ಕೋಟಾ ಆಸ್ಪತ್ರೆಯಲ್ಲಿ 34 ದಿನಗಳಲ್ಲಿ 106 ಶಿಶುಗಳ ಮೃತ್ಯು

ಶುಕ್ರವಾರ ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮಾ ಅವರ ಭೇಟಿಗೂ ಮೊದಲು ಬೆಳಗ್ಗೆ ಒಂದು ಮಗು ಮತ್ತು ನಂತರ ಇನ್ನೊಂದು ಮಗು ಸಾವನ್ನಪ್ಪಿದೆ.

Last Updated : Jan 4, 2020, 06:32 AM IST
ಕೋಟಾ ಆಸ್ಪತ್ರೆಯಲ್ಲಿ 34 ದಿನಗಳಲ್ಲಿ 106 ಶಿಶುಗಳ ಮೃತ್ಯು title=

ನವದೆಹಲಿ: ಕೋಟಾದಲ್ಲಿ ಶಿಶು ಸಾವಿನ ಸಂಖ್ಯೆ 106 ಕ್ಕೆ ಏರಿದೆ, ಶುಕ್ರವಾರ (ಜನವರಿ 3) ಇನ್ನೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮಾ ಅವರ ಭೇಟಿಗೂ ಮೊದಲು ಬೆಳಗ್ಗೆ ಒಂದು ಮಗು ಮತ್ತು ನಂತರ ಇನ್ನೊಂದು ಮಗು ಸಾವನ್ನಪ್ಪಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ, ಆಸ್ಪತ್ರೆಯಲ್ಲಿ ಹಣ ಮತ್ತು ಇತರ ಸೌಲಭ್ಯಗಳ ಕೊರತೆಯಿದೆ ಮತ್ತು ಶೀಘ್ರದಲ್ಲೇ ಆಸ್ಪತ್ರೆ ಆಡಳಿತಕ್ಕೆ ಸರ್ಕಾರ ಹೆಚ್ಚಿನ ಹಣವನ್ನು ಮಂಜೂರು ಮಾಡಲಿದೆ ಎಂದು ಭರವಸೆ ನೀಡಿದರು. "ಜನವರಿ 15 ರೊಳಗೆ  ಕೇಂದ್ರೀಕೃತ ಆಮ್ಲಜನಕ ವ್ಯವಸ್ಥೆ, ವೆಂಟಿಲೇಟರ್ ಮತ್ತು ನೆಬ್ಯುಲೈಸರ್ಗಳ ವ್ಯವಸ್ಥೆ ಆಸ್ಪತ್ರೆಗೆ ಲಭ್ಯವಾಗಲಿದೆ. ಆಸ್ಪತ್ರೆ ಆಡಳಿತಕ್ಕೆ ಸಾಕಷ್ಟು ಹಣವಿದೆ. ಹೆಚ್ಚಿನ ಹಣದ ಅಗತ್ಯವಿದ್ದರೆ ಅದನ್ನು ರಾಜ್ಯ ಸರ್ಕಾರವು ಮಂಜೂರು ಮಾಡುತ್ತದೆ" ಎಂದು ಅವರು ಭರವಸೆ ನೀಡಿದರು.

ಸಾವಿನ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗಿದ್ದರೂ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸಾವಿನ ಸಂಖ್ಯೆ ಕಡಿಮೆ ಎಂದು ರಾಜ್ಯ ಅಧಿಕಾರಿಗಳು ವರದಿ ಮಾಡಿದ್ದಾರೆ. ರಾಜ್ಯ ಅಧಿಕಾರಿಗಳು ಉಲ್ಲೇಖಿಸಿದ ಅಂಕಿಅಂಶಗಳ ಪ್ರಕಾರ, ಜೆ.ಕೆ. ಲೋನ್ ಸರ್ಕಾರಿ ಆಸ್ಪತ್ರೆಯಲ್ಲಿ  2019 ರಲ್ಲಿ 963 ಮಕ್ಕಳು ಸಾವನ್ನಪ್ಪಿದ್ದು, ಅದಕ್ಕೂ ಹಿಂದಿನ ವರ್ಷಗಳಲ್ಲಿ ಈ ಸಂಖ್ಯೆ 1,000 ಕ್ಕಿಂತ ಹೆಚ್ಚಿದೆ. ಈ ಘಟನೆಯು ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳ ತೀವ್ರ ಕೊರತೆಯನ್ನು ಬೆಳಕಿಗೆ ತಂದಿದೆ. ಹಾಸಿಗೆಗಳ ಕೊರತೆಯಿಂದ ಹಿಡಿದು ಸಾಕಷ್ಟು ಹಣದ ಕೊರತೆ ದುರಂತ ಘಟನೆಯ ಹಿಂದಿನ ಕೆಲವು ಕಾರಣಗಳಾಗಿವೆ.

