ಭಾರತಕ್ಕೆ ರಣಾಂಗಣದ ಮೇಲುಗೈ ನೀಡಲಿವೆ ಅಗ್ನಿ 5, ಅಗ್ನಿ 6 ಐಸಿಬಿಎಂ ಕ್ಷಿಪಣಿಗಳು

ಭಾರತದ ಅಗ್ನಿ 5 ಐಸಿಬಿಎಂ 2012ರಲ್ಲಿ ಪ್ರಥಮ ಹಾರಾಟ ಕೈಗೊಂಡ ಬಳಿಕ, ಇಂದಿನ ತನಕ 9 ಯಶಸ್ವಿ ಪ್ರಯೋಗ ಹಾರಾಟಗಳನ್ನು ನಡೆಸಿದೆ. ಡಿಸೆಂಬರ್ 15, 2022ರಂದು, ಭಾರತ ಒಡಿಶಾದ  ಅಬ್ದುಲ್ ಕಲಾಂ ದ್ವೀಪದಿಂದ ಯಶಸ್ವಿ ರಾತ್ರಿಯ ಹಾರಾಟ ಕೈಗೊಂಡಿತು. ಈ ಪ್ರಯೋಗ ಕ್ಷಿಪಣಿ ವ್ಯವಸ್ಥೆಗೆ ಅಳವಡಿಸಿದ ನೂತನ ತಂತ್ರಜ್ಞಾನಗಳು ಹಾಗೂ ಉಪಕರಣಗಳನ್ನು ಪರೀಕ್ಷಿಸುವ ಉದ್ದೇಶ ಹೊಂದಿತ್ತು.

Written by - Girish Linganna | Edited by - Yashaswini V | Last Updated : Sep 5, 2023, 05:52 PM IST
  • ಅಪಾರ ಕರ್ಷಕ ಶಕ್ತಿಗೆ ಹೆಸರಾದ ಮರಾಗಿಂಗ್ ಉಕ್ಕಿನ ಬದಲು, ಹಗುರವಾದ ಸಂಯೋಜಿತ ವಸ್ತುಗಳನ್ನು ಬಳಸಲಾರಂಭಿಸಿದ ಬಳಿಕ, ಅಗ್ನಿ 5 ಕ್ಷಿಪಣಿಯ ತೂಕ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ 20% ಕಡಿಮೆಯಾಗಿತ್ತು.
  • ಇದರಿಂದಾಗಿ ಅಗ್ನಿ 5 ಕ್ಷಿಪಣಿ 7,000 ಕಿಲೋಮೀಟರ್‌ಗೂ ಹೆಚ್ಚು ದೂರ ಹಾರಾಟ ನಡೆಸಲು ಸಾಧ್ಯವಾಗಿತ್ತು.
  • ಆದರೆ, ಅಗ್ನಿ 5 ಕ್ಷಿಪಣಿಯ ಪೇಲೋಡ್ ಸಾಮರ್ಥ್ಯವನ್ನು 1.5 ಟನ್‌ಗಳಿಗೆ ಸೀಮಿತಗೊಳಿಸಿರುವುದು ಸಹ ಚೀನಾದ ಎದುರು ಭಾರತದ ಸದೃಢ ಪರಮಾಣು ರಕ್ಷಣೆಯೂ ಹಿನ್ನಡೆ ಅನುಭವಿಸುವಂತೆ ಮಾಡಿದೆ.
ಭಾರತಕ್ಕೆ ರಣಾಂಗಣದ ಮೇಲುಗೈ ನೀಡಲಿವೆ ಅಗ್ನಿ 5, ಅಗ್ನಿ 6 ಐಸಿಬಿಎಂ ಕ್ಷಿಪಣಿಗಳು title=

ಭಾರತದ ಬಹು ನಿರೀಕ್ಷಿತ ಅಗ್ನಿ 6 ಕ್ಷಿಪಣಿ 3 ಟನ್ ತೂಕದ ನ್ಯೂಕ್ಲಿಯರ್ ಪೇಲೋಡ್ ಹೊತ್ತು, 9,000 ಕಿಲೋಮೀಟರ್‌ನಿಂದ 12,000 ಕಿಲೋಮೀಟರ್ ದೂರದ ತನಕ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿರುವ ನಿರೀಕ್ಷೆಗಳಿವೆ. ಒಂದು ವೇಳೆ 1.5 ಟನ್ ತೂಕದ ಪೇಲೋಡ್ ಹೊರಿಸಿದರೆ, ಕ್ಷಿಪಣಿ 14,000 ಕಿಲೋಮೀಟರ್‌ನಿಂದ 16,000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಾರಾಟ ನಡೆಸುವ ಸಾಧ್ಯತೆಗಳಿವೆ. ಅಗ್ನಿ 5 ಮತ್ತು ಅಗ್ನಿ 6 ಕ್ಷಿಪಣಿಗಳು ಭಾರತದ ದೃಢವಾದ ಐಸಿಬಿಎಂ ಬತ್ತಳಿಕೆಗೆ ಸೇರುವುದರಿಂದ, ಭಾರತ ಬಲವಾದ ಸುರಕ್ಷಾ ಕವಚ ಹೊಂದಿದಂತಾಗಲಿದೆ. ಭಾರತದ ಅಗ್ನಿ 5 ಐಸಿಬಿಎಂ 2012ರಲ್ಲಿ ಪ್ರಥಮ ಹಾರಾಟ ಕೈಗೊಂಡ ಬಳಿಕ, ಇಂದಿನ ತನಕ 9 ಯಶಸ್ವಿ ಪ್ರಯೋಗ ಹಾರಾಟಗಳನ್ನು ನಡೆಸಿದೆ. ಡಿಸೆಂಬರ್ 15, 2022ರಂದು, ಭಾರತ ಒಡಿಶಾದ  ಅಬ್ದುಲ್ ಕಲಾಂ ದ್ವೀಪದಿಂದ ಯಶಸ್ವಿ ರಾತ್ರಿಯ ಹಾರಾಟ ಕೈಗೊಂಡಿತು. ಈ ಪ್ರಯೋಗ ಕ್ಷಿಪಣಿ ವ್ಯವಸ್ಥೆಗೆ ಅಳವಡಿಸಿದ ನೂತನ ತಂತ್ರಜ್ಞಾನಗಳು ಹಾಗೂ ಉಪಕರಣಗಳನ್ನು ಪರೀಕ್ಷಿಸುವ ಉದ್ದೇಶ ಹೊಂದಿತ್ತು.

