ಪುಲ್ವಾಮ ಉಗ್ರರ ದಾಳಿ: ಇಂದು ಸರ್ವ ಪಕ್ಷಗಳ ಸಭೆ ಕರೆದ ಕೇಂದ್ರ ಸರ್ಕಾರ

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಸಿಆರ್‌ಫಿಎಫ್‌ ಯೋಧರ ಮೇಲೆ ನಡೆಸಿದ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದಾರೆ. ಹುತಾತ್ಮರ ದೇಹಗಳನ್ನು ಅವರ ತವರಿಗೆ ರವಾನಿಸಲಾಗಿದ್ದು, ಇಂದು ಹುತಾತ್ಮರ ಅಂತ್ಯಕ್ರಿಯೆ ನಡೆಯಲಿದೆ.

Last Updated : Feb 16, 2019, 08:47 AM IST
ಪುಲ್ವಾಮ ಉಗ್ರರ ದಾಳಿ: ಇಂದು ಸರ್ವ ಪಕ್ಷಗಳ ಸಭೆ ಕರೆದ ಕೇಂದ್ರ ಸರ್ಕಾರ title=
Pic Courtesy: PTI

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕ ದಾಳಿಯ ಬಗ್ಗೆ ಮಾಹಿತಿಯನ್ನು ಒದಗಿಸಲು ಶನಿವಾರ ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಸಂಸತ್ತಿನಲ್ಲಿ ಬೆಳಿಗ್ಗೆ 11 ಗಂಟೆಗೆ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಈ ಸಭೆ ಜರುಗಲಿದೆ. ಸಭೆಯಲ್ಲಿ ಉಗ್ರರ ದಾಳಿ ಬಗ್ಗೆ ಪಕ್ಷಗಳಿಗೆ ಮಾಹಿತಿ ನೀಡುವುದಲ್ಲದೆ, ಪ್ರಸ್ತುತ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆಯೂ ಗೃಹ ಸಚಿವ ರಾಜನಾಥ್‌ ಸಿಂಗ್‌ ವಿವರಿಸಲಿದ್ದಾರೆ. ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ಮಂದಿ ಸಿಆರ್‌ಫಿಎಫ್‌ ಯೋಧರ ಪಾರ್ಥಿವ ಶರೀರವಿರುವ ಪೆಟ್ಟಿಗೆಗಳನ್ನು  ಪಾಲಮ್ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ತರಲಾಯಿತು. ಮೊದಲು ಸೇನಾಪಡೆಯಿಂದ ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಗೃಹ ಸಚಿವ ರಾಜನಾಥ್ ಸಿಂಗ್ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.

ಸೇನಾಪಡೆಯ ಗೌರವದ ಬಳಿಕ ನರೇಂದ್ರ ಮೋದಿ, ಎಲ್ಲ ಯೋಧರ ಶವಪೆಟ್ಟಿಗೆಗಳ ಸುತ್ತ  ಪ್ರದಕ್ಷಿಣೆ ಬಂದು, ನಮಸ್ಕರಿಸಿ, ಗೌರವ ಸಲ್ಲಿಸಿದರು. 

ವಿಮಾನ ನಿಲ್ದಾಣದಲ್ಲಿ ಅಂತಿಮ ನಮನ ಸಲ್ಲಿಸಿದ ಬಳಿಕ ಕಾಫಿನ್ ಬಾಕ್ಸ್‌ಗಳನ್ನು ಯೋಧರ ತವರು ರಾಜ್ಯಕ್ಕೆ ಕಳುಹಿಸಲಾಯಿತು. ಇಂದು ಹುತಾತ್ಮರ ಅಂತ್ಯಕ್ರಿಯೆ ನಡೆಯಲಿದೆ.

40ಕ್ಕೂ ಹೆಚ್ಚು ಯೋಧರ ಸಾವಿಗೆ ಕಾರಣವಾದ ಭೀಕರ ಉಗ್ರ ದಾಳಿ ವಿರುದ್ಧ ಸೇಡಿಗಾಗಿ ದೇಶಾದ್ಯಂತ ಭುಗಿಲೆದ್ದಿರುವ ಜನಾಗ್ರಹದ ನಡುವೆಯೇ ಸಿಆರ್‌ಪಿಎಫ್‌ ಪ್ರತಿಕಾರದ ಸಂಕಲ್ಪ ತೊಟ್ಟಿದೆ. ಈ ಮಧ್ಯೆ ಪ್ರಧಾನಿ ಮೋದಿ ಅವರೂ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ್ದು, ಸೇಡು ತೀರಿಸಿಕೊಳ್ಳಲು ಸೇನೆಗೆ ಮುಕ್ತ ಸ್ವಾತಂತ್ರ್ಯ ನೀಡಿರುವುದಾಗಿ ಘೋಷಿಸಿದ್ದಾರೆ. 
 

Trending News