ಬೆಂಗಳೂರು : ಕೆಲವೇ ದಿನಗಳಲ್ಲಿ ವಲೈಂಟೆನ್ ಡೇ (Valentain Day) ಬರಲಿದೆ. ಬುದ್ದಿ ಬದಿಗೆ ಸರಿದು ಭಾವನೆಗಳೇ ಮೆರವಣೆಗೆ ಹೊರಡುವ ದಿನ . ಹೃದಯದೊಳಗಿನ ಉತ್ಕಟ ಅಭಿಲಾಶೆ ಚಿಮ್ಮುವ ಸಮಯ. ಈ ಪ್ರೇಮ, ಪ್ರೀತಿ, ಆರಾಧನೆ, ಒಲುಮೆ ಮುಂತಾದ ಭಾವನೆಗಳು ಎಲ್ಲಿಂದ ಹುಟ್ಟುತ್ತವೆ ಗೊತ್ತಾ.? ಶತಮಾನಗಳಿಂದಲೂ ಈ ಬಗ್ಗೆ ತಪ್ಪು ಕಲ್ಪನೆಗಳಿದ್ದವು. ಈ ಪ್ರೀತಿ, ಪ್ರೇಮ, ಒಲುಮೆ ಇವೆಲ್ಲಾ ಹೃದಯದ ಭಾವನೆಗಳು ಎಂಬ ತಪ್ಪು ಕಲ್ಪನೆ ಇತ್ತು.
ಪ್ರೇಮ ಭಾವ ಹೊಮ್ಮುವುದು ಹೃದಯದಿಂದ ಅಲ್ಲ :
ಗೊತ್ತಿರಲಿ, ಪ್ರೇಮ ಭಾವನೆಗಳೆಲ್ಲಾ (Feeling of love) ಹೊಮ್ಮುವುದು ಹೃದಯದಿಂದ ಅಲ್ಲ, ನಮ್ಮ ಮೆದುಳಿನಿಂದ (Brain) ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿಲ್ಲ, ಅದು ಸಹಜ ಕೂಡಾ. ಯಾಕಂದರೆ, ಪ್ರೇಮಿಯ ನೆನಪಾದಾಗ ಢವಢವ ಹೊಡೆದುಕೊಳ್ಳುವುದು ಹೃದಯ (Heart). ಮದುರ ಮಿಲನ ಒದಗಿ ಬಂದಾಗ ಟಂಟಂ ಎಂದು ಹೊಡೆದುಕೊಳ್ಳುವುದು ಎದೆಗೂಡಿನ ತಮಟೆ, ಅಂದರೆ ಹೃದಯ. ಪ್ರೇಮಿ ಕೈಕೊಟ್ಟಾಗ ಕಿವಿಚಿ ಬರುವುದು ಹೊಟ್ಟೆ. ಹೀಗೆಲ್ಲಾ ಆಗುವಾಗ ಅದಕ್ಕೆಲ್ಲಾ ಕಾರಣವಾದ ಮೆದುಳು ತಣ್ಣಗೆ ಕುಳಿತಿರುತ್ತದೆ. ನಿಜಕ್ಕೂ ಪ್ರೇಮದ ಉತ್ಕಟ ಭಾವಾವೇಶಕ್ಕೆ ಕಾರಣ ನಮ್ಮ ಮೆದುಳು. ಆದರೂ ತುಂಬಾ ಕೂಲಾಗಿರುತ್ತದೆ. ಯಾವುದಕ್ಕೂ ಕಾರಣವಲ್ಲದ ಹೃದಯ ಧಗ್ ಧಗ್ ಹೊಡೆದುಕೊಳ್ಳುತ್ತದೆ. ಮೆದುಳಿನಲ್ಲಿ ಈ ಭಾವಾವೇಶಕ್ಕೆ ಕಾರಣವಾಗುವುದು ಸಿಂಪಲ್ ಒಂದು ಹಾರ್ಮೋನ್ (hormone). ನಮ್ಮನ್ನು ಪ್ರೇಮಪಾಶಕ್ಕೆ ಸಿಲುಕಿಸಿ ತಮಾಶೆ ನೋಡುವುದು ಕೂಡಾ ಇದೇ ಹಾರ್ಮೋನು. ಅದು ಹುಟ್ಟೋದು ಅಂದರೆ ಸ್ರವಿಸೋದು ಮೆದುಳಿನಲ್ಲಿ. ಹೃದಯಕ್ಕೂ ಅದಕ್ಕೂ ಯಾವುದೇ ಲಿಂಕ್ ಇಲ್ಲ.
