ಮೇಘಾಲಯ: ಕಳೆದ ಡಿಸೆಂಬರ್ 13 ರಂದು ಮೇಘಾಲಯದ ಈಸ್ಟ್ ಜೈಂತಿಯಾ ಹಿಲ್ಸ್ ನಲ್ಲಿ ಅಕ್ರಮ ಗಣಿಗಾರಿಕೆ ನಡೆಸುವಾಗ ಸಂಭವಿಸಿದ್ದ ದುರಂತದಲ್ಲಿ 15 ಕಾರ್ಮಿಕರು ಸಿಲುಕಿದ್ದರು. ದುರಂತ ಸಂಭವಿಸಿ 32 ದಿನಗಳ ಬಳಿಕ ಓರ್ವ ಕಾರ್ಮಿಕನ ದೇಹ ಪತ್ತೆಹಚ್ಚುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದು, ಉಳಿದ 14 ಕಾರ್ಮಿಕರ ದೇಹದ ಶೋಧಕಾರ್ಯ ಮುಂದುವರೆದಿದೆ.
ಕಳೆದ ಡಿಸೆಂಬರ್ 13ರಂದು ಮೇಘಾಲಯದ ಈಸ್ಟ್ ಜೈಂತಿಯಾ ಹಿಲ್ಸ್ ನಲ್ಲಿ ಅಕ್ರಮ ಗಣಿಗಾರಿಕೆ ನಡೆಸಲು ಭೂಮಿಯ ಆಳಕ್ಕೆ ಇಳಿದಿದ್ದ 15 ಕಾರ್ಮಿಕರು ನದಿ ಸಮೀಪದಲ್ಲೆ ಭೂಮಿ ಅಗೆದಾಗ ನದಿಯ ನೀರು ಇವರಿದ್ದ ಪ್ರದೇಶವನ್ನು ಆವರಿಸಿ ದುರಂತ ಸಂಭವಿಸಿತ್ತು. ಬಳಿಕ ದುರಂತದಲ್ಲಿ ಸಿಲುಕಿರುವ ಕಾರ್ಮಿಕರ ಪಾರುಗಾಣಿಕಾ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ.
ಮತ್ತೊಂದೆಡೆ, ಪರಿಣತಿಯನ್ನು ಪಡೆದ ವಿಜ್ಞಾನಿಗಳ ಉನ್ನತ ತಂಡವು ರಕ್ಷಣಾ ಕಾರ್ಯಾಚರಣೆಯನ್ನು ವೇಗಗೊಳಿಸಲು ಭಾನುವಾರ ಈಸ್ಟ್ ಜೈಂತಿಯಾ ಹಿಲ್ಸ್ ಜಿಲ್ಲೆಯನ್ನು ತಲುಪಿತು. ಈ ಪಾರುಗಾಣಿಕಾ ಕಾರ್ಯಾಚರಣೆಯನ್ನು ದೇಶದ ಅತಿ ಉದ್ದದ ಪಾರುಗಾಣಿಕಾ ಕಾರ್ಯಾಚರಣೆಯೆಂದು ವಿವರಿಸಲಾಗಿದೆ. ಎನ್ಡಿಆರ್ಎಫ್ ಮತ್ತು ನೌಕಾದಳದ ಸಿಬ್ಬಂದಿ ವಿವಿಧ ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
Photo: ANI
ಹೈದರಾಬಾದ್, ನ್ಯಾಷನಲ್ ಜಿಯೊಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಎನ್ಜಿಐಆರ್-ಸಿಎಸ್ಐಆರ್) ಮತ್ತು ಗ್ರಾವಿಟಿ ಮತ್ತು ಮ್ಯಾಗ್ನೆಟಿಕ್ ಗ್ರೂಪ್ನ ತಜ್ಞರ ತಂಡವು ಪಾರುಗಾಣಿಕಾ ಸ್ಥಳಕ್ಕೆ ತಲುಪಿದೆ ಎಂದು ರಕ್ಷಣಾ ವಕ್ತಾರ ಆರ್ ಸುಸಾಂಗಿ ತಿಳಿಸಿದ್ದಾರೆ.
ಇದಲ್ಲದೆ, 'ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್' (ಜಿಪಿಆರ್) ಮತ್ತು ಚೆನ್ನೈ ಮೂಲದ 'ರೆಮೋಟಿಲಿ ಆಪರೇಟೆಡ್ ವೆಹಿಕಲ್' (ROV) ತಂಡವು ರಕ್ಷಣಾ ಕಾರ್ಯಾಚರಣೆಗೆ ನೆರವಾಗಿದೆ. 370 ಮಿಲಿಯನ್ ಘನ ಮೀಟರ್ಗಳಷ್ಟು ನೀರು ಆಳವಾದ ಗಣಿಗಳಿಂದ ಹೊರತೆಗೆಯಲಾಗಿದೆ, ಆದರೆ ನೀರಿನ ಮಟ್ಟದಲ್ಲಿ ನಿರೀಕ್ಷೆಯಷ್ಟು ಬದಲಾವಣೆಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ.