'ಆಯುಷ್ಮಾನ್ ಭಾರತ್' ಆರೋಗ್ಯ ಯೋಜನೆ ಕುರಿತ ಮಹತ್ವದ ಮಾಹಿತಿ

ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಅಡಿಯಲ್ಲಿ 10.74 ಕೋಟಿ ಕುಟುಂಬಗಳು ಆರೋಗ್ಯ ವಿಮೆಯ ಲಾಭವನ್ನು ಪಡೆಯುತ್ತಿದ್ದಾರೆ.

Yashaswini V Yashaswini V | Updated: Dec 8, 2019 , 10:27 AM IST
'ಆಯುಷ್ಮಾನ್ ಭಾರತ್' ಆರೋಗ್ಯ ಯೋಜನೆ ಕುರಿತ ಮಹತ್ವದ ಮಾಹಿತಿ

ನವದೆಹಲಿ: ಆಯುಷ್ಮಾನ್ ಭಾರತ್ ಯೋಜನೆಯನ್ನು ಸುಧಾರಿಸಲು ದೇಶಾದ್ಯಂತ ಸುಮಾರು 1.5 ಲಕ್ಷ ಆರೋಗ್ಯ ಉಪ ಕೇಂದ್ರಗಳು ಮತ್ತು ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಶುಕ್ರವಾರ ಮಾಹಿತಿ ನೀಡಿದ್ದಾರೆ.  ಈ ಎಲ್ಲಾ ಕಾರ್ಯವಿಧಾನಗಳು ಡಿಸೆಂಬರ್ 2022 ರೊಳಗೆ ಪೂರ್ಣಗೊಳ್ಳಲಿವೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಸ್ತೃತ ಸೇವೆಗಳ ಅಡಿಯಲ್ಲಿ, ಸಾಂಕ್ರಾಮಿಕವಲ್ಲದ ಕಾಯಿಲೆಗಳು, ಮಾನಸಿಕ ಆರೋಗ್ಯ, ಕಣ್ಣು, ಮೂಗು, ಕಿವಿ, ಬಾಯಿಯ ಆರೈಕೆ, ಆಘಾತ ಆರೈಕೆ, ನೇತ್ರವಿಜ್ಞಾನ, ವೃದ್ಧಾಪ್ಯಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ನೋವು ನಿವಾರಕ ಚಿಕಿತ್ಸೆ ಸಹ ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಪ್ರಸ್ತುತ, ಹೆಚ್ಚಿನ ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ಸಂತಾನೋತ್ಪತ್ತಿ, ಮಕ್ಕಳ ಆರೈಕೆ ಮತ್ತು ಸಾಂಕ್ರಾಮಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಆಯುಷ್ಮಾನ್ ಭಾರತ್(Ayushman bharat) ಇನ್ಶುರೆನ್ಸ್ ಅಡಿಯಲ್ಲಿ ದೊಡ್ಡ ಆಸ್ಪತ್ರೆಗಳಲ್ಲಿ ಉಳಿದ ಸೌಲಭ್ಯಗಳನ್ನು ಪಡೆಯಬಹುದು. ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಅಡಿಯಲ್ಲಿ 10.74 ಕೋಟಿ ಕುಟುಂಬಗಳು ಆರೋಗ್ಯ ವಿಮೆಯ ಲಾಭವನ್ನು ಪಡೆಯುತ್ತಿದ್ದಾರೆ ಎಂಬುದು ಉಲ್ಲೇಖನೀಯ. ಇದರ ಅಡಿಯಲ್ಲಿ, ವಿಮೆ ಮಾಡಿದ ವ್ಯಕ್ತಿ ವರ್ಷಕ್ಕೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ.

ಏನಿದು 'ಆಯುಷ್ಮಾನ್‌ ಭಾರತ' ಯೋಜನೆ?
ಇದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಮಹಾತ್ವಾಕಾಂಕ್ಷೆಯ ಆರೋಗ್ಯ ವಿಮೆ ಯೋಜನೆಯಾಗಿದೆ. 10 ಕೋಟಿ ಕುಟುಂಬಕ್ಕೆ ಅನುಕೂಲವಾಗಲಿರುವ ಈ ಯೋಜನೆಯಲ್ಲಿ ಪ್ರತಿ ಕುಟುಂಬ ವಾರ್ಷಿಕವಾಗಿ ರೂ. 5 ಲಕ್ಷ ಅರೋಗ್ಯ ವಿಮೆ ಪಡೆಯಲಿದೆ. 

ದೇಶಾದ್ಯಂತ ಈ ಯೋಜನೆ ಅನ್ವಯವಾಗಲಿದ್ದು, ಈ ಯೋಜನೆಯಡಿಯಲ್ಲಿ ಯಾವುದೇ ಸರ್ಕಾರಿ ಅಥವಾ ಸರ್ಕಾರದಿಂದ ನೊಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ರೂ. 5 ಲಕ್ಷದವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಸ್ವಾಸ್ಥ್ಯ ವಿಮೆ ಯೋಜನೆ ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆ ಯೋಜನೆಗಳನ್ನೂ ವಿಲೀನಗೊಳಿಸಲಾಗುತ್ತದೆ.

ಈ ಯೋಜನೆಯಿಂದ ಯಾರೊಬ್ಬರೂ ಹೊರಗುಳಿಯಬಾರದು ಎಂದು ಕುಟುಂಬದ ಗಾತ್ರ ಮತ್ತು ವಯಸ್ಸಿಗೆ ಯಾವುದೇ ಮಿತಿ ಹೇರಲಾಗಿಲ್ಲ. ಈ ಯೋಜನೆಯಡಿ ಆಸ್ಪತ್ರೆ ಸೇರುವ ಮುನ್ನ ಮತ್ತು ಆನಂತರ ವೆಚ್ಚಗಳನ್ನೂ ಸಹ ಭರಿಸಲಾಗುವುದು. ವಿಮೆ ಪಡೆದ ದಿನದಿಂದಲೇ ಎಲ್ಲಾ ಪೂರ್ವನಿರ್ಧರಿತ ಕಾಯಿಲೆಗಳಿಗೂ ಚಿಕಿತ್ಸೆ ಪಡೆಯಬಹುದಾಗಿದೆ. ಫಲಾನುಭವಿಗಳಿಗೆ ಆಸ್ಪತ್ರೆಗೆ ಸಂಚರಿಸಲು ನಿಗದಿತ ಪ್ರಯಾಣ ಭತ್ಯೆಯನ್ನೂ ಸಹ ನೀಡಲಾಗುವುದು. ಈ ಯೋಜನೆಯಡಿ ಎಲ್ಲ ವಿಧವಾದ ದ್ವಿತೀಯ ಆರೋಗ್ಯ ಚಿಕಿತ್ಸೆ ಮತ್ತು ಎಲ್ಲ ತೃತೀಯ ಆರೋಗ್ಯ ಸುರಕ್ಷಾ ಚಿಕಿತ್ಸೆಗಳನ್ನು ನೀಡಲಾಗುವುದು.