ಬೆಂಗಳೂರು: ನಮ್ಮ ಕಾಲದಲ್ಲಿ ಏನು ಬೇಕಾದರೂ ತಿಂದು ಅರಗಿಸುತ್ತಿದ್ದೆವು. ಈ ಕಾಲದಲ್ಲಿ ಎಲ್ಲದಕ್ಕೂ ವೈದ್ಯರ ಬಳಿ ಓಡಿ ಹೋಗ್ತಾರೆ ಅಂತ ಮನೆಯಲ್ಲಿ ಹಿರಿಯರು ಆಗಾಗ್ಗೆ ಹೇಳುತ್ತಿರುತ್ತಾರೆ. ನಮ್ಮ ಅಜ್ಜ ಅಜ್ಜಿಯಷ್ಟು ನಾವು ಆರೋಗ್ಯವಾಗಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ನಮ್ಮ ಹಿರಿಯರ ಆರೋಗ್ಯದ ಗುಟ್ಟೇನು ಅಂತ ಗೊತ್ತಾ?
ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಹೋಗುವವರು ಅಲ್ಲಿ ಅಟ್ಟವನ್ನು ಒಮ್ಮೆ ಗಮನಿಸಿ. ಅಲ್ಲಿ ನಿಮಗೆ ತಾಮ್ರ ಅಥವಾ ಹಿತ್ತಾಳೆಯ ಪಾತ್ರೆಗಳು ಕಾಣಸಿಗಬಹುದು. ಹಿಂದಿನ ಕಾಲದಲ್ಲಿ ಜನರು ಹೆಚ್ಚಾಗಿ ಮಡಿಕೆ, ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳನ್ನು ಬಳಸುತ್ತಿದ್ದರು. ತಾಮ್ರದ ಪಾತ್ರೆಯಲ್ಲಿ ಇರಿಸಿದ ಆಹಾರ ಸೇವನೆ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಅರೋಗ್ಯ ಉತ್ತಮವಾಗಿರುತ್ತದೆ ಎಂಬ ಕಾರಣಕ್ಕೆ ತಾಮ್ರದ ಪಾತ್ರೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿತ್ತಂತೆ. ಈಗಲೂ ರಾತ್ರಿ ವೇಳೆ ತಾಮ್ರದ ಚೊಂಬಿನಲ್ಲಿ ನೀರು ತುಂಬಿಟ್ಟು ಬೆಳಿಗ್ಗೆ ಎದ್ದ ತಕ್ಷಣ ಆ ನೀರನ್ನು ಸೇವಿಸಿದರೆ ಹಲವು ಕಾಯಿಲೆಗಳಿಂದ ನಾವು ದೂರ ಇರಬಹುದು ಎಂದು ಅಮ್ಮ ಹೇಳುತ್ತಿರುತ್ತಾರೆ.
ಇಂದಿನ ದಿನಗಳಲ್ಲಿ ನಮ್ಮ ನಿಮ್ಮೆಲ್ಲರ ಜೀವನ ಶೈಲಿ ಬದಲಾಗಿದೆ. ತಾಮ್ರದ ಪಾತ್ರೆ ಬಳಸುವವರ ಸಂಖ್ಯೆ ಬೆರಳೆಣಿಕೆಯಷ್ಟು. ನಾವು ಅಡಿಗೆ ಮಾಡಲು ತಾಮ್ರದ ಪಾತ್ರೆಗಳನ್ನು ಬಳಸಲು ಸಾಧ್ಯವಾಗದಿದ್ದರೂ ತಾಮ್ರದ ಲೋಟ ಅಥವಾ ಚೊಂಬನ್ನು ನಿತ್ಯ ಬಳಸಲು ಕಷ್ಟವಾಗುವುದಿಲ್ಲ ಅಲ್ಲವೇ. ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಸಿಗುವ ಆರೋಗ್ಯಕರ ಲಾಭದ ಬಗ್ಗೆ ತಿಳಿದರೆ ನೀವೂ ಕೂಡ ಕಂಡಿತ ತಾಮ್ರದ ಲೋಟದಲ್ಲಿ ನೀರು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತೀರಿ.
ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಇದು ಜಾಂಡೀಸ್ ಜೊತೆ ಇನ್ನು ಹಲವು ರೋಗಗಳನ್ನು ತಡೆಗಟ್ಟುತ್ತದೆ ಎಂದು ನಿಮಗೆ ತಿಳಿದಿದೆಯೇ…!
ಹೌದು, ತಾಮ್ರದ ಪಾತ್ರೆ ಮತ್ತು ಲೋಟದಲ್ಲಿ ನೀರು ಕುಡಿಯುವವರ ಅರೋಗ್ಯ ವೃದ್ಧಿಯಾಗುತ್ತೆ. ಹಾಗಾದರೆ ಇದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿಯಿರಿ:
* ಜಾಂಡೀಸ್ ಮತ್ತು ಅತಿಸಾರ ಸಾಮಾನ್ಯವಾಗಿ ನೀರಿನಿಂದ ಹರಡುವ ಖಾಯಿಲೆಗಳಾಗಿದ್ದು ತಾಮ್ರದ ಲೋಟದಲ್ಲಿ ನೀರು ಸೇವಿಸುವುದರಿಂದ ಹೊಟ್ಟೆ ನಿರ್ವಿಷಗೊಳ್ಳುತ್ತದೆ ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ.
* ತಾಮ್ರದ ಅಂಶವಿರುವ ನೀರು ಕಾಯಿಲೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ತಡೆಯುತ್ತವೆ.
* ಮಹಿಳೆಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ ಅನೇಮಿಯಾ. ತಾಮ್ರದ ಪಾತ್ರೆಯಲ್ಲಿ ನೀರು ಸೇವಿಸುವುದು ಇದಕ್ಕೆ ಉತ್ತಮ ಪರಿಹಾರವಾಗಿದೆ.
* ತಾಮ್ರದ ಲೋಟದಲ್ಲಿ ನೀರಿನ ಸೇವನೆ ಮಾಡುವುದರಿಂದ ಹಿಮೊಗ್ಲೋಬಿನ್ ಮಟ್ಟ ಹೆಚ್ಚುತ್ತದೆ.
* ಗರ್ಭಿಣಿ ಮಹಿಳೆಯರು ತಾಮ್ರದ ಪಾತ್ರೆಯಲ್ಲಿ ನೀರು ಸೇವಿಸುವುದರಿಂದ ಮಗುವಿನ ಹೃದಯ, ರಕ್ತನಾಳಗಳು, ಮೂಳೆಗಳು ಸರಿಯಾಗಿ ಬೆಳೆಯಲು ಸಹಾಯಕವಾಗುತ್ತದೆ.
* ತಾಮ್ರ ಅಂಶವಿರುವ ನೀರಿನಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುವ ಗುಣವಿದೆ ಎಂದು ಅಧ್ಯಯನವೊಂದು ಕಂಡು ಹಿಡಿದಿದೆ.
* ತಾಮ್ರದ ಅಂಶವಿರುವ ನೀರು ದೇಹದ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
* ತಾಮ್ರದ ಪಾತ್ರೆಯ ನೀರು ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಿಸುತ್ತದೆ.