtsey: Wikipedia Commons

ಸ್ವಾಮಿ ದೇವನೆ ಲೋಕ ಪಾಲನೆ.... ಬಾಮೆಯ ನೋಡಲು ತಾ ಬಂದ.... ಅಮರ ಮಧುರ ಪ್ರೇಮ.. ನೀ ಬಾ ಬೇಗ ಚಂದಮಾಮ.., ಈ ಹಾಡುಗಳನ್ನು ಕೇಳುವಾಗ ಕಿವಿ ನಿಮಿರುತ್ತದೆ. ಇಂತಹ ಮಧುರ ಹಾಡುಗಳಿಂದ ಕರ್ಣ ಪುನೀತ ಅಂತ ಮಾತಾಡ್ಕೊತೀವಿ.. ಇಂತಹ ಅದ್ಭುತ ಗೀತೆಗಳಿಗೆ ಸಂಗೀತಯ ಸುಧೆ ಹರಿಸಿ ಮಾಧುರ್ಯ ತುಂಬಿದ ಖ್ಯಾತ ಸಂಗೀತ ನಿರ್ದೇಶಕ ಟಿ.ಜಿ ಲಿಂಗಪ್ಪ ಅವರು.. 

ಕನ್ನಡ ಚಿತ್ರರಂಗದ ಹಳೆಯ ತಲೆಮಾರಿನ ಸಂಗೀತ ನಿರ್ದೇಶಕರಲ್ಲಿ ಟಿ.ಜಿ. ಲಿಂಗಪ್ಪ ಅಗ್ರಗಣ್ಯರು.. 1950ರ ದಶಕದಿಂದ ಸುಮಾರು 80 ದಶಕದವರೆಗೆ ಕನ್ನಡ ಮಾತ್ರವ್ಲಲ.. ತಮಿಳು, ತೆಲುಗು, ಚಿತ್ರಗಳಿಗೆ ಸಂಗೀತ ನೀಡಿದ ಹೆಗ್ಗಳಿಕೆ ಟಿ.ಜಿ. ಲಿಂಗಪ್ಪ ಅವರಿಗೆ ಸಲ್ಲುತ್ತದೆ.. ಸಂಗೀತವನ್ನೇ ಬದುಕಾಗಿಸಿಕೊಂಡಿದ್ದ ಇವರಿಗೆ ಎಳೆವಯಸಿನಿಂದಲೂ ಸಂಗೀತ ಅಂದ್ರೆ ಹುಚ್ಚು. ಬಾಲಕನಿದ್ದಾಗ ಹಾರ್ಮೋನಿಯಂ ಹಿಡಿದು ನುಡಿಸುತ್ತ ಅನೇಕ ಸಂಗೀತ ಉಪಕರಣಗಳಲ್ಲಿ ಪಾಂಡಿತ್ಯ ಸಾಧಿಸಿದರು. ಅಂದಿನ ಕಾಲದ ಸಂಗೀತ ನಿರ್ದೇಶಕರು ಪ್ರಚಾರ ಬಯಸಿದ್ದೇ ಇಲ್ಲ. ಇಂತಹ ದಿಗ್ಗಜರನ್ನು ಅವರ ಹಾಡುಗಳಿಂದ ಪರಿಚಯ ಮಾಡಿಕೊಳ್ಳಬೇಕು. ಅಷ್ಟರ ಮಟ್ಟಿಗೆ ಅವರ ಹಾಡುಗಳು ಜನಮಾನಸದಲ್ಲಿ ಇವತ್ತಿಗೂ ಎವರ್‌ಗ್ರೀನ್‌ ಫೇಮಸ್​.. ಇವರ ರಾಗ ಸಂಯೋಜನೆಯ ಗೀತೆಗಳನ್ನು ಎಂದೂ ಮರೆಯಲಾರರು. ಅಂದಿಗೂ ಇಂದಿಗೂ ಎಂದೆಂಗೂ ಟಿ.ಜಿ. ಲಿಂಗಪ್ಪ ಅವರ ಹಾಡುಗಳು ಎವರ್‌ಗ್ರೀನ್‌ ಆಗಿ ಉಳಿದಿವೆ. 

ಇದನ್ನೂ ಓದಿ: ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ಗ್ರಾಹಕರ ಆಯೋಗದಿಂದ ದಂಡ

ಟಿ.ಜಿ.ಲಿಂಗಪ್ಪನವರು ಮೂಲತ: ತಮಿಳುನಾಡಿನ ತಿರುಚನಾಪಳ್ಳಿಯವರು.. ಹುಟ್ಟಿದ್ದು 1927ರ ಆಗಸ್ಟ್ 22ರಂದು. ತಂದೆ ಗೋವಿಂದ ರಾಜಲುನಾಯ್ಡು ಸಹ ತಮಿಳು ಚಿತ್ರರಂಗದ ಸಂಗೀತ ನಿರ್ದೇಶಕರಾಗಿದ್ದರು. ಅಲ್ಲದೆ, ರಂಗಭೂಮಿಯಲ್ಲಿ ಹಾರ್ಮೋನಿಯಂ ಮಾಸ್ತರರಾಗಿದ್ದರು. ಆ ಕಾಲದ ಪ್ರಸಿದ್ಧ ಗಾಯಕಿಯಾದ ಕೆ. ಬಿ. ಸುಂದರಂಬಾಳ್ ಅವರಿಗೆ ಗೋವಿಂದ ರಾಜಲುನಾಯ್ಡು ಅವರೇ ಗುರುಗಳಾಗಿದ್ದರು. ತಾಯಿ ಗೌರಮ್ಮನವರು ಕೂಡ ಗಾಯಕಿ. ಹೀಗಾಗಿ ಬಾಲ್ಯದಿಂದಲೂ ಸಂಗೀತವೆಂಬುದು ಲಿಂಗಪ್ಪನವರಿಗೆ ಜೊತೆಗೂಡಿ ಬಂದಿತ್ತು. ಪಿಚ್ಚುಮಣಿ ಅಯ್ಯರ್ ಅವರಿಂದ ಕರ್ನಾಟಕ ಸಂಗೀತವನ್ನು ಕಲಿತ ಲಿಂಗಪ್ಪನವರು, ತಂದೆಯವರಿಂದ ಹಾರ್ಮೋನಿಯಂ ಮತ್ತು ಗುರು ಅಯ್ಯರ್ ಅವರಿಂದ ವೀಣಾವಾದನವನ್ನು ಸರಾಗವಾಗಿ ಕಲಿತರು. ಲಿಂಗಪ್ಪನವರು ಕೆಲ ಕಾಲ ವೀಣಾವಾದಕರಾಗಿಯೂ ಜನಪ್ರಿಯರಾಗಿದ್ದರು. ಅಲ್ಲದೇ ಮೊದ ಮೊದಲಿಗೆ ನಾಟಕಗಳಿಗೆ ಹಾರ್ಮೋನಿಯಂ ನುಡಿಸುತ್ತಿದ್ದ ಟಿ.ಜಿ. ಲಿಂಗಪ್ಪ ಅವರು, ಕಾಲ ಕ್ರಮೇಣ ಸಿನಿಮಾ ರಂಗದ ಕಡೆಗೆ ಆಸಕ್ತರಾದ್ರು.

