ನೋವಾ ಐವಿಎಫ್ ಫರ್ಟಿಲಿಟಿಯಿಂದ ಎಂಬ್ರಿಯಾಲಾಜಿ ಟ್ರೈನಿಂಗ್ ಸೆಂಟರ್ ಆರಂಭ

ದೇಶದಲ್ಲಿ ಬಂಜೆತನ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನುರಿತ ಭ್ರೂಣಶಾಸ್ತ್ರಜ್ಞರ ಕೊರತೆಯು ಒಂದು ಜ್ವಲಂತ ಸಮಸ್ಯೆಯಾಗಿ ಕಾಡುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಫಲವತ್ತತೆ ಸೇವೆಗಳನ್ನು ಒದಗಿಸುವ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ನೋವಾ ಐವಿಎಫ್ ಫರ್ಟಿಲಿಟಿ ಭ್ರೂಣಶಾಸ್ತ್ರಜ್ಞರು ತಮ್ಮ ಪ್ರಾಯೋಗಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ತರಬೇತಿ ಅಕಾಡೆಮಿಯನ್ನು ಆರಂಭಿಸಿದೆ.

Written by - Chetana Devarmani | Last Updated : Aug 24, 2022, 04:00 PM IST
  • ಅಸಿಸ್ಟೆಡ್ ರೀಪ್ರೊಕ್ಟಿವ್ ಟೆಕ್ನಾಲಜಿಯಲ್ಲಿನ ಕೊರತೆ ನೀಗಿಸಲು ಸಹಕಾರಿ
  • ಭಾರತದಲ್ಲಿ 27.5 ಮಿಲಿಯನ್ ದಂಪತಿಗೆ ಬಂಜೆತನದ ಸಮಸ್ಯೆ
  • ಕೇವಲ 1,300 ಭ್ರೂಣಶಾಸ್ತ್ರಜ್ಞರು ಲಭ್ಯ
ನೋವಾ ಐವಿಎಫ್ ಫರ್ಟಿಲಿಟಿಯಿಂದ ಎಂಬ್ರಿಯಾಲಾಜಿ ಟ್ರೈನಿಂಗ್ ಸೆಂಟರ್ ಆರಂಭ  title=
ಎನ್ಎಸಿಇಟಿ

ಬೆಂಗಳೂರು : ದೇಶದಲ್ಲಿ ಬಂಜೆತನ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನುರಿತ ಭ್ರೂಣಶಾಸ್ತ್ರಜ್ಞರ ಕೊರತೆಯು ಒಂದು ಜ್ವಲಂತ ಸಮಸ್ಯೆಯಾಗಿ ಕಾಡುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಫಲವತ್ತತೆ ಸೇವೆಗಳನ್ನು ಒದಗಿಸುವ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ನೋವಾ ಐವಿಎಫ್ ಫರ್ಟಿಲಿಟಿ ಭ್ರೂಣಶಾಸ್ತ್ರಜ್ಞರು ತಮ್ಮ ಪ್ರಾಯೋಗಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ತರಬೇತಿ ಅಕಾಡೆಮಿಯನ್ನು ಆರಂಭಿಸಿದೆ. ನೋವಾ ಅಕಾಡೆಮಿ ಆಫ್ ಕ್ಲಿನಿಕಲ್ ಎಂಬ್ರಿಯಾಲಾಜಿ ಟ್ರೈನಿಂಗ್ (ಎನ್ಎಸಿಇಟಿ) ಹೆಸರಿನಲ್ಲಿ ಆರಂಭವಾಗಿರುವ ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಆಂಡ್ರೋಲಾಜಿ, ಎಂಬ್ರಿಯಾಲಾಜಿ ಮತ್ತು ಕ್ರಿಯೋಪ್ರಿಸರ್ವೇಶನ್ ಸೇರಿದಂತೆ ಐವಿಎಫ್ ಲ್ಯಾಬೊರೇಟರಿಗೆ ಸಂಬಂಧಿಸಿದ ಎಲ್ಲಾ ಪ್ರಾಯೋಗಿಕ ಅಂಶಗಳ ಬಗ್ಗೆ ತರಬೇತಿಯನ್ನು ನೀಡಲಿದೆ. ಭವಿಷ್ಯದ ಭ್ರೂಣಶಾಸ್ತ್ರಜ್ಞರಿಗೆ ಪ್ರಾಯೋಗಿಕ ತರಬೇತಿಯನ್ನು ನೀಡುವ ಗುರಿಯೊಂದಿಗೆ ಶೈಕ್ಷಣಿಕ ಕೇಂದ್ರವು ಅತ್ಯಾಧುನಿಕ ಪ್ರಯೋಗಾಲಯವನ್ನು ಹೊಂದಿದೆ ಮತ್ತು ಐವಿಎಫ್ ಚಿಕಿತ್ಸೆಗಳಿಗೆ ಅಗತ್ಯವಾದ ಇತ್ತೀಚಿನ ತಂತ್ರಜ್ಞಾನಗಳನ್ನು ಹೊಂದಿದೆ.