ಅಪಾರ ಕರ್ಷಕ ಶಕ್ತಿಗೆ ಹೆಸರಾದ ಮರಾಗಿಂಗ್ ಉಕ್ಕಿನ ಬದಲು, ಹಗುರವಾದ ಸಂಯೋಜಿತ ವಸ್ತುಗಳನ್ನು ಬಳಸಲಾರಂಭಿಸಿದ ಬಳಿಕ, ಅಗ್ನಿ 5 ಕ್ಷಿಪಣಿಯ ತೂಕ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ 20% ಕಡಿಮೆಯಾಗಿತ್ತು. ಇದರಿಂದಾಗಿ ಅಗ್ನಿ 5 ಕ್ಷಿಪಣಿ 7,000 ಕಿಲೋಮೀಟರ್‌ಗೂ ಹೆಚ್ಚು ದೂರ ಹಾರಾಟ ನಡೆಸಲು ಸಾಧ್ಯವಾಗಿತ್ತು. ಆದರೆ, ಅಗ್ನಿ 5 ಕ್ಷಿಪಣಿಯ ಪೇಲೋಡ್ ಸಾಮರ್ಥ್ಯವನ್ನು 1.5 ಟನ್‌ಗಳಿಗೆ ಸೀಮಿತಗೊಳಿಸಿರುವುದು ಸಹ ಚೀನಾದ ಎದುರು ಭಾರತದ ಸದೃಢ ಪರಮಾಣು ರಕ್ಷಣೆಯೂ ಹಿನ್ನಡೆ ಅನುಭವಿಸುವಂತೆ ಮಾಡಿದೆ.

ಭಾರತದ ಇಂಟಗ್ರೇಟೆಡ್ ಗೈಡೆಡ್ ಮಿಸೈಲ್ (ನಿರ್ದೇಶಿತ ಕ್ಷಿಪಣಿ) ಅಭಿವೃದ್ಧಿ ಕಾರ್ಯಕ್ರಮ ಹಲವು ಕ್ಷೇತ್ರಗಳಲ್ಲಿ ಸವಾಲುಗಳನ್ನು ಎದುರಿಸುತ್ತಿದೆ. ಇದೇ ಸಮಯದಲ್ಲಿ, ಭಾರತೀಯ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳು ನಿರಂತರವಾಗಿ ಡಿಆರ್‌ಡಿಓ ವೇದ (ವೆಹಿಕಲ್ ಫಾರ್ ಡಿಫೆನ್ಸ್ ಅಪ್ಲಿಕೇಶನ್) ಎಂಬ ಉಪಗ್ರಹ ಉಡಾವಣಾ ವಾಹನದ (ಎಸ್ಎಲ್‌ವಿ) ಅಭಿವೃದ್ಧಿಯಲ್ಲಿ ನಿರತರಾಗಿದ್ದಾರೆ. ಈ ಯೋಜನೆ, ಭಾರತೀಯ ಸೇನೆಯ ಮೂರೂ ವಿಭಾಗಗಳಿಗೆ ಮಿಲಿಟರಿ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ ಶೀಘ್ರವಾಗಿ ಜೋಡಿಸುವ ಉದ್ದೇಶ ಹೊಂದಿದ್ದು, ಆ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮೇಲಿನ ಸೇನೆಯ ಅವಲಂಬನೆಯನ್ನು ಕಡಿಮೆಗೊಳಿಸಿ, ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿದೆ.

ಡಿಆರ್‌ಡಿಓ ವೇದ ಉಡಾವಣಾ ವಾಹನವನ್ನು ವಿನೂತನ ರೀತಿಯಲ್ಲಿ ಸಿದ್ಧಗೊಳಿಸುವ ವಿಧಾನ ಹೊಂದಿದ್ದು, ವಿವಿಧ ಹಂತಗಳು ಮತ್ತು ಪೇಲೋಡ್‌ಗಳನ್ನು ಸಮತಲವಾಗಿ ಜೋಡಿಸಲಾಗುತ್ತದೆ. ಇದು ಲಂಬವಾಗಿ ಪೇಲೋಡ್‌ಗಳನ್ನು ಅಳವಡಿಸುವ ಇಸ್ರೋದ ವಿಧಾನಕ್ಕೆ ಹೋಲಿಸಿದರೆ ಸಂಪೂರ್ಣ ಭಿನ್ನವಾಗಿದೆ. ಈ ವಿನೂತನ ಉಡಾವಣಾ ವಾಹನ ಅಪಾರ ವೇಗ ಮತ್ತು ಸಾಮರ್ಥ್ಯ ಹೊಂದಿರಲಿದ್ದು, ಮಲ್ಟಿ ಆ್ಯಕ್ಸೆಲ್ ಟಿಇಎಲ್ (ಟ್ರಾನ್ಸ್‌ಪೋರ್ಟರ್ ಇರೆಕ್ಟರ್ ಲಾಂಚರ್) ವಾಹನಗಳಿಂದಲೂ ಉಡಾವಣೆಗೊಳಿಸಬಲ್ಲದಾಗಿದೆ.

ಡಿಆರ್‌ಡಿಓ ವೇದ ಒಂದು ರಸ್ತೆಯಲ್ಲಿ ಸಾಗಿಸಬಲ್ಲ, ಕ್ಯಾನಿಸ್ಟರ್ ಆಧಾರಿತ, ಮೂರು ಹಂತಗಳ ಘನ ಇಂಧನ ಆಧಾರಿತ ಬಾಹ್ಯಾಕಾಶ ಉಡಾವಣಾ ವಾಹನವಾಗಿದ್ದು (ಎಸ್ಎಲ್‌ವಿ), ಇದನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಅಭಿವೃದ್ಧಿ ಪಡಿಸುತ್ತಿದೆ. ಇದು ಬಹುತೇಕ 2,000 ಕೆಜಿಯ ತನಕದ ಪೇಲೋಡ್‌ಗಳನ್ನು ಭೂಮಿಯ ಕೆಳ ಕಕ್ಷೆಗೆ ಒಯ್ಯಬಲ್ಲದು. ವೇದವನ್ನು ಮಿಲಿಟರಿ ಉಪಗ್ರಹಗಳ ಉಡಾವಣೆಗೆ ಮತ್ತು ಬೇಡಿಕೆಯ ಮೇರೆಗೆ ಇತರ ಉಡಾವಣೆಗಳಿಗೆ ಬಳಸಿಕೊಳ್ಳಲಾಗುತ್ತದೆ.

ಇದನ್ನೂ ಓದಿ- ಆದಿತ್ಯ ಎಲ್1: ಸೌರ ಶಕ್ತಿಗಳ ಸಮನ್ವಯ - ಸಿಎಂಇಗಳು ಹಾಗೂ ಸೌರ ಮಾರುತಗಳ ಅನಾವರಣ

ಅತ್ಯಂತ ಪರಿಣಾಮಕಾರಿ ಅಗ್ನಿ 5: 
2012ರಿಂದ ಪರಮಾಣು ಸಿಡಿತಲೆ ಒಯ್ಯುವ ಸಾಮರ್ಥ್ಯ ಹೊಂದಿರುವ ಇಂಟರ್‌ಕಾಂಟಿನೆಂಟರ್ ರೇಂಜ್ ಬ್ಯಾಲಿಸ್ಟಿಕ್ ಮಿಸೈಲ್ (ಐಸಿಎಂಬಿ) ಅಗ್ನಿ 5 ಕ್ಷಿಪಣಿಯ ಒಂಬತ್ತು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗಿದ್ದರೂ, ಬಹು ನಿರೀಕ್ಷಿತ ಅಗ್ನಿ 6 ಕ್ಷಿಪಣಿ ಯೋಜನೆಯ ಪ್ರಗತಿ ಇಂದಿಗೂ ಕನಿಷ್ಠ ಪ್ರಮಾಣದಲ್ಲಿದೆ. ಎಪ್ರಿಲ್ 19, 2012ರಂದು ನಡೆದ ಅಗ್ನಿ 5ರ ಪ್ರಥಮ ಪರೀಕ್ಷಾ ಪ್ರಯೋಗದ ಬಳಿಕ, ಡಿಆರ್‌ಡಿಓ ಮಾಜಿ ಅಧ್ಯಕ್ಷರಾದ ಡಾ. ವಿಜಯ್ ಕುಮಾರ್ ಸಾರಸ್ವತ್ ಅವರು ನಿಸ್ಸಂದಿಗ್ಧವಾಗಿ ಭಾರತ ತನ್ನ ಅಗ್ನಿ ಕ್ಷಿಪಣಿ ಯೋಜನೆಯನ್ನು ಇನ್ನಷ್ಟು ಮುಂದುವರಿಸಲು ಕಟಿಬದ್ಧವಾಗಿದೆ ಎಂದಿದ್ದರು. ಅವರು ಮುಂದಿನ ವರ್ಷಗಳಲ್ಲಿ, ಅಗ್ನಿ 5 ಕ್ಷಿಪಣಿಯ ಮುಂದಿನ ತಲೆಮಾರಿನ ಕ್ಷಿಪಣಿಗಳು ಖಂಡಿತವಾಗಿಯೂ ಭಾರತದ ಬತ್ತಳಿಕೆ ಸೇರಲಿವೆ ಎಂದಿದ್ದರು.