ಕೋಟಾದ ಆಸ್ಪತ್ರೆಯಲ್ಲಿ ಶಿಶುಗಳು ಸಾವನ್ನಪ್ಪಿದ ನಂತರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವು ಎಲ್ಲಾ ಭಾಗಗಳಿಂದಲೂ ತೀವ್ರ ಟೀಕೆಗೆ ಗುರಿಯಾಗಿದೆ. ಸಿಎಂ ಗೆಹ್ಲೋಟ್ ಅವರು ಸರ್ಕಾರಿ ಆಸ್ಪತ್ರೆಗಳಲ್ಲಿ "ಕೆಲವು ನ್ಯೂನತೆಗಳನ್ನು" ಒಪ್ಪಿಕೊಂಡರು. ಆದರೆ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರೆ ಸರ್ಕಾರವು "ಅದರ ಮೇಲೆ ಕೆಲಸ ಮಾಡುತ್ತದೆ" ಎಂದು ಅವರು ಭರವಸೆ ನೀಡಿದ್ದಾರೆ. "ನೀವು ದೇಶಾದ್ಯಂತ ಯಾವುದೇ ಆಸ್ಪತ್ರೆಗೆ ಭೇಟಿ ನೀಡಿದಾಗ ನೀವು ಖಂಡಿತವಾಗಿಯೂ ಕೆಲವು ನ್ಯೂನತೆಗಳನ್ನು ಕಾಣುವಿರಿ. ಆಸ್ಪತ್ರೆಯೊಳಗಿನ ಯಾವುದೇ ಸೌಲಭ್ಯದ ಕೊರತೆಯ ಬಗ್ಗೆ ನಮಗೆ ತಿಳಿಸಿದರೆ ಮತ್ತು ನಾವು ಅದನ್ನು ಆದಷ್ಟು ಬೇಗ ಪರಿಹರಿಸುತ್ತೇವೆ" ಎಂದು ಅವರು ಹೇಳಿದರು.

ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಭರವಸೆ ನೀಡಿದ ಸಿಎಂ ಅಶೋಕ್ ಗೆಹ್ಲೋಟ್, ಈ ವಿಷಯವನ್ನು ರಾಜಕೀಯಗೊಳಿಸದಂತೆ ವಿನಂತಿಸಿದರು. "ಒಂದು ಶಿಶು ಸತ್ತರೂ ಅದು ಅತ್ಯಂತ ದುಃಖಕರವಾಗಿದೆ. ರಾಜಸ್ಥಾನದಲ್ಲಿ ಶಿಶು ಮರಣ ಪ್ರಮಾಣ (ಐಎಂಆರ್) ಮತ್ತು ತಾಯಿಯ ಮರಣ ಪ್ರಮಾಣ (ಎಂಎಂಆರ್) ಅನ್ನು ಕಡಿಮೆಗೊಳಿಸಬೇಕೆಂದು ನಾವು ಬಯಸುತ್ತೇವೆ. ಈ ವಿಷಯವನ್ನು ರಾಜಕೀಯಗೊಳಿಸಬಾರದು" ಎಂದು ಅವರು ತಿಳಿಸಿದರು.

ರಾಜಸ್ಥಾನ ಮುಖ್ಯ ಕಾರ್ಯದರ್ಶಿಗೆ ನೋಟೀಸ್:
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರಾಜಸ್ಥಾನದ ಮುಖ್ಯ ಕಾರ್ಯದರ್ಶಿಗೆ ನೋಟೀಸ್ ನೀಡಿ, ಸಮಸ್ಯೆಯನ್ನು ನಿಭಾಯಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ತಿಳಿಸುತ್ತಿದೆ. ಕೋಟಾದಲ್ಲಿ ಶಿಶುಗಳ ಸಾವಿನ ಕುರಿತಾದ ಮಾಧ್ಯಮ ವರದಿಗಳ ಬಗ್ಗೆ ಎನ್‌ಎಚ್‌ಆರ್‌ಸಿ ಸುಯೊ ಮೋಟೋ ಕಾಗ್ನಿಜೆನ್ಸ್ ತೆಗೆದುಕೊಂಡು ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಮತ್ತು ಆರೋಗ್ಯ ಸೌಲಭ್ಯಗಳ ಕೊರತೆಯಿಂದಾಗಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಯನ್ನು ಕೇಳಿಕೊಂಡರು.

