ನವದೆಹಲಿ: ಮೊಬೈಲ್ ಡೇಟಾ ಬೆಲೆ ಅತಿ ಕಡಿಮೆ ಇರುವ ದೇಶಗಳ ಪಟ್ಟಿಯಲ್ಲಿ ಭಾರತ ಕೂಡ ಒಂದು. ಆದರೆ, ಒಂದು ವೇಳೆ ಮೊಬೈಲ್ ಡೇಟಾ ನೀಡುವ ಟೆಲಿಕಾಂ ಕಂಪನಿಗಳ ಶಿಫಾರಸ್ಸುಗಳಿಗೆ ಒಪ್ಪಿಗೆ ದೊರೆತರೆ, ಭಾರತದಲ್ಲಿ ಮೊಬೈಲ್ ಡೇಟಾ ಬೆಲೆಯಲ್ಲಿ 10 ಪಟ್ಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ. ಸದ್ಯ ಭಾರತದಲ್ಲಿ ಪ್ರತಿ GB ಮೊಬೈಲ್ ಡೇಟಾ ಸರಾಸರಿ ಬೆಲೆ ರೂ.19 ನಿಗದಿಯಾಗಿದೆ. ಇನ್ನೊಂದೆಡೆ ಜಾಗತಿಕವಾಗಿ ಪ್ರತಿ GB ಮೊಬೈಲ್ ಡೇಟಾ ಬೆಲೆ ರೂ.650 ಇದೆ.
ಬೆಲೆ ಏರಿಕೆಗೆ ಕಾರಣ ಏನು?
ಭಾರತದಲ್ಲಿ ಮೊಬೈಲ್ ಡೇಟಾ ನೀಡುವ ಟೆಲಿಕಾಂ ಕಂಪನಿಗಳು ಮೊಬೈಲ್ ಡೇಟಾಗೆ ಫ್ಲೋರ್ ರೇಟ್ ನಿಗದಿಯಾಗಬೇಕು ಎಂಬ ಬೇಡಿಕೆ ಸಲ್ಲಿಸಿವೆ. ಫ್ಲೋರ್ ರೇಟ್ ಮೊಬೈಲ್ ಡೇಟಾದ ಕನಿಷ್ಠ ಬೆಲೆಯಾಗಿದೆ. ಇದರಿಂದ ಎಲ್ಲ ಟೆಲಿಕಾಂ ಕಂಪನಿಗಳು ಫ್ಲೋರ್ ರೇಟ್ ಆಧರಿಯೇ ತಮ್ಮ ಮೊಬೈಲ್ ಡೇಟಾ ಬೆಲೆಯನ್ನು ನಿಗದಿಪಡಿಸುವುದು ಅನಿವಾರ್ಯವಾಗಲಿದೆ. ಸದ್ಯ ವೊಡಾಫೋನ್-ಐಡಿಯಾಗಳಂತಹ ಕಂಪನಿಗಳು ಸಾಲದ ಸುಳಿಗೆ ಸಿಲುಕಿವೆ. ಇನ್ನೊಂದೆಡೆ ರಿಲಯನ್ಸ್ ಜಿಯೋ ಕೂಡ ಫ್ಲೋರ್ ರೇಟ್ ನಿಗದಿಯಾಗಬೇಕು ಎಂದು ಬಯಸುತ್ತಿದೆ. ವೊಡಾಫೋನ್ ಪ್ರತಿ GB ಡೇಟಾಗೆ ರೂ.35 ಕನಿಷ್ಠ ಬೆಲೆಯನ್ನು ನಿಗದಿಪಡಿಸಬೇಕು ಎಂಬ ಬೇಡಿಕೆ ಸಲ್ಲಿಸಿದ್ದರೆ, ಏರ್ಟೆಲ್ ರೂ.30 ಮತ್ತು ಜಿಯೋ ರೂ.20 ನಿಗದಿಯಾಗಬೇಕು ಎನ್ನುತ್ತಿವೆ.
ನೀತಿ ಆಯೋಗದ ಮುಖ್ಯಸ್ಥರಾಗಿರುವ ಅಮಿತಾಭ್ ಕಾಂತ್ ಕೂಡ ಮೊಬೈಲ್ ಡೇಟಾಗಳಿಗೆ ಫ್ಲೋರ್ ರೇಟ್ ಗಳು ನಿಗದಿಯಾಗಬೇಕು ಎಂಬ ಬೇಡಿಕೆಯನ್ನು ಸಲ್ಲಿಸಿರುವ ಕಾರಣ ಮೊಬೈಲ್ ಡೇಟಾ ಬೆಲೆಯಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಅಮಿತಾಭ್ ಕಾಂತ್, ಭಾರತೀಯ ಟೆಲಿಕಾಂ ಸೆಕ್ಟರ್ ಸದ್ಯ ಸಾಲದಲ್ಲಿ ಮುಳುಗಿಹೋಗಿದ್ದು, ಇದರಿಂದ ಮೇಲೇಳುವ ಅವಶ್ಯಕತೆ ಇದೆ ಎಂದು ಸಮರ್ಥಿಸಿದ್ದಾರೆ. ಆದರೆ, ಕೇವಲ ಈ ಒಂದೇ ಕೆಲಸ ಮಾಡುವ ಮೂಲಕ ತೊಂದರೆಗಳು ನಿವಾರಣೆಯಾಗಲಿವೆ ಎಂಬುದು ಇದರ ಅರ್ಥವಲ್ಲ ಎಂದೂ ಕೂಡ ಅವರು ಸ್ಪಷ್ಟಪಡಿಸಿದ್ದಾರೆ. ಫ್ಲೋರ್ ರೇಟ್ ನಿಗದಿಯಾಗದೆ ಇದ್ದ ಕಾರಣ ಸದ್ಯ ಮೊಬೈಲ್ ಕಂಪನಿಗಳು ತಮ್ಮ ಡೇಟಾಗೆ ತಾವೇ ದರವನ್ನು ನಿಗದಿಪಡಿಸುತ್ತಿವೆ. ಇಂತಹುದರಲ್ಲಿ ಮಾರುಕಟ್ಟೆಯಲ್ಲಿ ಪೈಪೋಟಿ ಎದುರಿಸಲು ಅಗ್ಗದ ಬೆಲೆಯಲ್ಲಿ ಮೊಬೈಲ್ ಡೇಟಾ ನೀಡುವುದು ಕಂಪನಿಗಳಿಗೆ ಅನಿವಾರ್ಯತೆಯಾಗಿ ಪರಿಣಮಿಸಿದೆ.
ಒಂದು ವೇಳೆ ಟೆಲಿಕಾಂ ಕಂಪನಿಗಳು ಸಲ್ಲಿಸಿರುವ ಶಿಫಾರಸ್ಸುಗಳಿಗೆ ಒಂದು ವೇಳೆ TRAI ಹಸಿರು ನಿಶಾನೆ ಸೂಚಿಸಿದರೆ ಪ್ರತಿ GBಗೆ ರೂ.25ರವರೆಗೆ ಕನಿಷ್ಠ ಬೆಲೆ ನೀಡುವುದು ಅನಿವಾರ್ಯವಾಗಲಿದೆ. ಇದರಿಂದ ದಿನಕ್ಕೆ 1.5GB ಡೇಟಾನಂತೆ ತಿಂಗಳಿಗೆ 45 GB ಮೊಬೈಲ್ ಡೇಟಾ ಪಡೆಯಲು ನೀವು ರೂ.1000ಕ್ಕೂ ಹೆಚ್ಚು ಹಣ ವ್ಯಯಿಸಬೇಕಾಗುವ ಅನಿವಾರ್ಯತೆ ಎದುರಾಗಲಿದೆ.