ನವದೆಹಲಿ: ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಿದ ಬೆನ್ನಲ್ಲೇ ಶುದ್ಧೀಕರಣಕ್ಕಾಗಿ ದೇವಾಲಯದ ಬಾಗಿಲು ಮುಚ್ಚಿದ ಘಟನೆ ಬುಧವಾರ ನಡೆದಿದೆ.
ಇಂದು ಮುಂಜಾನೆ 40 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಇಂದು ಬೆಳಗ್ಗೆ ಸುಮಾರು 3.45ರ ವೇಳೆಯಲ್ಲಿ ಶಬರಿ ಗಿರಿಗೆ ತೆರಳಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದರು. ಈ ಬೆನ್ನಲ್ಲೇ ಅಲ್ಲಿನ ಪೂಜಾರಿಗಳು ದೇವಾಲಯದ ಬಾಗಿಲು ಮುಚ್ಚಿ ನೀರು ಹಾಕಿ ದೇವಾಲಯ ಆವರಣವನ್ನು ಸ್ವಚ್ಛಗೊಳಿಸಿದರು. ಈ ಘಟನೆಯನ್ನು ವಿರೋಧಿಸಿ ಮಹಿಳೆಯರೂ ಸೇರಿದಂತೆ ಹಿಂದೂಪರ ಸಂಘಟನೆಗಳು ತಿರುವನಂತಪುರಂನಲ್ಲಿ ಪ್ರತಿಭಟನೆ ನಡೆಸಿವೆ.
ಏತನ್ಮಧ್ಯೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸ್ವತಃ ತಾವೇ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲಿಚ್ಛಿಸುವ ಎಲ್ಲ ಮಹಿಳೆಯರಿಗೆ ಸೂಕ್ತ ಭದ್ರತೆ ನೀಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದು, ಈ ಬೆನ್ನಲ್ಲೇ ಮಹಿಳೆಯರು ಪ್ರವೇಶ ಮಾಡಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ಪೊಲೀಸ್ ವರಿಷ್ಠಾದಿಕಾರಿಗಳಿಂದ ಮಾಹಿತಿ ಪಡೆದಿದ್ದು, ಇಬ್ಬರು ಮಹಿಳೆಯರು ಇಂದು ಮುಂಜಾನೆ ದೇಗುಲ ಪ್ರವೇಶಿಸಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಸತತ ಮೂರು ಗಂಟೆಗಳ ಶುದ್ಧೀಕರಣ ಕಾರ್ಯದ ಬಳಿಕ ಇದೀಗ ದೇಗುಲದ ಬಾಗಿಲು ತೆರೆದು ಭಕ್ತರಿಗೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಡಿಸೆಂಬರ್ 24ರಂದು ದೇಗುಲ ಪ್ರವೇಶಿಸಲು ಪ್ರಯತ್ನಿಸಿದ್ದ 10 ವರ್ಷದಿಂದ 50 ವರ್ಷ ವಯಸ್ಸಿನೊಳಗಿನ ಮಹಿಳೆಯರನ್ನು ತಡೆದು ವಾಪಸ್ ಕಳುಹಿಸಲಾಗಿತ್ತು.