1945 ರಲ್ಲಿ ಸಂಗೀತ ನಿರ್ದೇಶಕ ಆರ್‌ ಸುದರ್ಶನ್‌ ಅವರ ಮಾರ್ಗದರ್ಶನದಲ್ಲಿ ಶ್ರೀವಲ್ಲಿ ಎಂಬ ಚಿತ್ರಕ್ಕೆ ವಾದ್ಯಗಳನ್ನು ನುಡಿಸಿದ್ರು. ಈ ನಡೆವೆ ತಮಿಳು ಸಿನಿಮಾ ರಂಗದ ಸಂಗೀತ ನಿರ್ದೇಶಕರಾದ ಜಿ. ರಾಮನಾಥನ್‌, ಎಸ್‌.ವಿ. ವೆಂಕಟರಾಮಣ್‌ ಹಾಗೂ ಕೆ.ವಿ. ಮಹಾದೇವನ್‌ ಅವರ ಪರಿಚಯವೂ ಬೆಳೆಯಿತು.. 1951ರಲ್ಲಿ ಟಿ.ಆರ್‌. ಮಹಾಲಿಂಗಂ ಅವರ ʻಮಹಾ ಸುಂದರಂʼ ಎಂಬ ಚಿತ್ರದಲ್ಲಿ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಬೆಳಕಿಗೆ ಬಂದರು. 

ತಮ್ಮ 14ನೆಯ ವಯಸ್ಸಿನಲ್ಲಿ ವಿಶ್ವನಾಥನ್ ಅವರ ‘ಕಾಮಧೇನು’ ಎಂಬ ಚಿತ್ರಕ್ಕೆ ನಟಿಸಲು ಹೋದ ಲಿಂಗಪ್ಪನವರಿಗೆ, ವಿಶ್ವನಾಥನ್ ಅವರು ನೀನು ನನ್ನ ಜೊತೆಯಲ್ಲೇ ಇದ್ದುಬಿಡು.. ಹಾಡುಗಾರಿಕೆ ಮುಂದುವರಿಸು. ಸೂಕ್ತ ಕಾಲದಲ್ಲಿ ಅವಕಾಶ ಕೊಡುತ್ತೇನೆ ಆಂದ್ರಂತೆ. ಅದು ಫಲಪ್ರದವಾಗದ ಕಾರಣ ಅವರು ಮಯೂರ ಫಿಲಂ ಆರ್ಕೆಸ್ಟ್ರಾದಲ್ಲಿ ಹಾರ್ಮೋನಿಯಂ, ಮ್ಯಾಂಡೋಲಿನ್ ಮತ್ತು ಗಿಟಾರ್ ವಾದಕರಾಗಿ ಕೆಲಸ ನಿರ್ವಹಿಸಲು ಆರಂಭಿಸಿದ್ರು. 1941ರಲ್ಲಿ ಅವರು ಅಶೋಕ್ ಕುಮಾರ್ ಅವರಿಗೆ ವಾದ್ಯ ನುಡಿಸಿದ್ದರು. ಅದೇ ಸಮಯದಲ್ಲಿ ಅವರು ಜೆಮಿನಿ ಸ್ಟುಡಿಯೋದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗ್ತಾರೆ. ಅಂದಿನ ದಿನಗಳಲ್ಲಿ ಅಲ್ಲಿ ಸಂಗೀತ ನಿರ್ದೇಶಕರಾಗಿದ್ದ ಸಿ. ರಾಮಚಂದ್ರ ಅವರು ಹಿರಿಯ ನುರಿತ ಕಲಾವಿದರೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಈ ಬಾಲಕ ಲಿಂಗಪ್ಪನನ್ನು ಪರಿಗಣಿಸಲಿಲ್ಲ. ಆದರೂ ಛಲಬಿಡದೆ ಅಲ್ಲಿಂದ ಸೇಲಂಗೆ ತೆರಳಿದ ಟಿ.ಜಿ. ಲಿಂಗಪ್ಪನವರು, ಅಲ್ಲಿನ ಮಾಡರ್ನ್ ಥಿಯೇಟರ್ಸ್ನಲ್ಲಿ ಪ್ರಯತ್ನಿಸಿದರು. ಅಲ್ಲಿದ್ದ ಸಂಗೀತ ನಿರ್ದೇಶಕ ಟಿ.ಎ. ಕಲ್ಯಾಣಂ ಅವರು ಅವಕಾಶ ಒದಗಿಸಿಕೊಟ್ಟರು. ಮುಂದೆ ಪ್ರಸಿದ್ಧ ಸಂಗೀತಗಾರರಾದ ಟಿ. ಆರ್. ಪಾಪ, ಕೆ.ವಿ. ಮಹಾದೇವನ್ ಮುಂತಾದವರು ಪರಿಚಯವಾದ್ರು. ಆ ಕಾಲದ ನಲವತ್ತರ ದಶಕದಲ್ಲಿ ಎಲ್ಲಾ ಪ್ರತಿಭಾವಂತರೂ ಸ್ಟುಡಿಯೋದಿಂದ ಸ್ಟುಡಿಯೋಕ್ಕೆ ಅವಕಾಶಗಳಿಗಾಗಿ ಅಲೆದಾಡುತ್ತಿದ್ರು ಅಂದ್ರೆ ನಂಬಲೇಬೇಕಿರೋ ವಿಚಾರ.

ಇನ್ನು 1945ರಲ್ಲಿ ಮದರಾಸಿಗೆ ಹಿಂದಿರುಗಿದ ಲಿಂಗಪ್ಪನವರು ಪ್ರಗತಿ ಸ್ಟುಡಿಯೋಸ್ನಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕರಾದ ಆರ್. ಸುದರ್ಶನಂ ಅವರ ‘ಶ್ರೀವಳ್ಳಿ’ ಎಂಬ ಚಿತ್ರಕ್ಕೆ ವಾದ್ಯ ನುಡಿಸಿದ್ರು. 1947ರಲ್ಲಿ ಅವರು ಕರೈಕುಡಿಯ ಎವಿಎಂ ಸ್ಟುಡಿಯೋದಲ್ಲಿ ಸಿ.ಆರ್. ಸುಬ್ರಮಣ್ಯಂ ಅವರ ‘ನಮ್ಮ ಇರುವರ್’ ಎಂಬ ಚಿತ್ರಕ್ಕೆ ವಾದ್ಯ ನುಡಿಸಿದರು. ಹೀಗೆ ವಿವಿಧ ಸಂಗೀತ ನಿರ್ದೇಶಕರುಗಳ ಬಳಿ ಕೆಲಸ ಮಾಡಿದ ಅವರಿಗೆ ಫ್ರೀಲಾನ್ಸ್ ಸಂಗೀತಗಾರರಾಗಿ ಕೆಲಸ ಮಾಡುವ ಚಿಂತನೆಯೊಂದು ಮೂಡಿಬಂತು. ಅದಕ್ಕಾಗಿ ಅವರು ವಿದೇಶದಿಂದ ಆ ಕಾಲಕ್ಕೆ ಪ್ರಸಿದ್ಧವೆನಿಸಿದ್ದ ಎಲೆಕ್ಟ್ರಿಕ್ ಗಿಟಾರ್ ಮುಂತಾದ ಅನೇಕ ಆಧುನಿಕ ವಾದ್ಯಗಳನ್ನು ತರಿಸಿಕೊಂಡರು. ಗಿಟಾರ್ ವಾದನದಲ್ಲಿ ಅತ್ಯಂತ ಸಮರ್ಥರಾಗಿದ್ದ ಲಿಂಗಪ್ಪನವರನ್ನು ಪ್ರಸಿದ್ಧ ಸಂಗೀತ ನಿರ್ದೇಶಕರಾದ ಜಿ. ರಾಮನಾಥನ್, ಎಸ್. ವಿ. ವೆಂಕಟರಾಮನ್, ಕೆ. ವಿ. ಮಹಾದೇವನ್ ಅವರನ್ನೊಳಗೊಂಡಂತೆ ಎಲ್ಲಾ ಸಂಗೀತ ನಿರ್ದೇಶಕರೂ ತಮ್ಮ ಸಂಗೀತ ನಿರ್ದೇಶನಗಳಲ್ಲಿ ಬಳಸಿಕೊಳ್ಳತೊಡಗಿದರು. 

