ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿರುವ ಸರ್ಜಿಕಲ್ ಸ್ಟ್ರೈಕ್ ಸಾಧನೆಯನ್ನು ತೀವ್ರವಾಗಿ ಟೀಕಿಸಿರುವ ಕಾಂಗ್ರೆಸ್, ಯುಪಿಎ ಸರ್ಕಾರದ ಅವಧಿಯಲ್ಲಿ 6 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು ಎಂದು ಹೇಳಿದೆ.
ಇಂದಿಲ್ಲಿ ಸುದ್ದಿಗೋಷ್ಠಿ ನಡೆಸಿ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆಸಲಾಗಿದ್ದ 6 ಸರ್ಜಿಕಲ್ ಸ್ಟ್ರೈಕ್ ಗಳ ಬಗ್ಗೆ ಮಾಹಿತಿ ಬಿಡುಗಡೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ರಾಜೀವ್ ಶುಕ್ಲಾ, ಕೇವಲ ಬಿಜೆಪಿ ಮಾತ್ರ ದೇಶ ರಕ್ಷಣೆಗಾಗಿ ಸರ್ಜಿಕಲ್ ಸ್ಟ್ರೈಕ್ ಮಾಡಿಲ್ಲ, ಬದಲಾಗಿ ಯುಪಿಎ ಆಡಳಿತದ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು. ಹಾಗೆಯೇ ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿಯೂ ಎರಡು ಬಾರು ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು ಎಂದರು.
"ಯುಪಿಎ ಸರ್ಕಾರದ ಅವಧಿಯಲ್ಲಿ 6 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಆದರೆ ಕಾಂಗ್ರೆಸ್ ಎಂದಿಗೂ ಇದರ ಕ್ರೆಡಿಟ್ ತೆಗೆದುಕೊಳ್ಳಲು ಪ್ರಯತ್ನಿಸಿಲ್ಲ. ಆದರೆ ಕೇವಲ ಒಂದು ಸರ್ಜಿಕಲ್ ಸ್ಟ್ರೈಕ್ ನಡೆಸಿದವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಅಂದು ಡಾ.ಮನಮೋಹನ್ ಸಿಂಗ್ ಆಗಲೀ ಅಥವಾ ವಾಜಪೇಯಿ ಆಗಲೀ ಪತ್ರಿಕಾಗೋಷ್ಠಿ ಕರೆದು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಹೇಳಿರಲಿಲ್ಲ, ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿರಲಿಲ್ಲ" ಎಂದು ಶುಕ್ಲಾ ಹೇಳಿದರು.
1999 ರಿಂದ 2004 ರ ಅವಧಿಯಲ್ಲಿ ವಾಜಪೇಯಿ ಮತ್ತು 2004 ರಿಂದ 2014ರವರೆಗೆ ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದರು. ಯುಪಿಎ ಆಡಳಿತಾವಧಿಯಲ್ಲಿ ಜೂನ್ 19, 2008ರಲ್ಲಿ ಜಮ್ಮು-ಕಾಶ್ಮೀರದ ಪೂಂಚ್ ನ ಭಟ್ಟಲ್ ಸೆಕ್ಟರ್ ನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು. ಬಳಿಕ ಆಗಸ್ಟ್ 30, ಸೆಪ್ಟೆಂಬರ್ 1 ರ ಅವಧಿಯಲ್ಲಿ ಶರ್ದಾ ಸೆಕ್ಟರ್ನಲ್ಲಿ ಎರಡನೇ ಸರ್ಜಿಕಲ್ ಸ್ಟ್ರೈಕ್, ಜನವರಿ 6, 2013 ರಲ್ಲಿ ಪತ್ರಾ ಚೆಕ್ಪೋಸ್ಟ್ನ ಸವನ್ನಲ್ಲಿ ಮೂರನೇ ಬಾರಿಗೆ ಸರ್ಜಿಕಲ್ ಸ್ಟ್ರೈಕ್, ಜುಲೈ 27,28 2013ರಲ್ಲಿ ನಾಜಿಪುರ ಸೆಕ್ಟರ್ನಲ್ಲಿ ನಾಲ್ಕನೇ ದಾಳಿ, ಆಗಸ್ಟ್ 6, 2013ರಲ್ಲಿ ನೀಲಮ್ ಕಣಿವೆಯಲ್ಲಿ ಐದನೇ ಸರ್ಜಿಕಲ್ ಸ್ಟ್ರೈಕ್, ಜನವರಿ 14, 2014 ರಲ್ಲಿ ಆರನೇ ದಾಳಿ ನಡೆಸಲಾಗಿತ್ತು ಎಂದು ಶುಕ್ಲಾ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ವಾಜಪೇಯಿ ಅವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ನಡೆಸಿದ್ದ ಎರಡು ಸರ್ಜಿಕಲ್ ಸ್ಟ್ರೈಕ್ ಗಳ ಬಗ್ಗೆಯೂ ಮಾಹಿತಿ ನೀಡಿದ ಶುಕ್ಲಾ, ಜನವರಿ 21, 2000 ಇಸವಿಯಲ್ಲಿ ನೀಲಮ್ ನದಿಯ ನದಲಾ ಎನ್ಕ್ಲೇವ್ನಲ್ಲಿ ಹಾಗೂ ಸೆಪ್ಟೆಂಬರ್ 18, 2003ರಲ್ಲಿ ಪೂಂಚ್ನ ಬರೋಹ್ ಸೆಕ್ಟರ್ನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು ಎಂದು ತಿಳಿಸಿದರು.
2016 ಸೆಪ್ಟೆಂಬರ್ನಲ್ಲಿ ಮೋದಿ ಸರ್ಕಾರ ಉರಿ ದಾಳಿಯ ಪ್ರತೀಕಾರವಾಗಿ ಪಾಕಿಸ್ತಾನ ಅಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಬಳಿಕ ಫೆಬ್ರವರಿ 26ರಂದು ಜೈಶ್-ಎ-ಮೊಹಮ್ಮದ್ ಸಂಘಟನೆಯ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ವಾಯುದಾಳಿ ನಡೆಸಿದ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಈ ವಿಚಾರವಾಗಿ ತೀವ್ರ ವಾಗ್ದಾಳಿ ನಡೆಸಿದ್ದವು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದ್ದರು. ಇದೀಗ ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವು ಯುಪಿಎ ಸರ್ಕಾರದ ಅವಧಿಯಲ್ಲಿ ಹಲವು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದೆ.