ನವದೆಹಲಿ: ಇನ್ಮುಂದೆ ಮದ್ಯ ಪಡೆಯಲು ನೀವು ಮದ್ಯದಂಗಡಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ. ಏಕೆಂದರೆ ನೀವು ನಿಮ್ಮ ಮನೆಯಲ್ಲಿಯೇ ಕುಳಿತು ನಿಮಗೆ ಬೇಕಾದ ಬ್ರಾಂಡ್ ನ ಮದ್ಯವನ್ನು ಆರ್ಡರ್ ಮಾಡಿ ಪಡೆಯಬಹುದು. ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ಇಂಡಿಯಾಗೆ ಮನೆ ಬಾಗಿಲಿಗೆ ಮದ್ಯ ವಿತರಿಸಲು ಅನುಮತಿ ಸಿಕ್ಕಿದೆ. ಅಮೆಜಾನ್ ಸದ್ಯ ಪಶ್ಚಿಮ ಬಂಗಾಳದಲ್ಲಿ ಮನೆಗೆ ಮದ್ಯ ವಿತರಿಸಲಿದೆ. ಈ ಅನುಮತಿಯನ್ನು ಪಶ್ಚಿಮ ಬಂಗಾಳ ರಾಜ್ಯ ಪಾನೀಯಗಳ ನಿಗಮ ನೀಡಿದೆ. ಕರೋನಾ ವೈರಸ್ ಸಾಂಕ್ರಾಮಿಕದ ಈ ಕಾಲದಲ್ಲಿ ಮನೆ ಬಾಗಿಲಿಗೆ ಮದ್ಯ ಬರುವುದರಿಂದ ಮದ್ಯದಂಗಡಿಗಳ ಹೊರಗಿನ ಜನ ಸಂದಣಿ ಕಡಿಮೆಯಾಗುವ ನಿರೀಕ್ಷೆ ಇದೆ.
ಕರೋನಾ ವೈರಸ್ ಸೋಂಕನ್ನು ತಡೆಗಟ್ಟಲು ಮಾರ್ಚ್ 25 ರಿಂದ ಜಾರಿಗೆ ಬಂದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಆರಂಭಿಕ ಹಂತಗಳಲ್ಲಿ ಮದ್ಯದಂಗಡಿಗಳನ್ನು ಸಹ ಮುಚ್ಚಲಾಗಿತ್ತು. ಇದರಿಂದಾಗಿ ರಾಜ್ಯ ಸರ್ಕಾರಗಳಿಗೆ ಮದ್ಯ ಮಾರಾಟದಿಂದ ಸಿಗುವ ಆದಾಯದಲ್ಲಿ ಭಾರಿ ನಷ್ಟ ಉಂಟಾಗಿತ್ತು. ಅದರ ನಂತರ ಕೆಲವು ರಾಜ್ಯಗಳು ಲಾಕ್ ಡೌನ್ ಸಮಯದಲ್ಲಿ ಮದ್ಯದಂಗಡಿಗಳನ್ನು ತೆರೆಯುವ ನಿರ್ಧಾರವನ್ನು ತೆಗೆದುಕೊಂಡವು. ಆದರೆ ಇದರಿಂದ ಮದ್ಯದಂಗಡಿಗಳ ಹೊರಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರು ಜಮಾವಣೆಗೊಂಡರು ಮತ್ತು ಅನೇಕ ಸ್ಥಳಗಳಲ್ಲಿ ಸಾಮಾಜಿಕ ಅಂತರದ ನಿಯಮಗಳನ್ನು ಮುರಿಯಲಾಯಿತು. ಅಂದಿನಿಂದ, ಮದ್ಯವನ್ನು ಮನೆಗೆ ತಲುಪಿಸುವ ಬೇಡಿಕೆ ವೇಗ ಪಡೆದುಕೊಂಡಿತ್ತು.
ಸುದ್ದಿ ಸಂಸ್ಥೆ ರಾಯ್ಟರ್ಸ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಸಂಸ್ಥೆಗೆ ಕೆಲ ದಾಖಲೆಗಳು ದೊರೆತಿದ್ದು, ದಾಖಲೆಗಳ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಮನೆಗಳಿಗೆ ಮದ್ಯವನ್ನು ತಲುಪಿಸಲು ಅಮೆಜಾನ್ ಅನುಮತಿ ಪಡೆದಿದೆ ಎಂದು ಹೇಳಿದೆ. ಪಶ್ಚಿಮ ಬಂಗಾಳದ ಆನ್ಲೈನ್ ಚಿಲ್ಲರೆ ವ್ಯಾಪಾರದ ಅಧಿಕೃತ ಏಜೆನ್ಸಿಯಾದ ಪಶ್ಚಿಮ ಬಂಗಾಳ ರಾಜ್ಯ ಪಾನೀಯಗಳ ನಿಗಮ ಜಾರಿಗೊಳಿಸಿರುವ ನೋಟಿಸ್ ನಲ್ಲಿ "ನೋಂದಣಿಗೆ ಅರ್ಹವಾದ ಕಂಪನಿಗಳಲ್ಲಿ ಅಮೆಜಾನ್ ಕೂಡ ಒಂದು" ಎಂದು ಹೇಳಿತ್ತು.
ಅಲಿಬಾಬಾ ಬೆಂಬಲಿತ ಭಾರತೀಯ ಚಿಲ್ಲರೆ ವ್ಯಾಪಾರ ಉದ್ಯಮವಾದ ಬಿಗ್‌ಬಾಸ್ಕೆಟ್ ರಾಜ್ಯದಲ್ಲಿ ಮನೆ ಮದ್ಯ ವಿತರಣೆಗೆ ಅನುಮೋದನೆ ಪಡೆದಿದೆ ಎಂದು ಈ ನೋಟಿಸ್ ನಲ್ಲಿ ತಿಳಿಸಲಾಗಿದೆ. ಆದರೆ, ಅಮೆಜಾನ್ ಆಗಲಿ ಅಥವಾ ಬಿಗ್ ಬಾಸ್ಕೆಟ್ ಆಗಲಿ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ಪ್ರಕಟಿಸಿಲ್ಲ. ಈ ಹಿಂದೆ ಎರಡು ಭಾರತೀಯ ಆಹಾರ-ವಿತರಣಾ ಉದ್ಯಮಗಳಾದ ಸ್ವಿಗ್ಗಿ ಮತ್ತು ಜೊಮಾಟೊ ಕಳೆದ ತಿಂಗಳಿನಿಂದ ಕೆಲವು ನಗರಗಳಲ್ಲಿ ಆಲ್ಕೊಹಾಲ್ ವಿತರಣೆಯನ್ನು ಪ್ರಾರಂಭಿಸಿವೆ. ಪಶ್ಚಿಮ ಬಂಗಾಳವು ಭಾರತದ ನಾಲ್ಕನೇ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ರಾಜ್ಯದಲ್ಲಿ 9 ಕೋಟಿ ಜನಸಂಖ್ಯೆ ಇದೆ.