ಇದನ್ನೂ ಓದಿ : Home Remedies : ಜ್ವರ, ಮೈಕೈ ನೋವು ತೊಲಗಿಸುತ್ತೆ ಗರಿಕೆ ಕಷಾಯ! ಇಲ್ಲಿದೆ ಮಾಡುವ ವಿಧಾನ

ಅಕಾಡೆಮಿ ಬಗ್ಗೆ ಮಾತನಾಡಿದ ನೋವಾ ಐವಿಎಫ್ ಫರ್ಟಿಲಿಟಿಯ ಸಿಇಒ ಶೋಭಿತ್ ಅಗರ್ವಾಲ್ ಅವರು, ಭ್ರೂಣಶಾಸ್ತ್ರಜ್ಞರು ಪ್ರತಿ ಐವಿಎಫ್ ಲ್ಯಾಬ್ ನ ರೂಪುರೇಶೆಯನ್ನು ರೂಪಿಸುತ್ತಾರೆ. ಅಸಿಸ್ಟೆಡ್ ರೀಪ್ರೊಡಕ್ಷನ್ ಚಿಕಿತ್ಸೆಗಳಲ್ಲಿನ ಯಶಸ್ಸಿನಲ್ಲಿ ಅವರ ಕೌಶಲ್ಯ ಮತ್ತು ದಕ್ಷತೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ನೋವಾ ಅಕಾಡೆಮಿ ಆಫ್ ಕ್ಲಿನಿಕಲ್ ಎಂಬ್ರಿಯಾಲಜಿ ಟ್ರೈನಿಂಗ್ (ಎನ್ಎಸಿಇಟಿ) ಅನ್ನು ಅಂತಾರಾಷ್ಟ್ರೀಯ ಮಾರ್ಗಸೂಚಿಗಳ ಅಡಿಯಲ್ಲಿ ಸ್ಥಾಪಿಸಲಾಗಿದೆ. ಈ ಪ್ರತಿಷ್ಠಿತ ನೋವಾ ಐವಿಎಫ್ ಜಾಗತಿಕ ಪಾಲುದಾರಿಕೆಯನ್ನು ಗಳಿಸಿದೆ. ಭ್ರೂಣಶಾಸ್ತ್ರಜ್ಞರಿಗೆ ಇತ್ತೀಚಿನ ತಂತ್ರಜ್ಞಾನಗಳು ಮತ್ತು ಅಂತಾರಾಷ್ಟ್ರೀಯ ಮಾನದಂಡಗಳ ಎಸ್ಒಪಿಗಳನ್ನು ಹೊಂದಿರುವ ಪ್ರಯೋಗಾಲಯಗಳಲ್ಲಿ ತರಬೇತಿ ನೀಡಲಾಗುತ್ತದೆ. ಇದು ಅವರ ಚಿಕಿತ್ಸೆಗಳ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ಎನ್ಎಸಿಇಟಿಯಿಂದ ಪದವಿ ಪಡೆಯುವ ವೃತ್ತಿಪರರು ದೇಶಾದ್ಯಂತ ಇರುವ ಯಾವುದೇ ನೋವಾ ಐವಿಎಫ್ ಫರ್ಟಿಲಿಟಿ ಲ್ಯಾಬ್ ಗಳಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಬಹುದಾಗಿದೆ. ಇದಕ್ಕೂ ಮುನ್ನ ಅವರಿಗೆ ಭ್ರೂಣಶಾಸ್ತ್ರದಲ್ಲಿ ಪರಿಣತಿ ಹೊಂದಿರುವ ವೃತ್ತಿಪರರು ಅವರಿಗೆ ತರಬೇತಿಯನ್ನು ನೀಡುತ್ತಾರೆ. ಈ ಮೂಲಕ 2 ನೇ ಹಂತದ ನಗರಗಳು ಮತ್ತು ಪಟ್ಟಣಗಳಲ್ಲಿರುವ ದಂಪತಿಗಳು ದೊಡ್ಡ ನಗರಗಳಲ್ಲಿರುವಂತೆಯೇ ಪರಿಣತ ಮತ್ತು ಅನುಭವಿ ಭ್ರೂಣಶಾಸ್ತ್ರಜ್ಞರಿಂದ ಪ್ರಮಾಣಿತ ಫರ್ಟಿಲಿಟಿ ಆರೈಕೆ ಕುರಿತಾದ ಚಿಕಿತ್ಸೆಗಳನ್ನು ಪಡೆಯಲು ಸಾಧ್ಯವಾಗುತ್ತದೆ’’ ಎಂದರು.

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಬಂಜೆತನವು ನಿರಂತರವಾಗಿ ಹೆಚ್ಚುತ್ತಿದೆ. ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್-5) ಪ್ರಕಾರ, ಭಾರತದ ಒಟ್ಟು ಫಲವತ್ತತೆ ಪ್ರಮಾಣವು 2015-16 ರಲ್ಲಿ 2.2 (ಪ್ರತಿ ಮಹಿಳೆಗೆ ಸರಾಸರಿ ಜನನಗಳು)ನಿಂದ 2019-21 ರಲ್ಲಿ 2.0 ಕ್ಕೆ ಇಳಿದಿದೆ. ಸುಮಾರು 27.5 ಮಿಲಿಯನ್ ವಿವಾಹಿತ ದಂಪತಿಗಳು ಫಲವತ್ತತೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ Ernst and Young study from 2015- latest available report). ಆದಾಗ್ಯೂ, ಭ್ರೂಣಶಾಸ್ತ್ರಜ್ಞರ ಸಂಖ್ಯೆಯು ಕಡಿಮೆಯಾಗಿದೆ. ಇದರ ಪರಿಣಾಮ ಹಾಲಿ ಇರುವ ಭ್ರೂಣಶಾಸ್ತ್ರ ವೃತ್ತಿಪರರ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

ಭ್ರೂಣಶಾಸ್ತ್ರಜ್ಞರ ಕೌಶಲ್ಯಗಳ ಅಗತ್ಯತೆಗಳ ಬಗ್ಗೆ ಮಾರನಾಡಿದ ನೋವಾ ಐವಿಎಫ್ ಫರ್ಟಿಲಿಟಿಯ ಭ್ರೂಣಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಸುಜಾತ ರಾಮಕೃಷ್ಣನ್ ಅವರು, ``ಭಾರತದಲ್ಲಿ ಪ್ರಸ್ತುತ ಸುಮಾರು 2,000 ಭ್ರೂಣಶಾಸ್ತ್ರ ಲ್ಯಾಬ್ ಗಳಿವೆ. ಇದು ವಿಶ್ವದಲ್ಲಿ ಅತಿ ಹೆಚ್ಚು ಎನಿಸಿದೆ. ಬಂಜೆತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಸುಮಾರು 2.5 ಲಕ್ಷ ಐವಿಎಫ್ ಚಿಕಿತ್ಸೆಗಳು ನಡೆಯುತ್ತಿವೆ. ಆದರೆ, ನಮ್ಮ ಭಾರತದಲ್ಲಿ ಕೇವಲ 1,300 ಭ್ರೂಣಶಾಸ್ತ್ರಜ್ಞರು ಇದ್ದಾರೆ. ಈ ಪೈಕಿ ಸುಮಾರು ಶೇ.26 ರಷ್ಟು ನುರಿತ (ಎಂಎಸ್ಸಿ ಕ್ಲಿನಿಕಲ್ ಎಂಬ್ರಿಯಾಲಾಜಿಸ್ಟ್ ಗಳು) ಮತ್ತು ಶೇ.20 ರಷ್ಟು ಮಂದಿ ಪ್ರಮಾಣೀಕೃತ ಪದವಿಗಳನ್ನು ಪಡೆದವರಿದ್ದಾರೆ. ಇದೇ ವೇಳೆ, ಶೇ.54 ರಷ್ಟು ಜನರಿಗೆ ಯಾವುದೇ ವಿದ್ಯಾರ್ಹತೆ ಇಲ್ಲದಿರುವುದು ಗಮನಾರ್ಹ ಅಂಶವಾಗಿದೆ. ದೇಶದಲ್ಲಿ ಭ್ರೂಣಶಾಸ್ತ್ರಜ್ಞರ ಕೊರತೆ ಇರುವುದನ್ನು ಈ ಅಂಕಿಅಂಶ ಸ್ಪಷ್ಟಪಡಿಸುತ್ತದೆ. ಇದು ದೇಶಾದ್ಯಂತ ಬಂಜೆತನದ ವಿರುದ್ಧ ಹೋರಾಡುತ್ತಿರುವ ದಂಪತಿಗಳಲ್ಲಿ ಹೆಚ್ಚುತ್ತಿರುವ ಅಗತ್ಯವನ್ನು ಪೂರೈಸುವಲ್ಲಿ ಹಿನ್ನಡೆ ಉಂಟಾಗುವಂತೆ ಮಾಡುತ್ತಿದೆ. ವಾಸ್ತವವಾಗಿ, ಸಂಸತ್ತಿನಲ್ಲಿ ಅಂಗೀಕರಿಸಿರುವ ಅಸಿಸ್ಟೆಡ್ ರೀಪ್ರೊಡಕ್ಟಿವ್ ಟೆಕ್ನಾಲಜಿ (ನಿಯಂತ್ರಣ) ಮಸೂದೆ, 2021 ಸಹ ಭ್ರೂಣಶಾಸ್ತ್ರಜ್ಞರಿಗೆ ತರಬೇತಿಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ’’ ಎಂದು ಹೇಳಿದರು.