ಇದನ್ನೂ ಓದಿ: ಸಿದ್ದರಾಮಯ್ಯ ಮುಂದಿನ ಸಿಎಂ ಆಗ್ತಾರಾ? ಎಂದಿದ್ದಕ್ಕೆ ಏನಂದ್ರು ಹಳ್ಳಿ ಹಕ್ಕಿ ವಿಶ್ವನಾಥ್

ಪ್ರಖ್ಯಾತ ಸಂಗೀತಗಾರರಾದ ಟಿ.ಆರ್. ಮಹಾಲಿಂಗಂ ಅವರು ತಮ್ಮ ಮೊದಲ ಚಿತ್ರ ನಿರ್ಮಾಣದ ಸಂದರ್ಭದಲ್ಲಿ ಸಿ.ಆರ್ ಸುಬ್ರಮಣ್ಯಂ ಅವರನ್ನು ಸಂಗೀತ ನಿರ್ದೇಶಕರನ್ನಾಗಿ ನೇಮಿಸಿದ್ದರು. ಸಿ. ಆರ್. ಸುಬ್ರಮಣ್ಯಂ ಅವರು ಹಠಾತ್‌ ನಿಧನರಾದಾಗ, ಆರ್. ಮಹಾಲಿಂಗಂ ಅವರು ಲಿಂಗಪ್ಪನವರಿಗೆ ಅವಕಾಶ ನೀಡ್ತಾರೆ.. 1951ರ ವರ್ಷದಲ್ಲಿ ತಮ್ಮ ಎರಡನೇ ಚಿತ್ರವಾದ ‘ಮೋಹನಸುಂದರಂ’ಗೆ ಸಂಗೀತ ನಿರ್ದೇಶನಕ್ಕೆ ಅವಕಾಶ ಮಾಡಿಕೊಟ್ಟರು. ಟಿ. ಆರ್. ಮಹಾಲಿಂಗಂ ಮತ್ತು ಟಿ. ಜಿ. ಲಿಂಗಪ್ಪ ಇಬ್ರೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತರಾದ್ದರು. ಇದ್ರಿಂದ ‘ಮೋಹನಸುಂದರಂ’ ಚಿತ್ರದ ಹಾಡುಗಳೆಲ್ಲವೂ ಅಪಾರ ಜನಪ್ರಿಯತೆ ಪಡೆದವು. ಇದೇ ಟೈಮ್ನಲ್ಲಿ ಬಿ.ಆರ್. ಪಂತುಲು ಅವರು ಟಿ. ಆರ್. ಮಹಾಲಿಂಗಂ ಅವರೊಡನೆ ಕಾರ್ಯನಿರ್ವಹಿಸುತ್ತಿದ್ದರು. ಮುಂದೆ ಬಿ.ಆರ್. ಪಂತುಲು ಅವರು ತಮ್ಮದೇ ಆದ ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯನ್ನು ತೆರೆದಾಗ ಅವರ ಎಲ್ಲಾ ತಮಿಳು, ಕನ್ನಡ, ತೆಲುಗು ಚಿತ್ರಗಳಿಗೂ ಟಿ.ಜಿ. ಲಿಂಗಪ್ಪನವರು ಖಾಯಂ ಸಂಗೀತ ನಿರ್ದೇಶಕರಾದರು.

ಇದನ್ನೂ ಓದಿ:

ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ರಾಗ ಸಂಯೋಜಕ ಟಿ.ಜಿ. ಲಿಂಗಪ್ಪನವರು. ಕನ್ನಡ, ತಮಿಳು, ತೆಲುಗು ಚಿತ್ರಗೀತೆಗಳಿಗೆ ಸಂಗೀತ ನಿರ್ದೇಶನ ಮಾಡಿರೋ ಹಾಡುಗಳು ಇಂದಿಗೂ ಎವರ್‌ಗ್ರೀನ್‌. ಅವರ ಹಾಡು ಕೇಳಿದೊಡನೆ ಅಂದಿನ ಕಾಲಘಟಕ್ಕೆ ಕೊಂಡೊಯ್ಯುವ ನಮ್ಮನ್ನ ಮೈ ಮರೆಸುವಂತೆ ಮಾಡುತ್ತವೆ.. ಹಾಗಾದ್ರೆ ಇವರು ಕನ್ನಡದ ಮೊದಲ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು ಯಾವುದು..? ಕನ್ನಡದ ಯಾವೆಲ್ಲಾ ಚಿತ್ರಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ ಅಂತ ಹೇಳ್ತೀವಿ ಒಂದು ಸ್ಮಾಲ್‌ ಬ್ರೇಕ್‌ ನಂತರ...

ಸಂಗೀತವನ್ನ ಒಳಕಿವಿಗಳಿಂದ ಕೇಳಿ.. ಹೃದಯ ಮಿಡಿಯುವಂತೆ ಮಾಡುವ ಕೆಲವೇ ಕೆಲವು ಶಬ್ದ ಮಾಂತ್ರಿಕರಲ್ಲಿ ಟಿ.ಜಿ. ಲಿಂಗಪ್ಪ ಪ್ರಮುಖರು. 1950 ರಿಂದ 80 ದಶಕದವರೆಗೆ ಸುಮಾರು ಮೂರು ದಶಕಗಳ ಕಾಲ ಮೂರು ಭಾಷೆಗಳಲ್ಲಿ ಸಂಗೀತವನ್ನ ತಿದ್ದಿ ತೀಡಿ ಎಲ್ಲರ ಹೃದಯದಲ್ಲಿ ಮಿಂಚನ್ನ ಹರಿಸಿದರು. ಇಂತಹ ಪ್ರತಿಭಾವಂತ ಸಂಗೀತ ನಿರ್ದೇಶಕ ಟಿ.ಜಿ.ಲಿಂಗಪ್ಪ ಕನ್ನಡದ ಯಾವ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ..? ಕನ್ನಡ ಭಾಷೆಗೆ ನೀಡಿರೋ ಕೊಡುಗೆ ಎಂಥಾದ್ದು ಅಂತೀರಾ..? ನೀವೇ ಓದಿ

‘ಮೊದಲ ತೇದಿ’ ಟಿ.ಜಿ.ಎಲ್‌ ಸಂಗೀತದ ಮೊದಲ ಕನ್ನಡ ಚಿತ್ರ

ಕನ್ನಡ ಸಿನಿಮಾ ರಂಗಕ್ಕೆ ಟಿ.ಜಿ. ಲಿಂಗಪ್ಪ ಅವರನ್ನು ಬರ ಮಾಡಿಕೊಂಡಿದ್ದು ಮತ್ತೊಬ್ಬ ದಿಗ್ಗಜ ನಿರ್ದೇಶಕ, ನಿರ್ಮಾಪಕ ಹಾಗೂ ನಟರಾದ ಬಿ.ಆರ್. ಪಂತುಲು. ಅದು 1955 ರಲ್ಲಿ ‘ಮೊದಲ ತೇದಿ’ ಸಿನಿಮಾಕ್ಕೆ. ಅದೇ ವರ್ಷದಲ್ಲಿ ಟಿ.ಜಿ. ಲಿಂಗಪ್ಪ ʻಶಿವಶರಣೆ ನಂಬಿಯಕ್ಕʼ ಸಿನಿಮಾಗೂ ಸಂಗೀತ ನಿರ್ದೇಶಿಸಿದ್ದರು. ಮುಂದೆ ಅವರು ಗಾಳಿ ಗೋಪುರ, ಕಿತ್ತೂರು ಚೆನ್ನಮ್ಮ, ಸ್ಕೂಲ್ ಮಾಸ್ಟರ್, ಚಂದವಳ್ಳಿಯ ತೋಟ, ಶ್ರೀಕೃಷ್ಣದೇವರಾಯ, ಚಿನ್ನದ ಬೊಂಬೆ, ರತ್ನಗಿರಿ ರಹಸ್ಯ, ಸತಿ ಶಕ್ತಿ, ಸಾಕು ಮಗಳು, ಗಂಗೆ ಗೌರಿ, ಸ್ವರ್ಣ ಗೌರಿ, ಮಕ್ಕಳ ರಾಜ್ಯ, ರತ್ನಮಂಜರಿ, ಚಿನ್ನಾರಿ ಪುಟ್ಟಣ್ಣ, ಎಮ್ಮೆ ತಮ್ಮಣ್ಣ, ದುಡ್ಡೇ ದೊಡ್ಡಪ್ಪ, ಚಕ್ರತೀರ್ಥ, ಮಾಲತಿ ಮಾಧವ, ಅಮ್ಮಾ, ಬೀದಿ ಬಸವಣ್ಣ, ಗಂಡೊಂದು ಹೆಣ್ಣಾರು, ಕುಲಗೌರವ, ಧೂಮಕೇತು, ಜಾರಿ ಬಿದ್ದ ಜಾಣ, ಬೆಟ್ಟದ ಹುಲಿ, ನಾಗ ಪೂಜಾ, ಬಬ್ರುವಾಹನ, ತಾಯಿಗೆ ತಕ್ಕ ಮಗ, ಹೊಸಿಲು ಮೆಟ್ಟಿದ ಹೆಣ್ಣು, ಕಾಲೇಜು ರಂಗ, ಒಂದು ಹೆಣ್ಣಿನ ಕಥೆ, ದೇವರ ಕಣ್ಣು, ಶಿವಕೊಟ್ಟ ಸೌಭಾಗ್ಯ, ಶ್ರುತಿ ಸೇರಿದಾಗ, ಭಾಗ್ಯವಂತ, ಭಕ್ತ ಸಿರಿಯಾಳ, ಯಡಿಯೂರು ಸಿದ್ಧಲಿಂಗೇಶ್ವರ ಮಹಿಮೆ, ಭಕ್ತ ಪ್ರಹ್ಲಾದ, ಹಾಸ್ಯ ರತ್ನ ರಾಮಕೃಷ್ಣ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ಸುಶ್ರಾವ್ಯ ಗೀತೆಗಳನ್ನೂ, ಹಿನ್ನೆಲೆ ಚಿತ್ರಸಂಗೀತವನ್ನೂ ಉಣಬಡಿಸಿದ್ದಾರೆ.

ಟಿ.ಜಿ. ಲಿಂಗಪ್ಪರ ಸಂಗೀತದ ಹಾಡುಗಳು ಒಂದಕ್ಕಿಂತ ಒಂದು ಜನಪ್ರಿಯ. ಸ್ಕೂಲ್ ಮಾಸ್ಟರ್ ಚಿತ್ರದ ‘ಸ್ವಾಮಿ ದೇವನೆ ಲೋಕಪಾಲನೆ’ ಗೀತೆಯಂತೂ ಬಹುತೇಕ ಶಾಲೆಗಳಲ್ಲಿ ಪ್ರಾರ್ಥನೆ ಗೀತೆಯಾಗಿ ನಿರಂತರವಾಗಿ ಹಾಡಲ್ಪಡುತ್ತಿದೆ. ‘ಕಿತೂರು ಚೆನ್ನಮ್ಮ ʻಚಿತ್ರದಲ್ಲಿನ ಅಕ್ಕನ ವಚನವಾದ ‘ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು’ ಗೀತೆಗೆ ಕರಗದ ಮನವೇ ಇಲ್ಲ. ಬಭ್ರುವಾಹನದ ‘ಆರಾಧಿಸುವೆ ಮದನಾರಿ’, ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ’; ಶ್ರೀಕೃಷ್ಣದೇವರಾಯದ ಬಹುಜನ್ಮದ ಪೂಜಾಫಲ, ಶ್ರೀ ಚಾಮುಂಡೇಶ್ವರಿ, ತಿರುಪತಿ ಗಿರಿವಾಸ; ಗಾಳಿಗೋಪುರ ಸಿನಿಮಾದ ‘ಯಾರಿಗೆ ಯಾರುಂಟು’.. ದೇವರ ಕಣ್ಣು ಚಿತ್ರದ ‘ನಿನ್ನ ನೀನು ಮರೆತರೇನು ಸುಖವಿದೆ’, ರತ್ನಗಿರಿ ರಹಸ್ಯದ ‘ಅನುರಾಗದ ಅಮರಾವತಿ’, ಸತಿ ಶಕ್ತಿಯ ‘ಪವಡಿಸು ಪಾಲಾಕ್ಷ’, ಶ್ರುತಿ ಸೇರಿದಾಗ ಚಿತ್ರದ ‘ಬೊಂಬೆಯಾಟವಯ್ಯಾ’, ಭಕ್ತ ಸಿರಿಯಾಳದ ‘ಶಿವ ಶಿವ ಎಂದರೆ ಭಯವಿಲ್ಲ.. ಈ ಗೀತೆಗಳು ಇವತ್ತಿಗೂ ಮೈ ರೋಮಾಂಚನಗೊಳಿಸುತ್ತವೆ.. ಅಸಂಖ್ಯಾತ ಸುಶ್ರಾವ್ಯ ಹಾಡುಗಳು ಒಂದಾದ ಮೇಲೊಂದು ಮನಃಪಟಲದಲ್ಲಿ ಮುದವಾಗಿ ಸಂಚಲನಗೊಳ್ಳುವಂತೆ ಮಾಡೋದ್ರಲ್ಲಿ ಟಿಜಿಎಲ್‌ ಅಗ್ರಜರು..

ಅಂದ ಹಾಗೆ, ಟಿ.ಜಿ. ಲಿಂಗಪ್ಪ ಅವರು ಸಂಗೀತ ನಿರ್ದೇರೋ ಕೆಲವೊಂದು ಪ್ರಮುಖ ಚಿತ್ರಗಳನ್ನು ನೋಡೋದಾದ್ರೆ.. 

ಟಿ.ಜಿ. ಲಿಂಗಪ್ಪ  ಚಿತ್ರ ಶಿಖರ 
ವರ್ಷ    ಚಿತ್ರ                     
1954    ಪಣ್ಣಿಯಂ ಬ್ರಹ್ಮಚಾರಿ
1955    ಮೊದಲ ತೇದಿ 
1958     ರತ್ನಗಿರಿ ರಹಸ್ಯ
1958     ಎಂಗಳ್‌ ಕೊಡುಂಬಂ ಪೆರಿಸು ಮರುವಷ ಮರಗದಂ
1958    ಸ್ಕೂಲ್‌ ಮಾಷ್ಟ್ರು, ಮಕ್ಕಳ ರಾಜ್ಯ, ಕಿತ್ತೂರು ಚೆನ್ನಮ್ಮ, ಸತಿ ಶಕ್ತಿ
1965     ಬೆಟ್ಟದ ಹುಲಿ
1966    ಎಮ್ಮೆ ತಮ್ಮಣ್ಣ, ಚಕ್ರತೀರ್ಥ, ಬೀದಿ ಬಸವಣ್ಣ 
1968    ಧೂಮಕೇತು, ಅಮ್ಮ
1969    ಗಂಡೊಂದು ಹೆಣ್ಣಾರುʼ
1970    ಶ್ರೀಕೃಷ್ಣದೇವರಾಯ
1971    ಕುಲಗೌರವ
1971    ಸಿಪಾಯಿ ರಾಮು
1975    ದೇವರ ಕಣ್ಣು    
1976    ಹೊಸಿಲು ಮೆಟ್ಟಿದ ಹೆಣ್ಣು, ಕಾಲೇಜು ರಂಗ 
1977    ಬಭ್ರುವಾಹನ 
1978     ಕುದುರೆಮುಖ
1979    ಭಾಗ್ಯವಂತ
1980    ಭಕ್ತ ಸಿರಿಯಾಳ
1981    ತಾಯಿಗೆ ತಕ್ಕ ಮಗ
1983    ಭಕ್ತ ಪ್ರಹ್ಲಾದ

 ಪಿಆರ್‌ ಪಂತುಲು 1954ರಲ್ಲಿ ಕಲ್ಯಾಣ ಪಣ್ಣಿಯಂ ಬ್ರಹ್ಮಚಾರಿ ಎಂಬ ಚಿತ್ರಕ್ಕೆ ಟಿ.ಜಿ. ಲಿಂಗಪ್ಪ  ಸಂಗೀತ ಒದಗಿಸಿದ್ರು.  ಬಿಆರ್‌ ಪಂತುಲು ನಿರ್ಮಾಣದ ತಮಿಳು ಚಿತ್ರಕ್ಕೆ ನೀಡಿದ  ಸಂಗೀತ  ಟಿ.ಜಿ. ಲಿಂಗಪ್ಪ  ಅವರಿಗೆ ಮತ್ತಷ್ಟು ಅವಕಾಶಗಳ ಬಾಗಿಲನ್ನು ತೆರೆಯಿತು... 1955ರಲ್ಲಿ ತಮ್ಮ ಮತ್ತೊಂದು ತಮಿಳು ಚಿತ್ರ ಮೊದಲ್‌ ತೇದಿಯಲ್ಲೂ ಪಂತುಲು ಟಿ.ಜಿ. ಲಿಂಗಪ್ಪ  ಅವರನ್ನ ಸಂಗೀತ ನಿರ್ದೇಶಕರಾಗಿನ ಆಯ್ಕೆ ಮಾಡಿದ್ರು. ಈ ಚಿತ್ರ ಕನ್ನಡದಲ್ಲಿ ಮೊದಲ ತೇದಿ ಎಂಬ ಹೆಸರಿನಲ್ಲಿ ನಿರ್ಮಾಣವಾಯ್ತು.... 1958ರಲ್ಲಿ ʻತಂಗಮಲೈ ರಗಸ್ಯಂʼ ಎಂಬ ತಮಿಳು ಚಿತ್ರಕ್ಕೆ.. ಈ ಚಿತ್ರದ ಕನ್ನಡ ಅವತರಣಿಕೆಗೂ ಸಂಗೀತ ಒದಗಿಸಿದ್ರು. ʻರತ್ನಗಿರಿ ರಹಸ್ಯʼ ಚಿತ್ರಕ್ಕಾಗಿ ಗಾಯಕಿ ಪಿ. ಸುಶಿಲಾ ತಮಿಳು ಹಾಗೂ ಕನ್ನಡದಲ್ಲೂ ಒಂದೇ ಟ್ಯೂನ್‌ನಲ್ಲೂ ಹಾಡಿದ್ರು... 1958ರಲ್ಲಿ ʻಎಂಗಳ್‌ ಕೊಡುಂಬಂ ಪೆರಿಸು ಮರುವಷ ಮರಗದಂʼ  ತಮಿಳು ಚಿತ್ರಗಳಿಗೆ ಸಂಗೀತ ನೀಡಿದ ಟಿ.ಜಿ. ಲಿಂಗಪ್ಪ  ಪಂತುಲು ಅಭಿನಯದ ಕನ್ನಡ ಚಿತ್ರ ಸ್ಕೂಲ್‌ ಮಾಷ್ಟ್ರು, ಮಕ್ಕಳ ರಾಜ ಅಲ್ಲದೇ ಡಾ. ರಾಜ್‌ಕುಮಾರ್‌ ಅವರ ನಟನೆಯ ಕಿತ್ತೂರು ಚೆನ್ನಮ್ಮ, ಸತಿ ಶಕ್ತಿ,  ಸ್ವರ್ಣಗೌರಿ ಚಂದವಳ್ಳಯ ತೋಟ, ನಾಗಪೂಜ ಮುಂತಾದ ಚಿತ್ರಗಳಿಗೂ ಸಂಗೀತ ಸಂಯೋಜನೆ ಮಾಡಿದ್ರು. 60-70 ದಶಕದವರಿಗೂ ಬಿಆರ್‌ ಪಂತುಲು ಹಾಗೂ ಡಾ. ರಾಜ್‌ಕುಮಾರ್‌ ಅವರ ಚಿತ್ರಗಳಿಗೆ ಖಾಯಂ ಮ್ಯೂಸಿಕ್‌ ಡೈರೆಕ್ಟರ್. 1965ರಲ್ಲಿ ಬಂದ ʻಬೆಟ್ಟದ ಹುಲಿʼ ರಾಜ್‌ ಹಾಗೂ ಜಯಂತಿ ಜೋಡಿಯ ಸಿನಿಮಾ ಆಗಿತ್ತು. ಈ ಚಿತ್ರದ ಹಾಡುತ್ತಿರುವ ಮೋಡಗಳೇ ಹಾರುತ್ತಿರುವ ಹಕ್ಕಿಗಳೇ ಎಂಬ ಗೀತೆ ಟಿ.ಜಿ. ಲಿಂಗಪ್ಪ  ಅವರ ರಾಗ ಸಂಯೋಜನೆಯಲ್ಲಿ  ಜನಪ್ರಿಯವಾಯ್ತು... 1966 ರಲ್ಲಿ ರಾಜ್‌ಕುಮಾರ್‌ ಅವರದ್ದೇ  ಅಭಿನಯದ ಎಮ್ಮೆ ತಮ್ಮಣ್ಣ,  ಚಕ್ರತೀರ್ಥ, ಬೀದಿ ಬಸವಣ್ಣ ಚಿತ್ರಗಳಲ್ಲಿ‌ ಸುಧೆ ಹರಿಸಿದರು. ಚಿನ್ನಾರಿ ಪುಟ್ಟಣ್ಣ, ದುಡ್ಡೇ ದೊಡ್ಡಪ್ಪ, ಧೂಮಕೇತು ಸಿನಿಮಾ ಕೂಡ ಸೂಪರ್‌ ಹಿಟ್‌.. ಡಾ.ರಾಜಣ್ಣ ನಟನೆಯ ʻಅಮ್ಮʼ ಚೂರಿ ಚಿಕ್ಕಣ್ಣ, ʻಗಂಡೊಂದು ಹೆಣ್ಣಾರುʼ ಖ್ಯಾತಿ ಗಳಿಸಿದವು. 1970ರಲ್ಲಿ ಪಿ.ಆರ್‌. ಪಂತುಲು ನಿರ್ಮಾಣದ ʻಶ್ರೀಕೃಷ್ಣದೇವರಾಯʼ ಚಿತ್ರ ಬಿಡುಗಡೆಯಾಗಿತ್ತು. ಡಾ. ರಾಜ್‌ಕುಮಾರ್‌ ಅಭಿನಯಿಸಿದ ಮೊಟ್ಟಮೊದಲ ಬಣ್ಣದ ಚಿತ್ರ ಇದಾಗಿತ್ತು. ಈ ಚಿತ್ರಕ್ಕೂ ಟಿಜಿಎಲ್‌ ಅವರದೇ ಸಂಗೀತ.. 1971ರಲ್ಲಿ ರಾಜ್‌ಕುಮಾರ್‌ ಅವರು ತ್ರಿಪಾತ್ರದಲ್ಲಿ ನಟಿಸಿದ ʻಕುಲಗೌರವʼ ಚಿತ್ರ ತೆರೆಕಂಡಿತ್ತು. ಈ ಚಿತ್ರದಲ್ಲಿ ಕನ್ನಡದ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು, ಬಾಲ ನಟನ್ನಾಗಿ ಅಭಿನಯಿಸಿದ್ರು. ರಾಜ್‌ ಅವರಿಗೆ ನಾಯಕಿಯಾಗಿ ಜಯಂತಿ ಹಾಗೂ ಭಾರತಿ ಕಾಣಿಸಿಕೊಂಡಿದ್ರು. ಒಂದು ಹೆಣ್ಣಿನ ಕಥೆಯಲ್ಲಿ ರಾಜ್‌ ಹಾಗೂ ಜಯಂತಿ ಜೊತೆಯದ್ರೆ, ಅದೇ ವರ್ಷ ತೆರೆಕಂಡ ರಾಜ್‌ ಆರತಿ ಜೋಡಿಯ ʻಸಿಪಾಯಿ ರಾಮುʼ ಚಿತ್ರವೂ ಟಿ.ಜಿ.ಎಲ್‌ ಅವರ ಕಿರೀಟಕ್ಕೆ ಗರಿ ಮೂಡಿಸಿತು. 1975ರಲ್ಲಿ ʻದೇವರ ಕಣ್ಣು 1977ರಲ್ಲಿ ಬಬ್ರುವಾಹನ ಸೂಪರ್‌ ಹಿಟ್‌ ಚಿತ್ರವಾಯಿತು. 1978ರಲ್ಲಿ ಅನಂತನಾಗ ಅಭಿನಯದ ʻಕುದುರೆಮುಖʼ ಚಿತ್ರಕ್ಕೆ ರಾಗ ಸಂಯೋಜಿಸಿದ್ರು. 1979ರಲ್ಲಿ ಭಾಗ್ಯವಂತ ಚಿತ್ರ ಹೊಸ ಹುರುಪು ತಂದೊಡಿತು.. ಈ ಸಿನಿಮಾದಲ್ಲಿ ಪುನೀತ್‌ ರಾಜಕುಮಾರ್‌ ಅವರು ʻಬಾನದಾರಿಯಲ್ಲಿ ಸೂರ್ಯ ಜಾರಿ ಹೋದ.. ಚಂದ್ರ ಮೇಲೆ ಬಂದ.. ಲಿಂಗಪ್ಪ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದರು. 1980ರಲ್ಲಿ ಭಕ್ತಿ ಪ್ರಧಾನವಾದ ʻಭಕ್ತ ಸಿರಿಯಾಳʼ 1981ರಲ್ಲಿ  ʻತಾಯಿಗೆ ತಕ್ಕ ಮಗʼ ಚಿತ್ರದಲ್ಲಿ ನೀಡಿದ ಸಂಗೀತ ಮತ್ತಷ್ಟು ಲಿಂಗಪ್ಪರನ್ನ ಉತ್ತುಂಗಕ್ಕೆ ಏರಿಸಿದರು.. ಟಿ.ಜಿ. ಲಿಂಗಪ್ಪ ಅವರು ಕನ್ನಡ, ತಮಿಳು ಹಾಗೂ ತೆಲುಗು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಿಗೆ ತಮ್ಮ ಸಂಗೀತ ಸುಧೆಯನ್ನ ಹರಿಸಿದ್ರು. ಸುಮಾರು ಮೂರು ದಶಕಗಳ ಕಾಲ ಮೂರು ಭಾಷೆಗಳಲ್ಲಿ ಟಿ.ಜಿ. ಲಿಂಗಪ್ಪ ನಾದಬ್ರಹ್ಮರಾಗಿ ಮೆರೆದರು.))

ಸುಂದರ ಚೆಲುವೆಗೆ ಮನ ಸೋತಿದ್ದ ಟಿ.ಜಿ.ಲಿಂಗಪ್ಪ

ʻಸ್ಕೂಲ್ ಮಾಸ್ಟರ್ ಸಿನಿಮಾಕ್ಕೆ ಸಂಗೀತ ಕೊಟ್ಟಾಗ ಸಂಗೀತ ನಿರ್ದೇಶಕ ಟಿ.ಜಿ.ಲಿಂಗಪ್ಪನವರು ಅವಿವಾಹಿತರು. ಸ್ನೇಹಿತ ಜಿ.ಕೆ. ವೆಂಕಟೇಶ್ ಅವರ ಮದುವೆಯಲ್ಲಿ ಅವರ ಕಣ್ಣಿಗೆ ಒಬ್ಬ ಸುಂದರ ಯುವತಿ ಬಿದ್ದಳು. ಒಮ್ಮೆ ನೋಡಿದರೂ ಮತ್ತೆ ಮತ್ತೆ ನೋಡಬೇಕು ಎನ್ನಿಸುವಂತಹ ಚೆಲುವು. ಲಿಂಗಪ್ಪನವರು ಅಲ್ಲಿಯೇ ಮನಸೋತರು. ಈ ಹುಡುಗಿ ವಿವರ ಪತ್ತೆ ಮಾಡಿ ವಧು ಪರೀಕ್ಷೆಯ ಸಿದ್ಧತೆಯೂ ನಡೆಯಿತು. ವಧು ಪರೀಕ್ಷೆಗೆ ಸ್ನೇಹಿತನ ಮನೆಯವರೊಂದಿಗೆ ಜಿ.ಕೆ.ವೆಂಕಟೇಶ್ ಅವರೂ ಬಂದಿದ್ದರು. ಈ ಯಾವ ಹಿನ್ನೆಲೆಯೂ ಗೊತ್ತಿಲ್ಲದ ಹುಡುಗಿ ಭಾಮೆಯ ನೋಡಲು ತಾ ಬಂದ ಗೀತೆಯನ್ನೇ ಹಾಡಿ ಬಿಟ್ಟಳು. ಇದರ ಕರ್ತೃ ಎದುರಿಗೇ ಹಾಡುತ್ತಿರುವೆ ಎನ್ನುವುದು ಅವಳಿಗೆ ಗೊತ್ತೇ ಇರಲಿಲ್ಲ. ಅವಳು ಹಾಡನ್ನು ಮುಗಿಸಿದ ಕೂಡಲೇ ಜಿ.ಕೆ.ವೆಂಕಟೇಶ್ ಕೇಳಿದರು 'ಈ ಹಾಡನ್ನು ಕ್ರಿಯೇಟ್ ಮಾಡಿದ್ದು ಯಾರು ಗೊತ್ತಾ ಅಂತ.. ಪಾಪ ಆಕೆಗೆ ಏನು ಗೊತ್ತು..? ಆ ಕಾಲದ ಎಲ್ಲಾ ಹುಡುಗಿಯರು ವಧು ಪರೀಕ್ಷೆಯಲ್ಲಿ ಹಾಡುತ್ತಿದ್ದಂತೆಯೇ ಹಾಡಿದ್ದಳು. ವೆಂಕಟೇಶ್ ನಕ್ಕು ಹೇಳಿದರು. 'ನಿನ್ನಲು ನೋಡಲು ಬಂದಿದ್ದಾನಲ್ಲ ಆ ಗಂಡು ಕಂಪೋಸ್ ಮಾಡಿದ ಹಾಡಿದು ಅಂತಾರೆ. ಹುಡುಗಿ ನಾಚಿ ಒಳಗೆ ಓಡಿದಳು. ಅಷ್ಟೇ ಅಲ್ಲ ಒಳ ಕೋಣೆಯಲ್ಲಿ ತನ್ನ ತೀರ್ಮಾನವನ್ನೂ ಪ್ರಕಟಿಸಿದಳು ನಾನು ಅವರನ್ನ ಮದುವೆ ಆಗುತ್ತೇನೆ ಅಂತ... ಆ ಹುಡುಗಿಗೆ ಆಗಲೂ ಗೊತ್ತಿರಲಿಲ್ಲ ಮದುವೆ ಮನೆಯಲ್ಲಿ ತನ್ನನ್ನು ನೋಡಿ ಮೆಚ್ಚಿಯೇ ಗಂಡು ತನ್ನನ್ನು ಹುಡುಕಿಕೊಂಡು ಬಂದಿರುವುದು ಎಂದು. ಹೀಗೆ ಲಿಂಗಪ್ಪನವರು ಕಾಂತಮ್ಮನವರನ್ನು ಮದುವೆಯಾದರು. ಕಾಂತಮ್ಮನವರು ಮುಂದೆ ಗಂಡನನ್ನೇ ಗುರುವಾಗಿ ಸ್ವೀಕರಿಸಿ ವೀಣೆ ಕಲಿತು ಅದರಲ್ಲಿ ವಿದ್ವತ್‌ ಸಂಪಾದಿಸಿಕೊಂಡರು. ʻಹಾಡಿನಿಂದ ನನಗೆ ಮಡದಿ ದೊರೆತಳು' ಎಂದು ಟಿ.ಜಿ.ಲಿಂಗಪ್ಪನವರು ಯಾವಾಗಲು ತಮಾಷೆಯಾಗಿ ಹೇಳುತ್ತಲೇ ಇದ್ದರು.

