ನವದೆಹಲಿ: ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸಬೇಕಿದ್ದ ಪಂಚ ಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿ ಯು.ಯು.ಲಲಿತ್ ಅವರು ಹೊರ ಬಂದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜನವರಿ 29ಕ್ಕೆ ಸುಪ್ರೀಂ ಕೋರ್ಟ್ ಮುಂದೂಡಿದೆ.
ನ್ಯಾಯಮೂರ್ತಿ ಉದಯ್ ಲಲಿತ್ ಅವರು, 1994ರಲ್ಲಿ ಇದೇ ಪ್ರಕರಣದಲ್ಲಿ ವಕೀಲರಾಗಿ ವಾದ ಮಂಡಿಸಿದ್ದರು. ಬಳಿಕ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿ ಇದೀಗ ಸುಪ್ರೀಂ ಕೋರ್ಟ್ ಪಂಚ ಸದಸ್ಯ ಪೀಠಕ್ಕೆ ಸೇರ್ಪಡೆಯಾಗಿದ್ದರು. ಹಾಗಾಗಿ, ಕಲಾಪ ಆರಂಭವಾಗುತ್ತಿದ್ದಂತೆಯೇ ಪಂಚ ಸದಸ್ಯ ಪೀಠದಲ್ಲಿ ಉದಯ್ ಲಲಿತ್ ಅವರನ್ನು ಮುಂದುವರೆಸಲು ಮುಸ್ಲಿಂ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಮುಖವಾಗಿ ಅವರು ಪಂಚ ಸದಸ್ಯ ಪೀಠದಲ್ಲಿರುವುದಕ್ಕೆ ತಮ್ಮ ಆಕ್ಷೇಪವಿದೆ ಎಂದು ಅರ್ಜಿದಾರರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಉದಯ್ ಲಲಿತ್ ಅವರು ಸಾಂವಿಧಾನಿಕ ಪೀಠದಿಂದ ಹೊರನಡೆಯಬೇಕಾಯಿತು.
#AyodhyaHearing: Justice UU Lalit recuses himself from hearing the case after advocate Rajeev Dhavan pointed out that Justice UU Lalit had appeared for Kalyan Singh in the matter https://t.co/FJpoznSX7Z
— ANI (@ANI) January 10, 2019
Supreme Court fixes January 29 as the next date of hearing https://t.co/AIQ6k0g20U
— ANI (@ANI) January 10, 2019
ಕಳೆದ ಎರಡು ದಿನಗಳ ಹಿಂದಷ್ಟೇ ಅಯೋಧ್ಯೆ ವಿಚಾರಣೆಗಾಗಿ ಸಿಜೆಐ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ಎಸ್. ಎ. ಬೊಬ್ಡೆ, ಎನ್. ವಿ. ರಮಣ, ಉದಯ್ ಉಮೇಶ್ ಲಲಿತ್ ಹಾಗೂ ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವನ್ನು ಸುಪ್ರೀಂಕೋರ್ಟ್ ರಚನೆ ಮಾಡಿ, ಜನವರಿ 10ಕ್ಕೆ ವಿಚಾರಣೆ ನಡೆಯುವುದಾಗಿ ಹೇಳಿತ್ತು. ಇದೀಗ ಇತ್ತೀಚಿನ ಬೆಳವಣಿಗೆಯಿಂದಾಗಿ ನೂತನ ಪಿಥವನ್ನು ರಚಿಸಬೇಕಿರುವುದರಿಂದ ಮುಂದಿನ ವಿಚಾರಣೆಯನ್ನ ಜನವರಿ 29ಕ್ಕೆ ಮುಂದೂಡಲಾಗಿದೆ.
2010ರಲ್ಲಿ ಈ ವಿವಾದದ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ ಈ 2.77 ಎಕರೆ ವಿವಾದಿತ ಪ್ರದೇಶವನ್ನು ರಾಮಲಲ್ಲಾ, ಸುನ್ನಿ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖರ ಈ ಮೂವರಿಗೆ ಸಮನಾಗಿ ಹಂಚಿಕೆ ಮಾಡಿ ತೀರ್ಪು ಕೊಟ್ಟಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸಾಕಷ್ಟು ಮೇಲ್ಮನವಿಗಳು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಕೆಯಾಗಿದ್ದವು.