ಕೋಲ್ಕತ್ತಾ: ದಕ್ಷಿಣ ಕೋಲ್ಕತಾದ ನಾಲ್ಕು ವರ್ಷದ ಬಾಲಕಿ ತನ್ನ ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ಸಿಪಿಐ(ಎಂ) ರಚಿಸಿದ ಕೇರಳ ರಿಲೀಫ್ ಫಂಡ್ ಗೆ ನೀಡಿದ್ದಾಳೆ.
ಜಾಧವ್ಪುರದ ನಿವಾಸಿ ಅಫ್ರಾಜಿತಾ ಸಹಾ ಎಂಬ ಬಾಲಕಿ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಉಡುಗೊರೆಯಾಗಿ ಬಂದಿದ್ದ ರೂ.14,800 ಅನ್ನು ತನ್ನ ನೃತ್ಯಾಭ್ಯಾಸಕ್ಕಾಗಿ ಸಿಡಿ ಪ್ಲೇಯರ್ ಖರೀದಿಸಲು ಹುಂಡಿಯಲ್ಲಿ ಕೂಡಿಟ್ಟಿದ್ದಳು. ಟಿವಿ ಚಾನೆಲ್ಗಳಲ್ಲಿ ಕೇರಳದ ದೃಶ್ಯವನ್ನು ನೋಡಿದ ನಂತರ ಆಕೆ ಆ ಹಣವನ್ನು ಕೇರಳ ಪರಿಹಾರ ನಿಧಿಗೆ ನೀಡುವ ನಿರ್ಧಾರ ಕೈಗೊಂಡಿದ್ದಾಳೆ. ಈ ಮೊತ್ತವನ್ನು ರಾಜ್ಯ ಪಕ್ಷದ ಕಚೇರಿಯಲ್ಲಿ ಸಿಪಿಐ (ಎಂ) ನಾಯಕ ಬಿಮಾನ್ ಬೋಸ್ಗೆ ಹಸ್ತಾಂತರಿಸಲಾಗಿದೆ.
ಕೇರಳದ ಪ್ರವಾಹಕ್ಕೆ ಕೇಂದ್ರ ಸರ್ಕಾರ 500 ಕೋಟಿ ರೂ. ಪರಿಹಾರ ಘೋಷಿಸಿದೆ. ಅಲ್ಲದೆ ದೇಶದ ನಾನಾ ಭಾಗಗಳಿಂದ ಕೇರಳಕ್ಕೆ ನೆರವು ನೀಡಲಾಗುತ್ತಿದೆ.