2019ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್​ಪಿ ಏಕಾಂಗಿ ಸ್ಪರ್ಧೆ: ಮಾಯಾವತಿ

90 ವಿಧಾನಸಭಾ ಕ್ಷೇತ್ರಗಳುಳ್ಳ ಹರಿಯಾಣ ರಾಜ್ಯ ವಿಧಾನಸಭೆ ಚುನಾವಣೆ 2019 ರ ಅಕ್ಟೋಬರ್‌ನಲ್ಲಿ ನಡೆಯಲಿದೆ.

Updated: Sep 7, 2019 , 08:25 AM IST
2019ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್​ಪಿ ಏಕಾಂಗಿ ಸ್ಪರ್ಧೆ: ಮಾಯಾವತಿ

ನವದೆಹಲಿ: ದುಶ್ಯಂತ್ ಚೌತಾಲಾ ನೇತೃತ್ವದ ಜನ್ನಾಯಕ್ ಜನತಾ ಪಕ್ಷ (ಜೆಜೆಪಿ) ಯೊಂದಿಗೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳಲು ಬಿಎಸ್​ಪಿ ಪಕ್ಷದ ಹರಿಯಾಣ ಘಟಕ ವಿಫಲವಾದ ಹಿನ್ನೆಲೆಯಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್​ಪಿ) ಮುಂಬರುವ  2019 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಈ ಬಗ್ಗೆ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಶುಕ್ರವಾರ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

"ಬಿಎಸ್​ಪಿ ರಾಷ್ಟ್ರೀಯ ಪಕ್ಷವಾಗಿದೆ, ಅದರ ಪ್ರಕಾರ ನಾವು ಹರಿಯಾಣ ವಿಧಾನಸಭಾ ಚುನಾವಣೆಗೆ ದುಶ್ಯಂತ್ ಚೌತಲಾ ಅವರ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಸ್ಥಾನ ಹಂಚಿಕೆಯಲ್ಲಿ ಅವರ ಅನುಚಿತ ವರ್ತನೆಯಿಂದಾಗಿ ಬಿಎಸ್​ಪಿ ಹರಿಯಾಣ ಘಟಕದ ಸಲಹೆಗಳ ಮೇರೆಗೆ ನಾವು ಅವರೊಂದಿಗೆ ನಮ್ಮ ಮೈತ್ರಿಯನ್ನು ಕೊನೆಗೊಳಿಸಿದ್ದೇವೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

"ಹರಿಯಾಣ ಚುನಾವಣೆಗೆ ಬಿಎಸ್​ಪಿ ಎಲ್ಲಾ ಸ್ಥಾನಗಳಲ್ಲಿಯೂ ಪೂರ್ಣ ಸಿದ್ಧತೆಯೊಂದಿಗೆ ಸ್ಪರ್ಧಿಸಲಿದೆ ಎಂದು ಪಕ್ಷದ ಹೈಕಮಾಂಡ್ ನಿರ್ಧರಿಸಿದೆ" ಎಂದು ಅವರು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಬಿಎಸ್​ಪಿ ಮತ್ತು ಜೆಜೆಪಿ ಈ ವರ್ಷದ ಆಗಸ್ಟ್ನಲ್ಲಿ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿತು. 90 ವಿಧಾನಸಭಾ ಕ್ಷೇತ್ರಗಳುಳ್ಳ ಹರಿಯಾಣ ರಾಜ್ಯ ವಿಧಾನಸಭೆ ಚುನಾವಣೆ 2019 ರ ಅಕ್ಟೋಬರ್‌ನಲ್ಲಿ ನಡೆಯಲಿದೆ.