ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಕಮಿಟಿ ಸಭೆಯಲ್ಲಿ ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಲಾಗಿದೆ. ಆ ಮೂಲಕ ಇದೇ ಮೊದಲ ಬಾರಿಗೆ ಸಿಬಿಐ ಇತಿಹಾಸದಲ್ಲಿ ಮುಖ್ಯಸ್ಥರೊಬ್ಬರನ್ನು ವಜಾಗೊಳಿಸಲಾಗಿದೆ. ವರ್ಮಾ ಅವರ ಅಧಿಕಾರಾವಧಿ ಜನವರಿ 31 ರವರಗೆ ಇತ್ತು ಎನ್ನಲಾಗಿದೆ.
ಪ್ರಧಾನಿ ಮೋದಿ ನಡೆಸಿದ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ನ್ಯಾಯಮೂರ್ತಿ ಎ. ಕೆ. ಸಿಕ್ರಿ ಅವರು ಭಾಗವಹಿಸಿದ್ದರು. ಸಿಕ್ರಿ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಪ್ರತಿನಿಧಿಸಲು ನೇಮಕಗೊಂಡಿದ್ದರು.ಈ ಸಭೆಯಲ್ಲಿ ವರ್ಮಾವನ್ನು ವಜಾಗೊಳಿಸುವ ನಿರ್ಧಾರದ ಬಗ್ಗೆ ವಿರೋಧ ವ್ಯಕ್ತಪಡಿಸಿದ ಏಕೈಕ ಸದಸ್ಯರೆಂದರೆ ಅದು ಮಲ್ಲಿಕಾರ್ಜುನ್ ಖರ್ಗೆ.
1979-ಬ್ಯಾಚ್ ಎಜಿಎಂಯುಟಿ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ವರ್ಮಾ ಅವರನ್ನು ಈಗ ಭ್ರಷ್ಟಾಚಾರ ಮತ್ತು ಕರ್ತವ್ಯದ ಲೋಪದ ಆರೋಪದ ಮೇಲೆ ತೆಗೆದು ಹಾಕಲಾಗಿದೆ ಎನ್ನಲಾಗಿದೆ. ಈ ಉನ್ನತ ಆಯ್ಕೆ ಸಮಿತಿಯು ಬುಧವಾರ ರಾತ್ರಿ ಭೇಟಿಯಾಯಿತು, ಆದರೆ ಆಗ ಯಾವುದೇ ತೀರ್ಮಾನಕ್ಕೆ ಬರಲಿಲ್ಲ. ಗುರುವಾರ ನಡೆದ ಸಭೆಗೂ ಮುನ್ನ ಸಿವಿಸಿ ವಿಚಾರಣೆ ವರದಿ ಒಳಗೊಂಡ ದಾಖಲೆಗಳನ್ನು ಮಲ್ಲಿಕಾರ್ಜುನ್ ಖರ್ಗೆ ಕೇಳಿದ್ದರು.
ಸಿ.ವಿ.ಸಿಯ ತನಿಖಾ ವರದಿ ಸೇರಿದಂತೆ ವಿಷಯದ ಬಗ್ಗೆ ಸರಕಾರದಿಂದ ಕೆಲವು ದಾಖಲೆಗಳನ್ನು ನಾನು ಕೇಳಿದೆ '' ಎಂದು ಖರ್ಗೆ ಹೇಳಿದ್ದಾರೆ. ಕಮಿಟಿಯ ಮುಂದೆ ಹಾಜರಾಗಲು ಮತ್ತು ಅವರ ಪ್ರಕರಣವನ್ನು ನಿರೂಪಿಸಲು ಅಲೋಕ್ ವರ್ಮಾ ಅವರಿಗೂ ಅವಕಾಶವನ್ನು ನೀಡಬೇಕು ಎಂದು ಹೇಳಿದರು.