ಜಮ್ಮು-ಕಾಶ್ಮೀರ: ಭಾರತೀಯ ಸೇನೆ ಗುಂಡಿಗೆ 6 ಉಗ್ರರು ಬಲಿ, ಭಾರೀ ಪ್ರತಿಭಟನೆ

ಭದ್ರತಾ ಪಡೆಗಳು 6 ಉಗ್ರರನ್ನು ಹತ್ಯೆ ಮಾಡಿದ ಬೆನ್ನಲ್ಲೇ, ಕಾರ್ಯಾಚರಣೆ ವೇಳೆ ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವೆ ಭಾರೀ ಘರ್ಷಣೆ ಉಂಟಾಗಿ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. 

Updated: Dec 22, 2018 , 03:26 PM IST
ಜಮ್ಮು-ಕಾಶ್ಮೀರ: ಭಾರತೀಯ ಸೇನೆ ಗುಂಡಿಗೆ 6 ಉಗ್ರರು ಬಲಿ, ಭಾರೀ ಪ್ರತಿಭಟನೆ

ಶ್ರೀನಗರ:  ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಟ್ರಾಲ್‌ ಪ್ರದೇಶದಲ್ಲಿ ನಡೆದ ಎನ್ಕೌಂಟರ್'ನಲ್ಲಿ 6 ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. 

ಈ ಬಗ್ಗೆ ಪೋಲಿಸ್ ಅಧಿಕಾರಿ ಸ್ವಾಯಂ ಪ್ರಕಾಶ್ ಪಾಣಿ ಅವರು ಖಾತರಿ ಪಡಿಸಿದ್ದು, ಝಾಕಿರ್‌ ಮೂಸಾ ಮತ್ತು ಅನ್ಸರ್‌ ಹಿಂದ್‌ ಉಗ್ರರ ಸಂಘಟನೆಗೆ ಸೇರಿದ 6 ಉಗ್ರರು ಗುಂಡಿನ ಕಾಳಗದಲ್ಲಿ ಮೃತ ಪಟ್ಟಿದ್ದಾರೆ. ಗುಂಡಿನ ಕಾಳಗ ನಡೆದ ಸ್ಥಳದಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತಷ್ಟು ಉಗ್ರರು ಅಡಗಿರುವ ಶಂಕೆ ಹಿನ್ನೆಲೆಯಲ್ಲಿ ಟ್ರಾಲ್‌ ಪ್ರದೇಶದ ಅವಂತಿಪುರದಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.

ಭದ್ರತಾ ಪಡೆಗಳು 6 ಉಗ್ರರನ್ನು ಹತ್ಯೆ ಮಾಡಿದ ಬೆನ್ನಲ್ಲೇ, ಕಾರ್ಯಾಚರಣೆ ವೇಳೆ ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವೆ ಭಾರೀ ಘರ್ಷಣೆ ಉಂಟಾಗಿ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. ಈ ವೇಳೆ ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ಸೇನಾಪಡೆಗಳು ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ. 

ಎನ್ಕೌಂಟರ್ ನಡೆದ ಸ್ಥಳಕ್ಕೆ ಆಗಮಿಸಿದ ಯುವಕರ ಗುಂಪುಗಳು ಏಕಾಏಕಿ ಭದ್ರತಾ ಪಡೆ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.