'ಕಿತ್ತೂರುಚೆನ್ನಮ್ಮ' ಚಿತ್ರದಲ್ಲಿ ಅಕ್ಕಮಹಾದೇವಿಯವರ ವಚನವನ್ನು ಅಳವಡಿಸಿದರು. ಆಗ ವಚನ ಗಾಯನಕ್ಕೆ ಒಂದು ಪದ್ಧತಿ ರೂಪುಗೊಂಡಿತ್ತು. ಲಿಂಗಪ್ಪನವರು ಅದನ್ನ ಸರಿಸಿ ಶುದ್ಧ ಕರ್ನಾಟಕಿ ರಾಗದಲ್ಲಿ ಸ್ವರ ಸಂಯೋಜಿಸಿದರು. ಆ ಕಾಲದಲ್ಲಿ ವಿವಾದಕ್ಕೆ ಕಾರಣವೂ ಆಯಿತು. ಆದರೆ ವಿವಾದ ಮರೆತು ಹೋಗಿ ಇಂದಿಗೂ ಹಾಡಿನ ಜನಪ್ರಿಯತೆ ಉಳಿದಿದೆ.. ʻಬಬ್ರುವಾಹನ' ಚಿತ್ರಕ್ಕೆ 'ಯಾರು ತಿಳಿಯರು ನಿನ್ನ ಭುಜಫಲದ ಪರಾಕ್ರಮ ಅನ್ನೋ ಕಂದಪದ್ಯಕ್ಕೆ ವಿಶಿಷ್ಟವಾಗಿ ಸ್ವರ ಸಂಯೋಜಿಸಿ ಸೈ ಅನಿಸ್ಕೊಂಡರು. 

ಹೆಚ್ಚಾಗಿ ಬಿಳಿ ಪಂಚೆ ಮತ್ತು ಬಿಳಿ ಜುಬ್ಬಧರಿಸುತ್ತಿದ್ದ ಟಿ.ಜಿ.ಲಿಂಗಪ್ಪನವರು ತಮ್ಮನ್ನು ವೈಟ್ ಅಂಡ್ ವೈಟ್ ಎಂದು ಕರೆದುಕೊಳ್ಳುತ್ತಿದ್ದರು. ಅವರ ಜೀವನ ಕೂಡ ಹೀಗೆಯೇ ಒಂದು ಕಳಂಕವಿಲ್ಲದೆ ಪರಿಶುದ್ಧವಾಗಿತ್ತು. ಲಿಂಗಪ್ಪನವರ ವ್ಯಕ್ತಿತ್ವ ಯಾರೊಡನೆಯೂ ಹೆಚ್ಚು ಮಾತಾಡದೆ ಇರುವುದು. ಸಂಗೀತವೇ ಅವರ ಬದುಕಾಗಿತ್ತು.. ಆಹಾರದ ವಿಚಾರದಲ್ಲಿಯೂ ಅವರು ಮಿತವಾಗಿದ್ದರಂತೆ. ಮಧ್ಯಾಹ್ನದ ಊಟ ನಿಖರವಾಗಿ 1.30ಕ್ಕೆ ಇಪ್ಪತ್ತು ನಿಮಿಷಗಳಲ್ಲಿ ಊಟ ಮುಗಿಯಬೇಕು. ರೆಕಾರ್ಡಿಂಗ್ ಇದ್ದಾಗಲೂ ಈ ಕ್ರಮವನ್ನ ತಪ್ಪುತ್ತಿರಲಿಲ್ಲ. ಅಲ್ಲಿಯೂ ಮನೆ ಊಟವೇ ಆಗಬೇಕು ಎಂತಹ ಅನಿವಾರ್ಯತೆಯಲ್ಲೂ ಹೋಟಲ್ ತಿನಿಸುಗಳನ್ನು ಮುಟ್ಟುತ್ತಿರಲಿಲ್ಲವಂತೆ. ಹೆಚ್ಚಾಗಿ ಮದ್ರಾಸಿನಲ್ಲಿಯೇ ರೆಕಾರ್ಡಿಂಗ್ ಇರುತ್ತಿದ್ದ ಕಾರಣ ಅವರ ಶಿಸ್ತು ಭಂಗವಾಗಲಿಲ್ಲ. ರಾತ್ರಿಯ ಊಟ 8.30ಕ್ಕೆ ಆಗಲೇಬೇಕು. ಮೀನು ಅದರಲ್ಲಿಯೂ ಸಮುದ್ರದ ಮೀನು ಅವರಿಗೆ ಪ್ರಿಯವಾದದ್ದು. ಊಟದಲ್ಲಿ ಖಾರ ಕಡಿಮೆ ಇರಬೇಕು, ಕೊನ ದಿನಗಳಲ್ಲಿ ಡಯಾಬಿಟೀಸ್ ಬಂದರೂ ಮೊದಲಿಂದಲೂ ಸಿಹಿ ಮುಟ್ಟುತ್ತಿರಲಿಲ್ಲ ಅಂತೆ

