ನವದೆಹಲಿ: ಈ ಹಿಂದೆ ಬಿಜೆಪಿ ಅವಧಿಪೂರ್ವ ಚುನಾವಣೆ ನಡೆಸುವ ಮನೋಸ್ಥಿತಿಯಲ್ಲಿತ್ತು. ಆದರೆ ಈಗ ಬಿಜೆಪಿಗೆ ಆ ಧೈರ್ಯ ಇಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಅವಧಿಪೂರ್ವ ಲೋಕಸಭೆ ಚುನಾವಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಅವಧಿಪೂರ್ವ ಚುನಾವಣೆ ನಡೆಸುವ ಬಗ್ಗೆ ಚಿಂತನೆ ನಡೆಸಿತ್ತು. ಅಂಥ ಸುಳಿವು ನನಗೂ ಸಿಕ್ಕಿತ್ತು. ಆದರೆ ಇತ್ತೀಚೆಗೆ ಜನಾಭಿಪ್ರಾಯ ಬಿಜೆಪಿ ವಿರೋಧಿಯಾಗಿದೆ. ಹಾಗಾಗಿ ಅವಧಿಪೂರ್ವ ಚುನಾವಣೆಗೆ ಹೋಗುವ ಧೈರ್ಯ ಮಾಡುವುದಿಲ್ಲ. ಬಿಜೆಪಿಯವರು ಅದನ್ನು ಇನ್ನೂ ಅಳೆದು ತೂಗುವ ಕೆಲಸದಲ್ಲಿದ್ದಾರೆ ಎಂದು ಹೇಳಿದರು.
ಗುಲ್ಬರ್ಗದಲ್ಲಿ ರೈಲ್ವೆ ವಿಭಾಗ ಸ್ಥಾಪನೆ
ನೂತನ ರೈಲ್ವೆ ವಿಭಾಗ ಸ್ಥಾಪನೆ ಮಾತನಾಡಿದ ಖರ್ಗೆ ಅವರು, ಗುರುವಾರ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿ ಮಾಡಿದ್ದು, ಗುಲ್ಬರ್ಗದಲ್ಲಿ ರೈಲ್ವೆ ವಿಭಾಗ ಸ್ಥಾಪಿಸಲು ಮನವಿ ಮಾಡಿರುವುದಾಗಿ ತಿಳಿಸಿದರು. 2014ರ ಪೂರಕ ಬಜೆಟ್ ನಲ್ಲಿ ರೈಲ್ವೆ ವಿಭಾಗ ಸ್ಥಾಪನೆಗಾಗಿ ೫ ಕೋಟಿ ಆರಂಭಿಕ ಹಣವನ್ನು ಇಡಲಾಗಿತ್ತು. ಅಲ್ಲದೆ, ಕರ್ನಾಟಕ ಸರ್ಕಾರ 30 ಎಕರೆ ಜಮೀನನ್ನೂ ಸಹ ಮಂಜೂರು ಮಾಡಿದೆ. ಆದರೆ ಈ ಬಗ್ಗೆ ಕೇಂದ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಖರ್ಗೆ ಹೇಳಿದರು.