ನವದೆಹಲಿ: ಇಂದು ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮತಗಣನೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ದೆಹಲಿಯ ಎಲ್ಲಾ 7 ಲೋಕಸಭಾ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿದೆ.
ಆರಂಭಿಕ ಪ್ರವೃತ್ತಿಯ ಪ್ರಕಾರ ಈಶಾನ್ಯ ದೆಹಲಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ಸ್ಪರ್ಧಿಸಿದ್ದ, ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ 59.54 ಪ್ರತಿಶತದಷ್ಟು ಮತಗಳೊಂದಿಗೆ ಮುನ್ನಡೆ ಸಾಧಿಸುತ್ತಿದ್ದಾರೆ. ಪೂರ್ವ ದೆಹಲಿಯಲ್ಲಿ, ಎಎಪಿಯ ಆತಿಷಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಅಭ್ಯರ್ಥಿ ಅರವಿಂದರ್ ಸಿಂಗ್ ಲವ್ಲಿ ವಿರುದ್ಧ ಕಣಕ್ಕಿಳಿದಿದ್ದ ಕ್ರಿಕೆಟಿಗ ಗೌತಮ್ ಗಂಭೀರ್ 58.96 ಶೇಕಡಾ ಮತಗಳಿಂದ ಮುಂದಿದ್ದಾರೆ.
ದಕ್ಷಿಣ ದೆಹಲಿ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ನಡುವೆ ತ್ರಿಕೋನ ಹೋರಾಟವನ್ನು ಎದುರಿಸುತ್ತಿದೆ. ಬಿಜೆಪಿಯ ರಮೇಶ್ ಬಿಧುರಿ ಅವರ ಎದುರಾಳಿಗಳಾದ ಎಎಪಿ ಮತ್ತು ಕಾಂಗ್ರೆಸ್ನ ವಿಜೇಂದರ್ ಸಿಂಗ್ ಅವರ ರಾಘವ್ ಚಧಾ ವಿರುದ್ಧ ಮುನ್ನಡೆಯುತ್ತಿದ್ದಾರೆ. ನವದೆಹಲಿಯಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಐತಿಹಾಸಿಕ ಕೆಂಪು ಕೋಟೆ ಹೊಂದಿರುವ ಚಾಂದಿನಿ ಚೌಕ್ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ಡಾ. ಹರ್ಷವರ್ಧನ್ ಹಾಗೂ ಅದೇ ಕ್ಷೇತ್ರದಿಂದ ನಾಲ್ಕು ಬರಿ ಸಂಸತ್ ಮೆಟ್ಟಿಲೇರಿರುವ ಕಾಂಗ್ರೆಸಿನ ಜೈ ಪ್ರಕಾಶ್ ಅಗರವಾಲ್ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಡಾ. ಹರ್ಷವರ್ಧನ್ 22000 ಕ್ಕೂ ಹೆಚ್ಚು ಮತಗಳಿಂದ ಮುಂದಿದ್ದಾರೆ.