ಇದನ್ನೂ ಓದಿ : ತ್ವಚೆಯಲ್ಲಿ ಈ 4 ಲಕ್ಷಣಗಳು ಕಾಣುತ್ತಿದೆಯಾ..? ಅದು ಗಂಭೀರ ಕಾಯಿಲೆಯ ಮೊದಲ ಲಕ್ಷಣ
ಪ್ರೇಮಕ್ಕೆ ಯಾವ ಹಾರ್ಮೋನ್ ಕಾರಣ..? :
ಪ್ರೇಮಕ್ಕೆ ಯಾವ ಹಾರ್ಮೋನ್ ಕಾರಣ.? ಲವ್ (Love) ಎಲ್ಲಿ..? ಯಾವಾಗ? ಏಕೆ ಉದ್ಭವವಾಗುತ್ತದೆ ಎಂಬುದಕ್ಕೆ ಉತ್ತರ ಹುಡುಕಲು ವಿಜ್ಞಾನಿಗಳು ಸಾಕಷ್ಟು ಒದ್ದಾಡಿದ್ದಾರೆ. ನಮ್ಮನ್ನು ಪ್ರೇಮ ಪಾಶಕ್ಕೆ ಸಿಲುಕಿಸುವುದು ಏಳು ಮಲ್ಲಿಗೆ ತೂಕದ ರಾಜಕುಮಾರಿ ಅಲ್ಲ. ಅಥವಾ ಶ್ವೇತ ಕುದುರೆಯನ್ನೇರಿ ಬರುವ ರಾಜಕುಮಾರ ಅಲ್ಲವೇ ಅಲ್ಲ. ಅದೊಂದು ಸಿಂಪಲ್ ಹಾರ್ಮೋನು. ಅದನ್ನು ಅಕ್ಸಿಟೋಸಿನ್ (Oxytocin) ಎಂದು ಕರೆಯುತ್ತಾರೆ.
ಹಾಗಾದರೆ, ಏನಿದು ಅಕ್ಸಿಟೋಸಿನ್..? :
ಇದೊಂದು ಹಾರ್ಮೋನು. ಇದು ಸ್ರವಿಸೋದು ಮೆದುಳಿನಲ್ಲಿ. ಇದರ ಉಗಮ ಹೈಪೋಥೆಲಮಸ್ (hypothalamus )ಗ್ರಂಥಿ. ಮೊದಲ ನೋಟಕ್ಕೆ ಲವ್ ಆಯ್ತು ಅಂತಾರಲ್ಲ, ಅದಕ್ಕೆ ಕಾರಣ ಈ ಅಕ್ಸಿಟೋಸಿನ್. ಈ ಹಾರ್ಮೋನ್ ಸ್ರವಿಸಿದೆ ಅಂತಿಟ್ಟುಕೊಳ್ಳಿ. ಆಗ ನಿಮ್ಮ ಎದುರಿಗೆ ಇರುವವರ ಮೇಲೆ ನಿಮಗೆ ಒಂದು ರೀತಿ ಅನುರಾಗ (Empathy) ಉಂಟಾಗುತ್ತದೆ. ಆ ವ್ಯಕ್ತಿಯ ಮೇಲೆ ಅಮಿತ ವಿಶ್ವಾಸ (Trust) ಬೆಳೆಯುತ್ತದೆ. ಗೊತ್ತಿಲ್ಲದೆ ಅಟ್ಯಾಚ್ಮೆಂಟ್ ಸೃಷ್ಟಿಯಾಗುತ್ತದೆ. ಇದಕ್ಕೆಲ್ಲಾ ಕಾರಣ ಪುರುಷ ಅಕ್ಸಿಟೋಸಿನ್. ಕಾವ್ಯಗಳಲ್ಲಿ ಬರುವ ಮನ್ಮಥನ ಹೂಬಾಣವೆಂದರೆ ಒಂದು ರೀತಿಯಲ್ಲಿ ಆಕ್ಸಿಟೋಸಿನ್. ಈ ಹಾರ್ಮೋನು ಸ್ರವಿಸದೇ ಹೋದರೆ ಯಾವ ಸುರಸುಂದರಿ ಬಂದು ಎದುರಿಗೆ ನಿಂತರೂ ನಿಮ್ಮಲ್ಲಿ ಯಾವ ಭಾವನೆಯೂ ಉಕ್ಕೋದಿಲ್ಲ. ಒಂದು ರೀತಿಯಲ್ಲಿ ಬೋರ್ಗಲ್ಲಿನಂತೆ ನೀವಿದ್ದು ಬಿಡುತ್ತೀರಿ.
