ನವದೆಹಲಿ: ಸ್ವಾತಂತ್ರ್ಯ ದಿನದಂದು ‘ಅತ್ಯುತ್ತಮ ಪೊಲೀಸ್’ ಪ್ರಶಸ್ತಿ ಪಡೆದ ಒಂದು ದಿನದ ನಂತರ, ತೆಲಂಗಾಣದ ಮಹಾಬುಬ್ನಗರ ಜಿಲ್ಲೆಯ ಕಾನ್ಸ್ಟೆಬಲ್ ಈಗ ಲಂಚ ತೆಗೆದುಕೊಂಡು ಸಿಕ್ಕಿಬಿದ್ದಿದ್ದಾನೆ ಎಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶುಕ್ರವಾರ ತಿಳಿಸಿದೆ.
ಮಹಾಬೂಬ್ನಗರ ಒನ್-ಟೌನ್ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ತಿರುಪತಿ ರೆಡ್ಡಿ, ಮರಳು ಟ್ರ್ಯಾಕ್ಟರ್ ಮಾಲೀಕ ಮುದವತ್ ರಮೇಶ್ ಅವರಿಂದ 17,000 ರೂ ಲಂಚ ಸ್ವೀಕರಿಸುವಾಗ ಎಸಿಬಿಗೆ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ. ಮರಳು ಸಾಗಣೆಗೆ ಪರವಾನಗಿ ಹೊಂದಿದ್ದರೂ, ತಿರುಪತಿ ರಮೇಶ್ ಅವರಿಂದ 20,000 ರೂ ಲಂಚ ಕೇಳಿದರು. ಆಗ ರಮೇಶ್ ಎಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದಾಗ ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಬಲೆ ಬಿಸಲಾಯಿತು ಎಂದು ಎಸಿಬಿ ಡಿಎಸ್ಪಿ ಎಸ್ ಕೃಷ್ಣ ಗೌಡ್ ಹೇಳಿದ್ದಾರೆ.
"ನಮ್ಮ ನಿರ್ದೇಶನದ ಮೇರೆಗೆ ರಮೇಶ್ ಕಾನ್ಸ್ಟೇಬಲ್ ಗೆ 17,000 ರೂಗಳನ್ನು ನೀಡಿದರು, ಅದರ ನಂತರ ಅವರನ್ನು ಬಂಧಿಸಲಾಯಿತು" ಎಂದು ಎಸಿಬಿ ಅಧಿಕಾರಿ ಹೇಳಿದ್ದಾರೆ.ತಿರುಪತಿ ಅವರು ಗುರುವಾರದಂದು ಜಿಲ್ಲಾಧಿಕಾರಿಯಿಂದ ‘ಅತ್ಯುತ್ತಮ ಪೊಲೀಸ್’ ಪ್ರಶಸ್ತಿಯನ್ನು ಪಡೆದಿದ್ದರು.