'ಜಗತ್ತು ಹವಾಮಾನ ಬದಲಾವಣೆಯ ಋಣಾತ್ಮಕ ಪರಿಣಾಮಗಳನ್ನು ಎದುರಿಸುತ್ತಿದೆ'; ಪ್ರಧಾನಿ ಮೋದಿ

ಗ್ರೇಟರ್ ನೋಯ್ಡಾದಲ್ಲಿ ಸಿಒಪಿ 14 ನೇ ಸಮ್ಮೇಳನ ನಡೆಯುತ್ತಿದೆ. ಹೆಚ್ಚುತ್ತಿರುವ ಮರಳುಗಾರಿಕೆಯಿಂದ ಜಗತ್ತನ್ನು ಉಳಿಸುವುದು ಸಮ್ಮೇಳನದ ಉದ್ದೇಶವಾಗಿದೆ.

Last Updated : Sep 9, 2019, 12:28 PM IST
'ಜಗತ್ತು ಹವಾಮಾನ ಬದಲಾವಣೆಯ ಋಣಾತ್ಮಕ ಪರಿಣಾಮಗಳನ್ನು ಎದುರಿಸುತ್ತಿದೆ'; ಪ್ರಧಾನಿ ಮೋದಿ title=
ಫೋಟೋ ಕೃಪೆ: ANI

ನೋಯ್ಡಾ: ಗ್ರೇಟರ್ ನೋಯ್ಡಾದಲ್ಲಿ ಇಂದು ಕಾನ್ಫರೆನ್ಸ್ ಆಫ್ ಪಾರ್ಟಿಸ್(COP) 14 ನೇ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ, ಪ್ರಧಾನ ಮಂತ್ರಿ ನರೇಂದ್ರ ಮೋದಿ,'ಜಗತ್ತು ಹವಾಮಾನ ಬದಲಾವಣೆಯ ಋಣಾತ್ಮಕ ಪರಿಣಾಮಗಳನ್ನು ಎದುರಿಸುತ್ತಿದೆ' ಎಂದು ಎಚ್ಚರಿಸಿದ್ದಾರೆ.

ಸಮ್ಮೇಳನದಲ್ಲಿ ಹಾಜರಿದ್ದ 196 ದೇಶಗಳ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ನಮ್ಮ ಭೂಮಿಯನ್ನು ನಾವು ತಾಯಿಯಾಗಿ ಪರಿಗಣಿಸುತ್ತೇವೆ. ಇಡೀ ಪ್ರಪಂಚವು ಹವಾಮಾನ ಬದಲಾವಣೆಯ ಋಣಾತ್ಮಕ ಪರಿಣಾಮಗಳನ್ನು ಎದುರಿಸುತ್ತಿದೆ. ಮರಳುಗಾರಿಕೆಯಿಂದ ಜಗತ್ತನ್ನು ಉಳಿಸಲು ಭಾರತ ಬದ್ಧವಾಗಿದೆ. ಅದಕ್ಕಾಗಿಯೇ ಭಾರತವು ಎರಡು ವರ್ಷಗಳ ಕಾಲ ಈ ಸಮ್ಮೇಳನದ ಆತಿಥೇಯರಾಗಲು ನಿರ್ಧರಿಸಿದೆ ಎಂದು ಹೇಳಿದರು.

ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಲು ನಾವು ನಿರ್ಧರಿಸಿದ್ದು, ಜೈವಿಕ ಗೊಬ್ಬರವನ್ನು ಉತ್ತೇಜಿಸುತ್ತಿದ್ದೇವೆ. ನೀರಿನ ಸಂರಕ್ಷಣೆಗಾಗಿ ಭಾರತ ಜಲ ವಿದ್ಯುತ್ ಸಚಿವಾಲಯವನ್ನು ರಚಿಸಿದೆ. ಸಿಂಗಲ್ ಯೂಸ್ ಪ್ಲಾಸ್ಟಿಕ್ ಮೇಲೆ ಸಂಪೂರ್ಣ ನಿಷೇಧ ಹೇರಲು ಭಾರತ ನಿರ್ಧರಿಸಿದೆ. ಸಿಂಗಲ್ ಯೂಸ್ ಪ್ಲಾಸ್ಟಿಕ್ ಗೆ ವಿದಾಯ ಹೇಳಲು ಪ್ರಪಂಚಕ್ಕೆ ಕರೆ ನೀಡುವ ಸಮಯ ಬಂದಿದೆ ಎಂದು ನಾನು ನಂಬುತ್ತೇನೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದು ನಮ್ಮ ಉದ್ದೇಶ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪುನರುಚ್ಚರಿಸಿದರು.

ಗ್ರೇಟರ್ ನೋಯ್ಡಾದ ಎಕ್ಸ್‌ಪೋ ಮಾರ್ಟ್‌ನಲ್ಲಿ ನಡೆಯುತ್ತಿರುವ ಸಿಒಪಿ -14 ಕಾರ್ಯಕ್ರಮದಲ್ಲಿ ಸುಮಾರು 196 ದೇಶಗಳು ಭಾಗವಹಿಸುತ್ತಿವೆ. ಸೆಪ್ಟೆಂಬರ್ 2 ರಂದು ಸಿಒಪಿ -14 ಸಮ್ಮೇಳನವನ್ನು ಪ್ರಾರಂಭಿಸಲಾಯಿತು. ಇದನ್ನು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಉದ್ಘಾಟಿಸಿದರು. ಸಿಒಪಿ 14ನೇ ಸಮ್ಮೇಳನದ ಉದ್ದೇಶವು ಹೆಚ್ಚುತ್ತಿರುವ ಮರಳುಗಾರಿಕೆಯಿಂದ ಜಗತ್ತನ್ನು ಉಳಿಸುವುದು. ಈ ಕಾರ್ಯಕ್ರಮವು ವಿಶ್ವಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿದೆ.

ಈ ಸಮ್ಮೇಳನದ ಮೂಲಕ, ಮರಳುಗಾರಿಕೆಯನ್ನು ನಿಭಾಯಿಸಲು ಭಾರತವು ಇಡೀ ಜಗತ್ತಿಗೆ ಸಂದೇಶವನ್ನು ನೀಡಲಿದೆ. ಈ ಸಮಯದಲ್ಲಿ ಸಮ್ಮೇಳನದ ಅಧ್ಯಕ್ಷತೆಯನ್ನು ಚೀನಾ ವಹಿಸಿದೆ. 2017 ರಲ್ಲಿ ಚೀನಾ ಇದನ್ನು ಆಯೋಜಿಸಿತ್ತು. ಮುಂದಿನ ಎರಡು ವರ್ಷಗಳ ಕಾಲ ಅಂದರೆ 2020ರ ವರೆಗೆ ಭಾರತ ಈ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿದೆ. ಈ ಕಾರ್ಯಕ್ರಮವು ಸೆಪ್ಟೆಂಬರ್ 13 ರವರೆಗೆ ನಡೆಯುತ್ತದೆ. ಭಾರತದಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿದೆ.
 

Trending News