ಬೆಂಗಳೂರಿನ MTR ಹೋಟೆಲ್ ಫೇವರಿಟ್ ಜಾಗ 

ಇನ್ನು ಹೋಟೆಲ್ ತಿನಿಸಿಗೆ ಮನಸೋತಿದ್ದು ಬೆಂಗಳೂರಿನ ಎಂ.ಟಿ.ಆರ್‌ಗೆ ಮಾತ್ರ.. ಮಗಳ ಮನೆಗೆ ಬಂದಾಗ ಇಲ್ಲಿನ ಖಾರಾಬಾತ್ ಸೇವಿಸೋದನ್ನ ಮರೆಯುತ್ತಿರಲಿಲ್ಲವಂತೆ. ಮದ್ಯಪಾನ, ಧೂಮಪಾನ ಸೇರಿ ಯಾವುದೇ ದುರಾಭ್ಯಾಸವೂ ಲಿಂಗಪ್ಪನವರಿಗೆ ಇರ್ಲಿಲ್ಲ. ಆದ್ರೆ ಸದಾ ಎಲೆ ಅಡಿಕೆ ಜಿಗಿಯುವ ಅಭ್ಯಾಸ ಕೊನೆಯವರೆಗೂ ಇತ್ತು. ಪ್ರಿಯವಾದ ಹವ್ಯಾಸ ಅಂದ್ರೆ ಸಮುದ್ರದ ಅಲೆಗಳನ್ನ ತದೇಕಚಿತ್ತದಿಂದ ವೀಕ್ಷಿಸೋದು.. ಚೆನ್ನೈನ ಮನೆಯಲ್ಲಿದ್ದಾಗ ಎರಡು ಕಿಲೋ ಮೀಟರ್ ದೂರದಲ್ಲಿದ್ದ ಬೀಚಿಗೆ ಒಂಟಿಯಾಗಿ ಕಾರ್ ಡ್ರೈವ್ ಮಾಡಿಕೊಂಡು ಹೋಗಿ ಮರಳಿನ ಮೇಲೆ ಕುಳಿತು ಅಲೆಗಳನ್ನು ನೋಡೋದನ್ನ ಅಭ್ಯಾಸ ಮಾಡ್ಕೊಂಡಿದ್ರಂತೆ. ತಮ್ಮ ಸ್ವರ ಸಂಯೋಜನೆಗಳನ್ನು ತೆಲುಗು ತಮಿಳು ಚಿತ್ರಗಳು ಕದ್ದಾಗ ಕೂಡ ವಿವಾದ ಮಾಡದೆ ಸತ್ಯ ಇಂದಲ್ಲ ನಾಳೆ ತಿಳಿಯುತ್ತದೆ ಅಂತ ಸಮಾಧಾನದಿಂದ ಇರ್ತಿದ್ರಂತೆ. ಅವರ ಸಂಪೂರ್ಣ ರಾಮಾಯಣ' ಹಿಂದಿಗೆ ಡಬ್ ಆದಾಗ ಸ್ವರ ಸಂಯೋಜನೆ ಹಾಗೆ ಬಳಸಿಕೊಂಡರೂ ಅವರ ಹೆಸರನ್ನು ಹಾಕಲಿಲ್ಲ. ಹಲವರು ಕೋರ್ಟಿಗೆ ಹೋಗುವಂತೆ ಸೂಚಿಸಿದರೂ ಲಿಂಗಪ್ಪನವರು ಬಿಲ್‌ಕುಲ್‌ ಒಪ್ಪಲಿಲ್ಲವಂತೆ. ಅದಕ್ಕಿಂತ ಕಠೋರ ಸನ್ನಿವೇಶ ಹಂಸಗೀತೆ' ಚಿತ್ರದ್ದು. ಈ ಚಿತ್ರಕ್ಕೆ ಸಂಪೂರ್ಣವಾಗಿ ಸಂಗೀತವನ್ನು ನೀಡಿದ್ದು ಲಿಂಗಪ್ಪನವರು ಆದರೆ ಅವರಿಗೆ ಒಂದು ಮಾತನ್ನೂ ಹೇಳದೆ ಗುಟ್ಟಾಗಿ ಕೊನೆ ಗಳಿಗೆಯಲ್ಲಿ ಬಾಲಮುರಳಿ ಕೃಷ್ಣ ಅವರ ಬಳಿ ಫೈನಲ್ ಟಚ್ ನೀಡಿಸಿದ ಜಿ.ವಿ.ಅಯ್ಯರ್ ತೆರೆಯ ಮೇಲೆ ಅವರ ಹೆಸರನ್ನೇ ಸಂಗೀತ ನಿರ್ದೇಶಕರು ಎಂದು ತೋರಿಸಿದರು. ಅದಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಬಂದಿತು. ಆದರೆ ಚಿತ್ರದಲ್ಲಿ ಸಂಪೂರ್ಣವಾಗಿ ಇದ್ದಿದ್ದು ಲಿಂಗಪ್ಪನವರ ಸ್ವರ ಸಂಯೋಜನೆ. ಬೇರೆ ಯಾರೇ ಆಗಿದ್ದರೂ ಅದನ್ನು ದೊಡ್ಡಮಟ್ಟದ ವಿವಾದ ಮಾಡುತ್ತಿದ್ದರು. ಅದರೆ ಮೃದು ಮತ್ತು ಸೌಮ್ಯ ಸ್ವಭಾವದ ಲಿಂಗಪ್ಪನವರು ಒಂದು ಮಾತನ್ನು ಯಾರ ಬಳಿಯೂ ಆಡದೆ ನನ್ನ ಹೆಸರಿಲ್ಲದಿದ್ದರೂ ನನ್ನ ಸಂಯೋಜನೆಗೆ ರಾಷ್ಟ್ರಪ್ರಶಸ್ತಿ ಬಂದಿತಲ್ಲ ಅನ್ನೋದೆ ಸಂತೋಷ ಅಂತ ಸುಮ್ನಾಗಿಬಿಟ್ರಂತೆ..

2005ರ ಫೆಬ್ರವರಿ 5ರಂದು ಎದೆನೋವಿನಿಂದ ನಿಧನ 

2005ರ ಫೆಬ್ರವರಿ 5ರ ಶನಿವಾರ ಬೆಳಿಗ್ಗೆ ನಾಲ್ಕೂವರೆಗೆ ಎದೆ ನೋವು ಕಾಣಿಸಿಕೊಂಡಿತು. ಅವರೊಂದಿಗೆ ಮಡದಿ ಮತ್ತು ಮಗಳು ಶ್ರೀಕಲಾ ಇದ್ದರು. ಎಲ್ಲರೂ ಆತಂಕದಿಂದ ಓಡಿ ಬಂದರು. ನೀರು ಕೇಳಿದರು. ತರುವುದರೊಳಗಾಗಿ ಕುಸಿದು ಬಿದ್ದಿದ್ದರು. ಅಲ್ಲಿಗೆ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ಅಧ್ಯಾಯವೊಂದು ಮುಕ್ತಾಯವಾಗಿತ್ತು. ಅವರ ಅಂತಿಮ ಯಾತ್ರೆಯಲ್ಲಿ ಜನಸಾಗರವೇ ಸೇರಿತ್ತು. ಮಗ ಕಿಶೋರ್ ಸರೋದ್ ಮತ್ತು ಸಿತಾರ್ ವಾದ್ಯಗಳನ್ನ ನುಡಿಸುತ್ತಾರೆ. ಹಂಸಲೇಖ, ಗುರುಕಿರಣ್, ಮನೋಮೂರ್ತಿ ಮೊದಲಾದ ಸಂಗೀತ ನಿರ್ದೇಶಕರೊಡನೆ ಕಾರ್ಯ ನಿರ್ವಹಿಸುತ್ತಾ ತಂದೆಯ ಹಾದಿಯಲ್ಲಿಯೇ ಸಾಗಿದ್ದಾರೆ.. ಅವರಿಗೆ ಸ್ವತಂತ್ರ ಸಂಗೀತ ನಿರ್ದೇಶಕರಾಗುವ ಅವಕಾಶ ಇನ್ನೂ ಸಿಕ್ಕಿಲ್ಲ.

ಹಳೇ ತಲೆಮಾರಿನ ದಕ್ಷಿಣ ಭಾರತದ ಶ್ರೇಷ್ಠ ಚಲನಚಿತ್ರ ಸಂಗೀತ ನಿರ್ದೇಶಕರಲ್ಲೊಬ್ಬರಾದ ಟಿ.ಜಿ. ಲಿಂಗಪ್ಪ ಅವರು, 2005ರಲ್ಲಿ ಸಂಗೀತ ಲೋಕದಿಂದ ಮರೆಯಾದ್ರು ಕೂಡ ಅವರು ನೀಡಿರುವಂತಹ ರಾಗ ಸಂಯೋಜನೆಗಳು ಅತ್ಯಾದ್ಭುತ. ಚಿತ್ರ ಜೀವನದಲ್ಲಿ ಟಿ.ಜಿ. ಲಿಂಗಪ್ಪ ನುಡಿಸಿದ ರಾಗಗಳು ಅವರನ್ನ ಸಂಗೀತ ಪ್ರಿಯರು ಎಂದೆಂದಿಗೂ ಮರೆಯದಂತೆ ಮಾಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News