ಇದನ್ನೂ ಓದಿ : Health & Lemon : ಅತಿಯಾದರೆ ಅಮೃತವೂ ವಿಷ.! ಈ ಆರು ಕಾರಣಗಳಿದ್ದರೆ ನೀವು ನಿಂಬೆಯಿಂದ ದೂರವಿರಲೇ ಬೇಕು..!
ಇದು ಪ್ರಯೋಗಶಾಲೆಗಳಲ್ಲಿ ದೃಢ ಪಟ್ಟಿದೆ :
ಲವ್ ಗೆ ಕಾರಣವಾಗುವ ಹಾರ್ಮೋನ್ ಅಕ್ಸಿಟೋಸಿನ್ ಎಂಬುದು ಪ್ರಯೋಗಗಳಲ್ಲಿ ದೃಢ ಪಟ್ಟಿದೆ. ವಿಜ್ಞಾನಿಗಳು ಪರಸ್ಪರ ಕ್ಯಾರೇ ಎನ್ನದ ಎರಡು ಪ್ರಾಣಿಗಳನ್ನು ಒಟ್ಟಿಗೆ ಇಟ್ರು. ಅವುಗಳ ರಕ್ತಕ್ಕೆ ಆಕ್ಸಿಟೊಸಿನ್ ಹಾರ್ಮೋನ್ ಚುಚ್ಚಿ ಸುಮ್ಮನಿದ್ದು ಬಿಟ್ರು. ಇಂಜೆಕ್ಷನ್ (Injection) ಪ್ರಭಾವ ಹೇಗಿತ್ತು ಎಂದರೆ ಪರಸ್ಪರ ಮುಖವನ್ನೇ ನೋಡದ ಎರಡು ಜೀವಿಗಳು, ಊಟ ಉಣಿಸನ್ನೇ ತೊರೆದು ಕೇವಲ ಬಿಸಿಯಪ್ಪುಗೆಯಲ್ಲೇ, ಗಾಢ ಅನುರಾಗದಲ್ಲಿಯೇ ಬೆಸೆದುಕೊಂಡು ಬಿಟ್ಟಿದ್ದವು. ಅವುಗಳ ನ್ಯೂನತೆಗಳೆಲ್ಲಾ ತಂತಾನೆ ಮರೆಯಾಗಿ ಹೋಗಿತ್ತು. ಪ್ರೇಮದ ಅಮಲು ತಲೆಗೇರಿತ್ತು. ಅಕ್ಸಿಟೋಸಿನ್ ಪ್ರಭಾವ ಕಡಿಮೆಯಾದಾಗ ಪ್ರೇಮದ ಅಮಲು ಇಳಿದಿತ್ತು.