ಕನಿಷ್ಠ ಭ್ರೂಣಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದ ವಿದ್ಯಾರ್ಥಿಗಳನ್ನು ಎನ್ಎಸಿಇಟಿಯಲ್ಲಿ ತರಬೇತಿಗಾಗಿ ಪ್ರವೇಶ ನೀಡಲಾಗುತ್ತದೆ. ಇವರಿಗೆ ಆರು ತಿಂಗಳ ಕಾಲ ತರಬೇತಿಯನ್ನು ನೀಡಲಾಗುತ್ತದೆ. ಇದಾದ ಬಳಿಕ ಅವರ ಕಾರ್ಯದಕ್ಷತೆ ಮತ್ತು ಕೌಶಲ್ಯಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ನಂತರವಷ್ಟೇ ಅವರನ್ನು ನೋವಾ ಐವಿಎಫ್ ಫರ್ಟಿಲಿಟಿ ಲ್ಯಾಬ್ ಗಳಲ್ಲಿ ಲ್ಯಾಬೊರೇಟರಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತದೆ. ಇದೇ ವೇಳೆ ಹಾಲಿ ಇರುವ ಭ್ರೂಣಶಾಸ್ತ್ರಜ್ಞರಿಗೂ ವಿವಿಧ ತಾಂತ್ರಿಕತೆಗಳ ಬಗ್ಗೆ ಅಲ್ಪಾವಧಿಯ ತರಬೇತಿಯನ್ನು ನೀಡಲಾಗುತ್ತದೆ. ಬಸವೇಶ್ವರನಗರದಲ್ಲಿರುವ ನೋವಾ ಐವಿಎಫ್ ಫರ್ಟಿಲಿಟಿಯ ಕ್ಲಿನಿಕಲ್ ಡೈರೆಕ್ಟರ್ ಡಾ.ಅವಿವಾ ಪಿಂಟೋ ರೊಡ್ರಿಗಸ್ ಅವರು, ನುರಿತ ಭ್ರೂಣಶಾಸ್ತ್ರಜ್ಞರಿಂದ ಚಿಕಿತ್ಸೆ ಪಡೆದರೆ ಯಾವ ರೀತಿ ದಂಪತಿಗಳಿಗೆ ಅನುಕೂಲವಾಗುತ್ತದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. 

ಇದನ್ನೂ ಓದಿ : Prediabetes : ಭಾರತದಲ್ಲಿ ಹೆಚ್ಚುತ್ತಿವೆ ಪ್ರಿಡಯಾಬಿಟಿಸ್ ಪ್ರಕರಣಗಳು.. ಇದು ಏನು ಸೂಚಿಸುತ್ತದೆ?

ಅವರು, ``ಒಂದು ಭ್ರೂಣಶಾಸ್ತ್ರ ಪ್ರಯೋಗಾಲಯವು ಮಹಿಳೆಯ ಗರ್ಭವನ್ನು ಅನುಕರಿಸುತ್ತದೆ. ಭ್ರೂಣಶಾಸ್ತ್ರಜ್ಞರು ಅಂಡಾಣು ಮತ್ತು ವೀರ್ಯವನ್ನು ರಕ್ಷಿಸುವಲ್ಲಿ ಮತ್ತು ಗರ್ಭಧಾರಣೆಗೆ ಕಾರಣವಾಗುವ ಉತ್ತಮವಾದ ವಾತಾವರಣವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅಲ್ಲದೇ, ಅಂಡಾಣು ಮತ್ತು ವೀರ್ಯದ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಕಾರ್ಯನಿರ್ವಹಣೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ವೃತ್ತಿಪರರು ಈ ವಿಚಾರದಲ್ಲಿ ಅನುಭವ ಹೊಂದಿರಬೇಕು ಮತ್ತು ಭ್ರೂಣಗಳನ್ನು ಅತ್ಯಂತ ಕಾಳಜಿಯಿಂದ ನಿರ್ವಹಣೆ ಮಾಡಬೇಕಾಗುತ್ತದೆ. ಅನುಭವಿ ಫರ್ಟಿಲಿಟಿ ಸಲಹೆಗಾರರು ನುರಿತ ಭ್ರೂಣಶಾಸ್ತ್ರಜ್ಞರೊಂದಿಗೆ ಸೇರಿ ಲಕ್ಷಾಂತರ ದಂಪತಿಗಳಿಗೆ ಗುಣಮಟ್ಟದ ಫರ್ಟಿಲಿಟಿ ಚಿಕಿತ್ಸೆಗಳ ಮೂಲಕ ಅವರನ್ನು ಪೋಷಕರನ್ನಾಗಿಸುವ ಅವಕಾಶವನ್ನು ನೀಡಬಹುದಾಗಿದೆ. ಉತ್ತಮ ಗುಣಮಟ್ಟದ ಭ್ರೂಣಶಾಸ್ತ್ರಜ್ಞರನ್ನು ರೂಪಿಸುವುದು ನಮ್ಮ ಗುರಿಯಾಗಿದೆ. ಅವರ ತಾಂತ್ರಿಕ ಕೌಶಲ್ಯಗಳ ಮೇಲೆ ನಮ್ಮ ತರಬೇತಿ ಕೇಂದ್ರೀಕೃತವಾಗಿದೆ ಮತ್ತು ಸಂವಹನ ಹಾಗೂ ಪರಾನುಭೂತಿಯಂತಹ ಕೌಶಲ್ಯಗಳ ಮೇಲೆ ನಾವು ಗಮನಹರಿಸುತ್ತೇವೆ. ಇದು ಫಲವತ್ತತೆಯ ಸಮಸ್ಯೆಗಳಿರುವ ರೋಗಿಗಳ ಜೊತೆಯಲ್ಲಿ ವ್ಯವಹರಿಸುವಾಗ ಅಗತ್ಯವಿರುವ ನಿರ್ಣಾಯಕ ಗುಣವಾಗಿದೆ’’ ಎಂದು ಹೇಳಿದರು.

ನೋವಾ ಅಕಾಡೆಮಿ ಆಫ್ ಕ್ಲಿನಿಕಲ್ ಎಂಬ್ರಿಯಾಲಜಿ ಟ್ರೈನಿಂಗ್ (ಎನ್ಎಸಿಇಟಿ) ಸುಸಜ್ಜಿತವಾಗಿದ್ದು, 25 ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಂಡಿದೆ ಮತ್ತು ಪ್ರಸ್ತುತ ತಂಡದಲ್ಲಿ 15 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಪ್ರಸ್ತುತ ನಾವು ಕೇವಲ ಭ್ರೂಣಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿದ್ದೇವೆ. ಭವಿಷ್ಯದಲ್ಲಿ ಪದವೀಧರರಿಗೂ ಈ ತರಬೇತಿ ನೀಡುವ ಯೋಜನೆಯನ್ನು ಹೊಂದಿದ್ದೇವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News