1.5 ಟನ್ ಭಾರದ ಅಣ್ವಸ್ತ್ರ ಸಿಡಿತಲೆಗಳನ್ನು ಅಳವಡಿಸಿದಾಗ ಅಗ್ನಿ 5 ಕ್ಷಿಪಣಿ 5,500 ಕಿಲೋಮೀಟರ್‌ಗಳ ವ್ಯಾಪ್ತಿ ಹೊಂದಿದೆ. ಭೌತಶಾಸ್ತ್ರದ ನಿಯಮಗಳ ಅನುಸಾರ, ಕ್ಷಿಪಣಿಯ ವ್ಯಾಪ್ತಿ ಮತ್ತು ಅದು ಹೊಂದಿರುವ ಸಿಡಿತಲೆಯ ಭಾರ ಪರಸ್ಪರ ವಿಲೋಮಾನುಪಾತದಲ್ಲಿರುತ್ತವೆ. ಇದಕ್ಕೆ ಗುರುತ್ವಾಕರ್ಷಣಾ ಶಕ್ತಿ ಹಾಗೂ ವೇಗದ ಪ್ರಭಾವ ಪ್ರಾಥಮಿಕ ಕಾರಣವಾಗಿರುತ್ತದೆ. ಅಗ್ನಿ 5 ಕ್ಷಿಪಣಿಯಲ್ಲಿ ಬಳಸುವ ಅದೇ ರಾಕೆಟ್ ಬೂಸ್ಟರ್‌ಗಳನ್ನು ಬಳಸಿಕೊಂಡು, ಇಂಧನ ದಹಿಸುವಿಕೆಯನ್ನು ಸಾಕಷ್ಟು ನಿಧಾನಗೊಳಿಸಿ, ಕೇವಲ 500 ಕೆಜಿಗಳಷ್ಟು ಕಡಿಮೆ ಪೇಲೋಡ್ ಒಯ್ಯುವಂತೆ ಮಾಡಿದರೆ, ಅದರಿಂದ ಕ್ಷಿಪಣಿಯ ವ್ಯಾಪ್ತಿಯನ್ನು ಸಾಕಷ್ಟು ಹೆಚ್ಚಿಸಿ, ಅದು 10,000 ಕಿಲೋಮೀಟರ್‌ಗಳಷ್ಟು ಚಲಿಸುವಂತೆ ಮಾಡಬಹುದು.

ಈ ಸಿದ್ಧಾಂತದ ಅನುಸಾರ, ಕ್ಷಿಪಣಿ ಕಡಿಮೆ ಶಕ್ತಿಶಾಲಿ ಸಿಡಿತಲೆಗಳನ್ನು ಹೊಂದಿದ್ದರೂ, ಅಗ್ನಿ 5 ಕ್ಷಿಪಣಿಯನ್ನು 10,000 ಕಿಲೋಮೀಟರ್ ವರ್ಗದ ಐಸಿಬಿಎಂ ಎಂದು ಪರಿಗಣಿಸಬಹುದು. ಭಾರತದ ಅಣ್ವಸ್ತ್ರ ಸಿಡಿತಲೆ ಒಯ್ಯಬಲ್ಲ ಕ್ಷಿಪಣಿಗಳ ಕೊರತೆಯನ್ನು ನೀಗಿಸುವುದೇ ಅಗ್ನಿ 6 ಕ್ಷಿಪಣಿಯ ಪ್ರಮುಖ ಉದ್ದೇಶವಾಗಿದೆ. ಅಗ್ನಿ 6 ಕ್ಷಿಪಣಿ 3 ಟನ್ ತೂಕದ ಸಿಡಿತಲೆಗಳನ್ನು ಹೊಂದಿರುವಾಗ 9,000 ದಿಂದ 12,000 ಕಿಲೋಮೀಟರ್ ದೂರ ಕ್ರಮಿಸಬಲ್ಲದು. 1.5 ಟನ್ ತೂಕದ ಸಿಡಿತಲೆಯ ಪೇಲೋಡ್ ಜೊತೆ ಈ ಕ್ಷಿಪಣಿ 14,000 - 16,000 ಕಿಲೋಮೀಟರ್ ಕ್ರಮಿಸಬಲ್ಲದು. ಅಗ್ನಿ 6 ಹೊಂದಿರುವ ಗೈಡೆನ್ಸ್ ವ್ಯವಸ್ಥೆ, ರಿಂಗ್ ಲೇಸರ್ ಗೈರೋಸ್ಕೋಪ್ ಜೊತೆಗಿನ ಜಡ ಸಂಚರಣಾ ವ್ಯವಸ್ಥೆ (ಇನರ್ಷ್ಯಲ್ ನ್ಯಾವಿಗೇಶನ್ ಸಿಸ್ಟಮ್) ಆಧಾರಿತವಾಗಿದೆ. ಇದನ್ನು ಐಆರ್‌ಎನ್ಎಸ್ಎಸ್ (ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್) ಮೂಲಕ ಇನ್ನಷ್ಟು ಕರಾರುವಾಕ್ಕಾಗಿಸಬಹುದು.

ಅಗ್ನಿ 6 ಕ್ಷಿಪಣಿಯ ಪರ ವಾದ: 
2011ರಲ್ಲಿ, ಭಾರತೀಯ ವಾಯುಪಡೆಯ ಮಾಜಿ ಚೀಫ್ ಆಫ್ ಏರ್ ಸ್ಟಾಫ್ ಹಾಗೂ ಆಗಿನ ಚೀಫ್ಸ್ ಆಫ್ ಸ್ಟಾಫ್ ಸಮಿತಿಯ ಮುಖ್ಯಸ್ಥರಾಗಿದ್ದ ಪ್ರದೀಪ್ ವಸಂತ್ ನಾಯಕ್ ಅವರು ಭಾರತದ ಪರಮಾಣು ದಾಳಿ ಸಾಮರ್ಥ್ಯವನ್ನು ಸಾಕಷ್ಟು ಹೆಚ್ಚಿಸಬೇಕು ಎಂದು ವಾದಿಸಿದ್ದರು. ಅಗ್ನಿ 6 ಕ್ಷಿಪಣಿಯ ಹೆಚ್ಚಿನ ವ್ಯಾಪ್ತಿಯ ಕಾರಣದಿಂದ ಅದು ಜಗತ್ತಿನ ಕನಿಷ್ಠ ನಾಲ್ಕು ಪ್ರಮುಖ ರಾಜಧಾನಿಗಳನ್ನು ತಲುಪಬಲ್ಲದಾಗಿದೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ವ್ಯಾಪ್ತಿ ಮತ್ತು ಪ್ರಭಾವವನ್ನು ಹೆಚ್ಚಿಸಲಿದೆ.

12,000 ಕಿಲೋಮೀಟರ್‌ಗೂ ಹೆಚ್ಚಿನ ವ್ಯಾಪ್ತಿ ಭಾರತದ ಪರಿಣಾಮಕಾರಿ ದಾಳಿ ನಿರೋಧಕತೆಯನ್ನು ಹೆಚ್ಚಿಸಲಿದೆ. ಅದರೊಡನೆ, ಈ ಕ್ಷಿಪಣಿ ಹಿಂದೂ ಮಹಾಸಾಗರದ ದಕ್ಷಿಣದಲ್ಲಿ ಮತ್ತು ಪೆಸಿಫಿಕ್ ಸಾಗರದ ಕೇಂದ್ರದಲ್ಲಿ ತಮ್ಮನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಯತ್ನಿಸುತ್ತಿರುವ ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿ ಸಬ್‌ಮರೀನ್‌ಗಳು (ಎಸ್ಎಸ್‌ಬಿಎನ್‌ಗಳು), ವಿಮಾನ ವಾಹಕ ನೌಕೆಗಳು, ಹಾಗೂ ನೌಕಾದಳದ ಹಡಗುಗಳ ಮೇಲೆ ದಾಳಿ ನಡೆಸಬಲ್ಲದು. ಈ ಬೆಳವಣಿಗೆಯೊಂದಿಗೆ, ಚೀನಾದ ಯುದ್ಧ ನೌಕೆಗಳು, ವಿಮಾನ ವಾಹಕ ನೌಕೆಗಳು ಹಾಗೂ ಜಲಾಂತರ್ಗಾಮಿಗಳ ಬಳಕೆಗೆ ನಿರ್ಮಿಸಿರುವ ಡಿಎಫ್21ಡಿ ಆ್ಯಂಟಿ ಶಿಪ್ ಕ್ಷಿಪಣಿಗೆ ಪ್ರತಿಯಾಗಿ, ಭಾರತ ಹೆಚ್ಚು ನಿಖರವಾದ ಐಸಿಬಿಎಂ ಗೈಡೆಡ್ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಬಲ್ಲದು. ಭಾರತ ಅಗ್ನಿ 6 ಕ್ಷಿಪಣಿ ಕನಿಷ್ಠ 9,000 ಕಿಲೋಮೀಟರ್ ವ್ಯಾಪ್ತಿ ಹೊಂದಿರಬೇಕೆಂದು ಬಯಸುತ್ತಿದ್ದು, ಆ ಮೂಲಕ ಚೀನಾದ ಜೆಎಲ್-2 ಸಬ್‌ಮರೀನ್ ಆಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಿಂದಿಕ್ಕುವ ಗುರಿ ಹೊಂದಿದೆ.

ಇದನ್ನೂ ಓದಿ- ಭವಿಷ್ಯದ ಅನ್ವೇಷಣೆಗಳ ಮೇಲಿನ ಪರಿಣಾಮಗಳು: ಯಶಸ್ವಿ ಲೂನಾರ್ ಹಾಪ್ ಪ್ರಯೋಗ ನಡೆಸಿದ ವಿಕ್ರಮ್ ಲ್ಯಾಂಡರ್

ಅಗ್ನಿ 6: ಮಹತ್ವದ ಶಕ್ತಿ ವರ್ಧಕ: 
ಅಗ್ನಿ 6 ಒಂದು ಘನ ಇಂಧನ ಆಧಾರಿತ, ಬಹುಪಾತ್ರಗಳ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ (ಐಸಿಬಿಎಂ) ಆಗಿದ್ದು, ಪ್ರಸ್ತುತ ಭಾರತದಲ್ಲಿ ಅಭಿವೃದ್ಧಿ ಹಂತದಲ್ಲಿದೆ. 9,000 - 12,000 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಇದು, 10 ನ್ಯೂಕ್ಲಿಯರ್ ಅಥವಾ ಥರ್ಮೋ ನ್ಯೂಕ್ಲಿಯರ್ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದುವ ನಿರೀಕ್ಷೆಗಳಿವೆ. ಈ ಕ್ಷಿಪಣಿ ಎಂಐಆರ್‌ವಿ (ಮಲ್ಟಿಪಲ್ ಇಂಡಿಪೆಂಡೆಂಟ್ ರಿ ಎಂಟ್ರಿ ವೆಹಿಕಲ್) ಹಾಗೂ ಎಂಎಆರ್‌ವಿ (ಮನೋವರೇಬಲ್ ಮಲ್ಟಿಪಲ್ ಇಂಡಿಪೆಂಡೆಂಟ್ ರಿ ಎಂಟ್ರಿ ವೆಹಿಕಲ್) ತಂತ್ರಜ್ಞಾನ ಹೊಂದಿರಲಿದ್ದು, ಆ ಮೂಲಕ ಬೇರೆ ಬೇರೆ ಸಿಡಿತಲೆಗಳನ್ನು ಬೇರೆ ಬೇರೆ ಗುರಿಗಳೆಡೆಗೆ ತಲುಪಿಸಲಿದೆ. ಶತ್ರುಗಳ ಬ್ಯಾಲಿಸ್ಟಿಕ್ ಕ್ಷಿಪಣಿ ನಿರೋಧಕ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳಲು ಇದು ಲೈಟ್ ಡಿಕಾಯ್ ಮತ್ತು ಚಾಫ್ಸ್ ವ್ಯವಸ್ಥೆ ಹೊಂದಿರಲಿದೆ.

ಭಾರತ ಥರ್ಮೋ ನ್ಯೂಕ್ಲಿಯರ್ ಫ್ಯೂಷನ್ ಉಪಕರಣಗಳು ಮತ್ತು ಬೂಸ್ಟೆಡ್ ಫ್ಯೂಷನ್ ಬಾಂಬ್‌ಗಳು ಸೇರಿದಂತೆ ಪರಮಾಣು ಶಸ್ತ್ರಾಸ್ತ್ರಗಳ ಬತ್ತಳಿಕೆಯನ್ನೇ ಹೊಂದಿದೆ. ಪ್ರತಿಯೊಂದು ಎಂಐಆರ್‌ವಿ ಸಿಡಿತಲೆಯೂ 250 ಕಿಲೋಟನ್ ಟಿಎನ್‌ಟಿಯಷ್ಟು ಶಕ್ತಿಶಾಲಿಯಾಗಿದೆ. ಅಂದರೆ, ಇದು ಹಿರೋಷಿಮಾ ನಗರದ ಮೇಲೆ ಬಿದ್ದ ಅಣು ಬಾಂಬ್‌ಗಿಂತ ಅಂದಾಜು 16 ಪಟ್ಟು ಹೆಚ್ಚು ವಿಧ್ವಂಸಕವಾಗಿದೆ. ಅಂದರೆ, ಕೇವಲ ಒಂದು ಎಂಐಆರ್‌ವಿ ಸಂಪೂರ್ಣ ಮೆಟ್ರೋಪಾಲಿಟನ್ ಪ್ರದೇಶವನ್ನು ನಿರ್ನಾಮಗೊಳಿಸಿ, ಮಿಲಿಯನ್‌ಗಟ್ಟಲೆ ಜನರನ್ನು ಸಾಯಿಸಬಲ್ಲದು.