ನಿಮ್ಮ ಪ್ರೇಮದ ಪರಿಯ ಹಿಂದಿದೆ ನಾಲ್ಕು ಹಾರ್ಮೋನು :
ನಿಮಗೆ ಗೊತ್ತಿರಲಿ, ಒಲವು, ಪ್ರೇಮ, ಪ್ರೀತಿ, ಲೈಂಗಿಕ ಆಸೆ ಇವಕ್ಕೆಲ್ಲಾ ನಾಲ್ಕು ಪ್ರಮುಖ ಹಾರ್ಮೋನು ಕಾರಣವಾಗುತ್ತದೆ. ಮೆದುಳಿನಲ್ಲಿ ಫಿನೈಲೀಥೈಲ್ ಅಮೈನ್ (finailithaline amine) ಎಂಬ ಹಾರ್ಮೋನು ಸ್ಪುರಿಸಿದಾಗ ಮಾತ್ರ ಗಂಡು ಹೆಣ್ಣಿನ ನಡುವೆ ಆಕರ್ಷಣೆ ಉಂಟಾಗುತ್ತದೆ. ಮೆದುಳಿನಲ್ಲಿ ಡೋಪಮೈನ್ (Dopamine) ಎಂಬ ಹಾರ್ಮೋನು ಸ್ಪುರಿಸಿದಾಗ ಮಾತ್ರ ಪ್ರೇಮಿಗಳಲ್ಲಿ ಒಂದು ರೀತಿಯ ‘ಪ್ರೇಮಜ್ವರ ಆವರಿಸುತ್ತದೆ. ವ್ಯಕ್ತಿಯ ಬಗ್ಗೆ ಬಲವಾದ ವಾಂಛೆ ಬೆಳೆಯುತ್ತದೆ. ಪಡೆದೇ ತೀರಬೇಕು ಎಂಬ ಮನೋಭಾವ ಉಕ್ಕುತ್ತದೆ. ನಿದ್ದೆ ಬರಲ್ಲ, ಊಟ ಹತ್ತಲ್ಲ ಪ್ರೇಮಿ ಕಾಣಿಸದೇ ಹೋದರೂ ಚಿತ್ತ ವಿಲವಿಲ ಒದ್ದಾಡುತ್ತದೆ. ಇದಕ್ಕೆ ಕಾರಣ ಡೋಪಮೈನ್. ಮೂರನೇ ಹಾರ್ಮೋನು ಫೆರೋಮೋನ್(Pheromones). ಗಂಡು ಹೆಣ್ಣನ್ನು ಪರಸ್ಪರ ಪ್ರೇಮ ಬಂಧನದಲ್ಲಿಡುವ ಹಾರ್ಮೋನು ಇದು. ಕೂಡಿ ಬಾಳೋಣ, ಓಡಿ ಹೋಗೋಣ, ಎಂಬಂಥ ಅಲೋಚನೆಗಳು ಬರುವುದು ಈ ಹಂತದಲ್ಲಿಯೇ. ಇದು ಉಲ್ಲಾಸದ ಹಾರ್ಮೋನು . ಗಂಡು ಹೆಣ್ಣು ಒಟ್ಟಿಗಿರಲು ಸಹಕಾರಿ.
ಇದನ್ನೂ ಓದಿ : Googleನ ನೂತನ ವೈಶಿಷ್ಟ್ಯ, ಶೀಘ್ರವೇ ಸ್ಮಾರ್ಟ್ ಫೋನ್ ಮೂಲಕ Heart Rate ಪರೀಕ್ಷೆ
ಈ ಪ್ರೇಮದ ಉನ್ಮಾದ ಇಳಿಯಲೇ ಬೇಕು. ಬದುಕು ವಾಸ್ತವಕ್ಕೆ ಮರಳಲೇ ಬೇಕು. ಆದರೂ ಕೌಟುಂಬಿಕ ಜೀವನದಲ್ಲಿ ಪ್ರೇಮದ ಬಂಧ, ಪರಸ್ಪರ ಪ್ರೀತಿ ಹಾಗೇ ಉಳಿಯುತ್ತದೆ. ಅದಕ್ಕೆ ಕಾರಣ ಪದೇ ಪದೇ ಸ್ರವಿಸುವ ಆಕ್ಸಿಟೋಸಿನ್. ಆಕ್ಸಿಟೋಸಿನ್ ಪದೇ ಪದೇ ಸ್ರವಿಸಿದರೆ ಮಾತ್ರೆ ‘ಈ ಬಂಧನ’ ಹಾಗೇ ಮುಂದುವರಿಯುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.