Gail Omvedt: ಅಂಬೇಡ್ಕರವಾದಿ ಚಿಂತಕಿ ಗೇಲ್ ಓಮ್‌ವೆಡ್ ಇನ್ನಿಲ್ಲ

ದಲಿತ ಇತಿಹಾಸ ಮತ್ತು ರಾಜಕೀಯ, ಅಂಬೇಡ್ಕರ್‌ ಚಳುವಳಿ ಮತ್ತು ಸಾಮಾಜಿಕ ಚಳುವಳಿಗಳ ಕುರಿತ ಬರಹಗಳಿಗೆ ಹೆಸರುವಾಸಿಯಾಗಿದ್ದ ಅಮೇರಿಕಾ ಮೂಲದ ಭಾರತೀಯ ಚಿಂತಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೇಲ್ ಓಮ್‌ವೆಡ್ ಅವರು ತಮ್ಮ 81ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.ಅವರಿಗೆ ಪತಿ ಭರತ್ ಪಾತಂಕರ್, ಮಗಳು ಪ್ರಾಚಿ,ಮೊಮ್ಮಗಳು ನಿಯಾ ಮತ್ತು ಅಳಿಯ ತೇಜಸ್ವಿ ಇದ್ದಾರೆ.

Written by - Manjunath N | Last Updated : Aug 25, 2021, 06:43 PM IST
  • ಓಮ್‌ವೆಡ್‌ ಅವರ ವಿದ್ವತ್ಪೂರ್ಣ ಬರಹಗಳು ಈ ದೇಶದ ಬಹುಜನ ಸಮುದಾಯದ ಜೊತೆಗೆ ಆಳವಾಗಿ ನಂಟನ್ನು ಹೊಂದಿದ್ದವು,
  • ಇದರಿಂದಾಗಿಯೇ ಅವರು ರಾಷ್ಟ್ರೀಯ-ಮತ್ತು ಅಂತರಾಷ್ಟ್ರೀ ಬೌದ್ದಿಕ ವಲಯದಲ್ಲಿ ಪುಲೆ-ಅಂಬೇಡ್ಕರವಾದಿ ಚಳುವಳಿಗೆ ಅವರು ಧ್ವನಿಯಾಗಿದ್ದರು.
  • ಮಹಾತ್ಮ ಫುಲೆ, ಛತ್ರಪತಿ ಶಾಹು ಮಹಾರಾಜ್ ಮತ್ತು ಡಾ ಭೀಮರಾವ್ ಅಂಬೇಡ್ಕರ್ ಅವರ ಕೊಡುಗೆಗಳನ್ನು ಜಗತ್ತಿಗೆ ಸಾರುವಲ್ಲಿ ಓಮ್‌ವೆಡ್ ಅವರ ಕೊಡುಗೆ ಪ್ರಮುಖವಾದದ್ದು.
Gail Omvedt: ಅಂಬೇಡ್ಕರವಾದಿ ಚಿಂತಕಿ ಗೇಲ್ ಓಮ್‌ವೆಡ್ ಇನ್ನಿಲ್ಲ  title=
Photo Courtesy: Facebook

ನವದೆಹಲಿ: ದಲಿತ ಇತಿಹಾಸ ಮತ್ತು ರಾಜಕೀಯ, ಅಂಬೇಡ್ಕರ್‌ ಚಳುವಳಿ ಮತ್ತು ಸಾಮಾಜಿಕ ಚಳುವಳಿಗಳ ಕುರಿತ ಬರಹಗಳಿಗೆ ಹೆಸರುವಾಸಿಯಾಗಿದ್ದ ಅಮೇರಿಕಾ ಮೂಲದ ಭಾರತೀಯ ಚಿಂತಕಿ ಹಾಗೂ ಹೋರಾಟಗಾರ್ತಿ ಗೇಲ್ ಓಮ್‌ವೆಡ್ ಅವರು ತಮ್ಮ 81ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾಸೆಗಾಂವ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.ಅವರಿಗೆ ಪತಿ ಭರತ್ ಪಾತಂಕರ್, ಮಗಳು ಪ್ರಾಚಿ,ಮೊಮ್ಮಗಳು ನಿಯಾ ಮತ್ತು ಅಳಿಯ ತೇಜಸ್ವಿ ಇದ್ದಾರೆ.

ಅಮೇರಿಕಾದ ಮಿನ್ನಿಯಾಪೋಲಿಸ್ ನಲ್ಲಿ ಅಗಸ್ಟ್ 2, 1941 ರಂದು ಜನಿಸಿದ ಗೇಲ್ ಓಮ್‌ವೆಡ್ (Gail Omvedt) 1971 ರಲ್ಲಿ ಭಾರತಕ್ಕೆ ಬಂದು ಸಾಮಾಜಿಕ ಚಳುವಳಿಗಳು ಮತ್ತು ಮಹಾತ್ಮ ಜ್ಯೋತಿಬಾ ಫುಲೆಯವರ ಚಿಂತನೆ ಮತ್ತು ಸಾಮಾಜಿಕ ಕಾರ್ಯಗಳ ಕುರಿತಾಗಿ ಸಂಶೋಧನೆ ಮಾಡಿದರು.ತದನಂತರ ಅವರು ತಮ್ಮ ಸಂಶೋಧನೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಮಹಾರಾಷ್ಟ್ರದಲ್ಲಿಯೇ ನೆಲೆಯೂರಿದರು, ಮುಂದೆ 1983 ರಲ್ಲಿ ಅವರು ಭಾರತೀಯ ಪೌರತ್ವವನ್ನು ಪಡೆದುಕೊಂಡರು.

ಖ್ಯಾತ ಎಡಪಂಥೀಯ ಚಿಂತಕರಾದ ಭರತ್ ಪಾತಂಕರ್ ಮತ್ತು ಓಮ್‌ವೆಡ್ 1980 ರಲ್ಲಿ ಮಹಾರಾಷ್ಟ್ರದಲ್ಲಿ ರೈತರು ಮತ್ತು ಇತರರ ಸಮಸ್ಯೆಗಳನ್ನು ಪರಿಹರಿಸಲು ಸಾಮಾಜಿಕ ರಾಜಕೀಯ ಸಂಘಟನೆಯಾದ ಶ್ರಮಿಕ್ ಮುಕ್ತಿ ದಳವನ್ನು ಸ್ಥಾಪಿಸಿದರು. ಈ ಸಂಘಟನೆ ಹಲವು ವರ್ಷಗಳಿಂದ  ಅಣೆಕಟ್ಟುಗಳು, ಬರ ಮತ್ತು ಯೋಜನಾ ನಿರಾಶ್ರಿತರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವುದಲ್ಲದೆ, ಜಾತಿ ಆಧಾರಿತ ದಬ್ಬಾಳಿಕೆಯ ವಿರುದ್ಧವೂ ಕೂಡ ಧ್ವನಿ ಎತ್ತುತ್ತಾ ಬಂದಿದೆ.

ಓಮ್‌ವೆಡ್‌ ಅವರ ವಿದ್ವತ್ಪೂರ್ಣ ಬರಹಗಳು ಈ ದೇಶದ ಬಹುಜನ ಸಮುದಾಯದ ಜೊತೆಗೆ ಆಳವಾಗಿ ನಂಟನ್ನು ಹೊಂದಿದ್ದವು, ಇದರಿಂದಾಗಿಯೇ ಅವರು ರಾಷ್ಟ್ರೀಯ-ಮತ್ತು ಅಂತರಾಷ್ಟ್ರೀ ಬೌದ್ದಿಕ ವಲಯದಲ್ಲಿ ಪುಲೆ-ಅಂಬೇಡ್ಕರವಾದಿ ಚಳುವಳಿಗೆ ಅವರು ಧ್ವನಿಯಾಗಿದ್ದರು.ಅವರು ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಫುಲೆ-ಅಂಬೇಡ್ಕರ್ ಪೀಠದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

ಓಂವೆಡ್ ಅವರು ಒಬ್ಬ ಉತ್ತಮ ವಿದ್ವಾಂಸರಾಗಿದ್ದರು, ಅವರು Dalits and Democratic Revolution,Buddhism in India: Challenging Brahmanism and Caste,Understanding Caste: From Buddha to Ambedkar and Beyond,Seeking Begumpura: The Social Vision of Anticaste Intellectuals,ನಂತಹ ಒಟ್ಟು 22 ಮಹತ್ವದ ಕೃತಿಗಳನ್ನು ಪ್ರಕಟಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ದೇಶಿಯ ಬಹುಜನ ಚಳುವಳಿ ಹಾಗೂ ಅದರ ವಿಚಾರಧಾರೆಯನ್ನು ಪಸರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.

ಮಹಾತ್ಮ ಫುಲೆ, ಛತ್ರಪತಿ ಶಾಹು ಮಹಾರಾಜ್ ಮತ್ತು ಡಾ ಭೀಮರಾವ್ ಅಂಬೇಡ್ಕರ್ ಅವರ ಕೊಡುಗೆಗಳನ್ನು ಜಗತ್ತಿಗೆ ಸಾರುವಲ್ಲಿ ಓಮ್‌ವೆಡ್ ಅವರ ಪಾತ್ರ ಪ್ರಮುಖವಾದದ್ದು, ಮಹಿಳಾ ಚಳುವಳಿ ಮತ್ತು ಆದಿವಾಸಿ, ಬಹುಜನ ಮತ್ತು ಭೂಹೀನ ಜನರ ಚಳುವಳಿಗಳಲ್ಲಿ ಅವರ ಭಾಗವಹಿಸುವಿಕೆಯು ಅವರ ವಿದ್ವತ್ ನ್ನು ರೂಪಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿತ್ತು ಎನ್ನಬಹುದು.ಈಗ ಅವರ ನಿಧನದಿಂದ ಜನಪರ ಹೋರಾಟಗಳಿಗೆ ಹಾಗೂ ಶೋಷಿತ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News