ರಾಜಸ್ಥಾನ ಸಿಎಂ ವಿರುದ್ಧ ಅಮಿತ್ ಶಾ ವಾಗ್ಧಾಳಿ:
ಸಿಎಎಯನ್ನು ವಿರೋಧಿಸುವುದರಲ್ಲಿ ಸಮಯ ವ್ಯರ್ಥ ಮಾಡುವುದಕ್ಕಿಂತ ಹೆಚ್ಚಾಗಿ ತಮ್ಮ ರಾಜ್ಯದಲ್ಲಿ ಶಿಶು ಮರಣದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಸ್ಥಾನ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. "ಗೆಹ್ಲೋಟ್ ಜಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ಬದಲು ಮೊದಲು ಪ್ರತಿದಿನ ಕೋಟಾದಲ್ಲಿ ಸಾಯುತ್ತಿರುವ ಮಕ್ಕಳ ಮೇಲೆ ನಿಗಾ ವಹಿಸಿ, ಸ್ವಲ್ಪ ಕಾಳಜಿಯನ್ನು ತೋರಿಸಿ, ತಾಯಂದಿರು ನಿಮ್ಮನ್ನು ಶಪಿಸುತ್ತಿದ್ದಾರೆ" ಎಂದು ಶಾ ವಾಗ್ಧಾಳಿ ನಡೆಸಿದರು.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಸಿಎಂ ಗೆಹ್ಲೋಟ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಮಯಕ್ಕೆ ಸರಿಯಾಗಿ ರಾಜ್ಯ ಸರ್ಕಾರ ಏಕೆ ಗಮನ ಹರಿಸಲಿಲ್ಲ ಎಂದು ಪ್ರಶ್ನಿಸಿದರು. "ಇದು (ಕೋಟಾ ಶಿಶು ಮರಣಗಳು) ಮಕ್ಕಳ ನಿರಂತರ ಸಾವಿನ ನಂತರವೂ ರಾಜಸ್ಥಾನ ಸರ್ಕಾರವು ಅದರತ್ತ ಗಮನ ಹರಿಸಿಲ್ಲ ಎಂಬ ಸುಳಿವನ್ನು ನೀಡುತ್ತದೆ. ಇದಕ್ಕಾಗಿ ಅವರು ಯಾರಿಗೆ ದಂಡ ವಿಧಿಸುತ್ತಾರೆ ಎಂದು ಸರ್ಕಾರ ಉತ್ತರಿಸಬೇಕಾಗಿದೆ" ಎಂದು ಸುದ್ದಿ ಸಂಸ್ಥೆ ಎಎನ್‌ಐಗೆ ಸ್ಮೃತಿ ಇರಾನಿ ಹೇಳಿದ್ದಾರೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಕೂಡ ಗೆಹ್ಲೋಟ್ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಈ ಘಟನೆಯು ಅಶೋಕ್ ಗೆಹ್ಲೋಟ್ ಅವರ ಅಸಮರ್ಥತೆಯನ್ನು ತೋರಿಸುತ್ತದೆ. ಗೆಹ್ಲೋಟ್ ಈ ವಿಷಯವನ್ನು ರಾಜಕೀಯಗೊಳಿಸುತ್ತಿರುವ ರೀತಿ ನಾಚಿಕೆಗೇಡಿನ ಮತ್ತು ಖಂಡನೀಯ ಎಂದಿದ್ದಾರೆ.

ಏತನ್ಮಧ್ಯೆ, ಜೆಕೆ ಲೋನ್ ಆಸ್ಪತ್ರೆಯ ಹೊರಗೆ 100 ಕ್ಕೂ ಹೆಚ್ಚು ಶಿಶುಗಳ ಸಾವಿನ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಕೋಟಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಮಾತನಾಡಿ, ಈ ಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

Trending News