ರಕ್ಷಣಾ ತಜ್ಞರು ಭಾರತಕ್ಕೆ 12,000 ಕಿಲೋಮೀಟರ್‌ಗೂ ಹೆಚ್ಚಿನ ವ್ಯಾಪ್ತಿಯ ಐಸಿಬಿಎಂ ಹೊಂದುವ ಅವಶ್ಯಕತೆಯಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರು ಅಗ್ನಿ 6 ಯೋಜನೆಗೆ ಕ್ಷಿಪ್ರವಾಗಿ ಅನುಮೋದನೆ ನೀಡುವಂತೆ ಆಗ್ರಹಿಸಿದ್ದು, ಆ ಮೂಲಕ ಜಾಗತಿಕ ರಾಜಕಾರಣದ ಒತ್ತಡವನ್ನು ಎದುರಿಸಿ ನಿಲ್ಲಬಲ್ಲ ಕಾರ್ಯತಂತ್ರದ ದೂರದೃಷ್ಟಿ ಹೊಂದಲು ಸಾಧ್ಯವಾಗುತ್ತದೆ ಎಂದಿದ್ದಾರೆ. ತಜ್ಞರು ಕೇಂದ್ರ ಸರ್ಕಾರ ಇಂತಹ ಒತ್ತಡಕ್ಕೆ ಮಣಿಯದೆ, ಭಾರತ ಪ್ರಮುಖ ಶಕ್ತಿಯಾಗುವಂತೆ ಮಾಡಲು ಆಗ್ರಹಿಸಿದ್ದಾರೆ.

ಭಾರತ ಅಗ್ನಿ 5 ಮತ್ತು ಅಗ್ನಿ 6 ಕ್ಷಿಪಣಿಗಳನ್ನು ಒಳಗೊಂಡ ಐಎಸ್‌ಬಿಎಂ ಬಲ ಹೊಂದುವುದರಿಂದ ಕಾರ್ಯತಂತ್ರದ ಯುದ್ಧರಂಗದಲ್ಲಿ ಭಾರತಕ್ಕೆ ಮಹತ್ವದ ಸುರಕ್ಷಾ ಕವಚ ಲಭಿಸಲಿದೆ. ಇದರ ಪರಿಣಾಮವಾಗಿ, ಪ್ರಮುಖ ಜಾಗತಿಕ ಶಕ್ತಿಗಳು ಭವಿಷ್ಯದ ಸಂಘರ್ಷದಲ್ಲಿ ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಲು ಸಾಧ್ಯವಾಗುವುದಿಲ್ಲ. ಈ ಹಿಂದಿನ ಯುಪಿಎ-1 ಮತ್ತು ಯುಪಿಎ-2 ಸರ್ಕಾರಗಳನ್ನು ಹಲವು ನೀತಿ ನಿರೂಪಕರು ಶಾಂತಿಪ್ರಿಯ ನಡವಳಿಕೆಯವರೆಂದು ಕರೆದಿದ್ದರು. ಪ್ರಸ್ತುತ ಆಡಳಿತ ನಡೆಸುತ್ತಿರುವ ಎನ್‌ಡಿಎ-3 ಸರ್ಕಾರದ ಮುಂದೆ ಈಗ ತನ್ನ ರಾಜಕೀಯ ಇಚ್ಛಾಶಕ್ತಿಯನ್ನು ನಿರೂಪಿಸುವ ಪ್ರಮುಖ ಗುರಿಯಿದೆ. ಭಾರತವನ್ನು ಜಗತ್ತಿನ ಪ್ರಮುಖ ಮಿಲಿಟರಿ ಶಕ್ತಿಗಳಾದ ಅಮೆರಿಕಾ, ರಷ್ಯಾ ಹಾಗೂ ಚೀನಾಗಳ ಸಾಲಿನಲ್ಲಿ ನಿಲ್ಲಿಸಲು ಅಗ್ನಿ 6 ಕ್ಷಿಪಣಿಗೆ ಕ್ಷಿಪ್ರ ಅನುಮತಿ ಮತ್ತು ಕೆಲ ವರ್ಷಗಳಲ್ಲಿ ಅದರ ಮೊದಲ ಮಾದರಿಯ ಪರೀಕ್ಷಾ ಪ್ರಯೋಗ ನಡೆಸುವುದು ಮಹತ್ವದ್ದಾಗಿದೆ. ಅಂತಹ ಸಾಮರ್ಥ್ಯ ಭಾರತಕ್ಕೆ ಜಾಗತಿಕ ವೇದಿಕೆಯಲ್ಲಿ ರಾಜತಾಂತ್ರಿಕ ಪ್ರಭಾವ ಬೀರಲು ನೆರವಾಗುತ್ತದೆ.

ಸೂಕ್ತ, ಲಾಭದಾಯಕ ಪರೀಕ್ಷಾ ವಿಧಾನ: 
9,000 ಕಿಲೋಮೀಟರ್‌ಗೂ ಹೆಚ್ಚಿನ ವ್ಯಾಪ್ತಿ ಹೊಂದಿರುವ ಅಗ್ನಿ 6 ಕ್ಷಿಪಣಿಯ ಪರೀಕ್ಷೆ ನಡೆಸುವುದು ಪಾಶ್ಚಾತ್ಯ ಮಾಧ್ಯಮಗಳ ಗಮನ ಸೆಳೆಯಬಹುದು. ಇದಕ್ಕಿರುವ ಪರ್ಯಾಯ ವಿಧಾನವೆಂದರೆ, ಅಧಿಕೃತವಾಗಿ ಈ ಕ್ಷಿಪಣಿಯ ವ್ಯಾಪ್ತಿ ಕೇವಲ 9,000 ಕಿಲೋಮೀಟರ್ ಎಂದು ಘೋಷಿಸುವುದು. ಆ ಮೂಲಕ ಈ ಕ್ಷಿಪಣಿ ಚೀನಾಗೆ ಮಾತ್ರ ಕಳವಳಕಾರಿ ಎಂಬ ಭಾವನೆ ಮೂಡಿಸಿ, 3 ಟನ್ನುಗಳ ಅತಿಭಾರದ ಸಿಡಿತಲೆಯೊಡನೆ ಕ್ಷಿಪಣಿಯ ಪರೀಕ್ಷೆ ನಡೆಸುವುದು. ಈ ವಿಧಾನದ ಮೂಲಕ, ನೂತನ ಕ್ಷಿಪಣಿಯ ಸಾಮರ್ಥ್ಯವನ್ನು ಪರೀಕ್ಷಿಸಿದರೂ, ಪಾಶ್ಚಾತ್ಯ ರಾಷ್ಟ್ರಗಳ ಜೊತೆಗಿನ ರಾಜತಾಂತ್ರಿಕ ಸಂಬಂಧ ಹದಗೆಡದಂತೆ ನೋಡಿಕೊಳ್ಳಬಹುದಾಗಿದೆ. ಅದರೊಡನೆ, ಇಂತಹ ಪ್ರಯೋಗ ನಡೆಸುವುದರಿಂದ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೂ ರಾಜಕೀಯ ಮೇಲುಗೈ ಲಭಿಸುತ್ತದೆ. ಪ್ರಧಾನ ಮಂತ್ರಿಗಳು ಈ ವೈಜ್ಞಾನಿಕ ಸಾಧನೆಯನ್ನು ಜನರ ಮುಂದಿಟ್ಟು, ಇದು 2019ರ ಎಎಸ್ಎಟಿ ಪರೀಕ್ಷೆಯ ರೀತಿಯಲ್ಲೇ ಮಹತ್ತರ ಮೈಲಿಗಲ್ಲು ಎಂದು ಸಾರಬಹುದು.

ವಾಜಪೇಯಿಯವರ ಹಾದಿಯ ಉದಾಹರಣೆ: 
ಅಗ್ನಿ 6 ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿ, ಸೇನಾ ಸೇರ್ಪಡೆಗೊಳಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಇನ್ನೂ ಹೆಚ್ಚು ವ್ಯಾಪ್ತಿಯ ಕ್ಷಿಪಣಿ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಬಹುದು. ಆ ಮೂಲಕ ಐಸಿಬಿಎಂ ಯೋಜನೆಯ ಗರಿಷ್ಠ ವ್ಯಾಪ್ತಿ 9,000 ಕಿಲೋಮೀಟರ್ ಎಂದು ನಿಗದಿಪಡಿಸಬಹುದು. ಈ ಕ್ರಮ 1998ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪೋಖ್ರಾನ್ - 2 ಅಣ್ವಸ್ತ್ರ ಪರೀಕ್ಷೆಗಳ ಬಳಿಕ ಅಣ್ವಸ್ತ್ರ ಪರೀಕ್ಷೆಗಳಿಗೆ ಶಾಶ್ವತ, ಸ್ವಯಂಪ್ರೇರಿತ ನಿಲುಗಡೆ ಘೋಷಿಸಿದ ಕ್ರಮದ ರೀತಿಯಲ್ಲಿರಲಿದೆ. ವಾಜಪೇಯಿಯವರ ನಿರ್ಧಾರ ಅವರನ್ನು ಓರ್ವ ಜಾಗತಿಕ ಮುತ್ಸದ್ದಿ ಎಂದು ಹೆಸರಾಗುವಂತೆ ಮಾಡಿತು.

ಪ್ರಸ್ತುತ ಕೇಂದ್ರ ಸರ್ಕಾರ ಅಗ್ನಿ 6 ಮತ್ತು ಡಿಆರ್‌ಡಿಓ ವೇದ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ, ಕಾರ್ಯರೂಪಕ್ಕೆ ತರುವುದನ್ನು ಆದ್ಯತೆಯಾಗಿಸಬೇಕಿದೆ. ನಂಬಿಕಾರ್ಹ ಐಸಿಬಿಎಂ ಬಲವಿಲ್ಲದೆ, ಭಾರತ ಕೇವಲ ಉಪಖಂಡದಲ್ಲಿ ಮಾತ್ರವೇ ಶಕ್ತಿಶಾಲಿ ಎಂದು ಭಾವಿಸಲ್ಪಡುವ ಸಾಧ್ಯತೆಗಳಿವೆ. ಆ ಮೂಲಕ ಅಂತಿಮವಾಗಿ ಭಾರತ ಜಾಗತಿಕ ವೇದಿಕೆಯಲ್ಲಿ ಮೂಲೆಗುಂಪಾಗುವ ಅಪಾಯವೂ ಇದೆ. ಈಗ ಕ್ರಮ ಕೈಗೊಳ್ಳುವ ಜವಾಬ್ದಾರಿ ಆಡಳಿತ ನಡೆಸುವ ಸರ್ಕಾರದ ಹೆಗಲ ಮೇಲಿದೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ, ರಕ್ಷಣಾ, ರಾಜಕೀಯ ವಿಶ್ಲೇಷಕರು)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News