ಚಾಣಕ್ಯ ವಿಶ್ವವಿದ್ಯಾಲಯ ಹೆಸರಿನಲ್ಲಿ ಆರ್‌ಎಸ್‌ಎಸ್‌ಗೆ ಭೂಮಿ: ಸಿದ್ದರಾಮಯ್ಯ ಆಕ್ರೋಶ

ಕಳೆದ ಏಪ್ರಿಲ್ ತಿಂಗಳಲ್ಲಿ ಇಡೀ ರಾಜ್ಯ ಕೊರೊನಾ ರೋಗದಿಂದ ತತ್ತರಿಸುತ್ತಿದ್ದಾಗ ರಾಜ್ಯ ಸರ್ಕಾರದ ಸಚಿವ ಸಂಪುಟದ ಸಭೆಯಲ್ಲಿ ಚಾಣಕ್ಯ ವಿವಿಗೆ ಜಮೀನು ನೀಡುವ ಬಗ್ಗೆ ನಿರ್ಣಯ ಕೈಗೊಂಡಿದೆಯೆಂದರೆ ಈ ಭೂ ಹಗರಣದ ಹಿಂದಿನ ಕಾಣದ ಕೈಗಳ ಪ್ರಭಾವವನ್ನು ಕಾಣಲು ಸಾಧ್ಯವಿದೆ.

Written by - Puttaraj K Alur | Last Updated : Sep 22, 2021, 05:49 PM IST
  • ಬಿಎಸ್ ವೈ ತಮ್ಮ ಕುರ್ಚಿ ಉಳಿಸಿಕೊಳ್ಳಲು RSS ನಾಯಕರ ಓಲೈಕೆಗೆ ಚಾಣಕ್ಯ ವಿವಿಗೆ ಜುಜುಬಿ ದರದಲ್ಲಿ ಜಮೀನು ನೀಡಿದ್ದರು
  • ರಾಜ್ಯ ಸರ್ಕಾರ ಕೂಡಲೇ ಚಾಣಕ್ಯ ವಿವಿಗೆ ಜಮೀನು ನೀಡುವ ನಿರ್ಣಯವನ್ನು ರದ್ದುಪಡಿಸಬೇಕು
  • ಬಿಜೆಪಿ ಸರ್ಕಾರವು ಚಾಣಕ್ಯನ ಹೆಸರಿನಲ್ಲಿ ದೊಡ್ಡ ಹಗರಣ ನೆಡಸುತ್ತಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ
ಚಾಣಕ್ಯ ವಿಶ್ವವಿದ್ಯಾಲಯ ಹೆಸರಿನಲ್ಲಿ ಆರ್‌ಎಸ್‌ಎಸ್‌ಗೆ ಭೂಮಿ: ಸಿದ್ದರಾಮಯ್ಯ ಆಕ್ರೋಶ title=
ಬಿಜೆಪಿ ಸರ್ಕಾರ ಜನದ್ರೋಹ ಎಸಗಿದೆ ಎಂದ ಸಿದ್ದರಾಮಯ್ಯ (Photo Courtesy: @Zee News)

ಬೆಂಗಳೂರು: ಆರ್​ಎಸ್​ಎಸ್(RSS) ನಾಯಕರನ್ನೊಳಗೊಂಡ ಶಿಕ್ಷಣ ಸಂಸ್ಥೆಯೊಂದು ಸ್ಥಾಪಿಸಲು ಹೊರಟಿರುವ ಹೊಸ ವಿಶ್ವವಿದ್ಯಾಲಯಕ್ಕೆ ಸರ್ಕಾರಿ ಜಮೀನನ್ನು ಜುಜುಬಿ ಬೆಲೆಗೆ ನೀಡಿರುವ ರಾಜ್ಯದ ಬಿಜೆಪಿ ಸರ್ಕಾರ ನೆಲದ ಕಾನೂನನ್ನು ಗಾಳಿಗೆ ತೂರಿ ಜನದ್ರೋಹ ಎಸಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಕಳ್ಳನ ಮನಸ್ಸು ಹುಳ್ಳ.. ಹುಳ್ಳಗೆ ಎನ್ನುವುದಕ್ಕೆ ರಾಜ್ಯ ಸರ್ಕಾರ ಈ ತಿಂಗಳ 21ರ ವಿಧಾನಸಭಾ ಅಧಿವೇಶನದಲ್ಲಿ ಆತುರಾತುರವಾಗಿ ಚಾಣಕ್ಯ ವಿಶ್ವವಿದ್ಯಾಲಯ ಮಸೂದೆ(Chanakya University Bill 2021)ಯನ್ನು ಮಂಡಿಸಿ ಚರ್ಚೆಗೂ ಅವಕಾಶ ನೀಡದೆ ಧ್ವನಿಮತದ ಮೂಲಕ ಅಂಗೀಕರಿಸಿರುವುದೇ ಸಾಕ್ಷಿಯಾಗಿದೆ’ ಎಂದಿದ್ದಾರೆ.

‘ಚಾಣಕ್ಯ ವಿವಿ(Chanakya University)ಗೆ ದೇವನಹಳ್ಳಿಯ ಹರಳೂರು ಬಳಿ 116.16 ಎಕರೆ ಜಮೀನನ್ನು ಕೇವಲ 50 ಕೋಟಿ ರೂ.ಗೆ ನೀಡಲಾಗಿದೆ. ಅದೇ ಪ್ರದೇಶದಲ್ಲಿ ಕೆಐಎಡಿಬಿ ಪ್ರತಿ ಎಕರೆ ಜಮೀನನ್ನು 1.5 ಕೋಟಿ ರೂ. ನೀಡಿ ಭೂಸ್ವಾಧೀನ ಮಾಡಿಕೊಂಡಿದೆ. ಕೆಐಎಡಿಬಿಯ ನಿಯಮಾವಳಿಯ ಪ್ರಕಾರವೇ ಚಾಣಕ್ಯ ವಿವಿಗೆ ನೀಡಿರುವ ಜಮೀನಿನ ಭೂ ಸ್ವಾಧೀನ ವೆಚ್ಚವೇ ಸುಮಾರು 175 ಕೋಟಿ ರೂ. ಆಗುತ್ತದೆ. ಈ ಲೆಕ್ಕದ ಪ್ರಕಾರ ಚಾಣಕ್ಯ ವಿವಿಗೆ ನೀಡಿರುವ ಜಮೀನಿನ ಬೆಲೆ 300ರಿಂದ 400 ಕೋಟಿ ರೂ.ಗಳಾಷ್ಟಗುತ್ತದೆ’ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ 80 ದೇವಾಲಯ ಕೆಡವಿದ್ದರು: ಕಾಂಗ್ರೆಸ್ ಆರೋಪ

‘ಸಾಮಾನ್ಯವಾಗಿ ಕೆಐಎಡಿಬಿ ಭೂ ಸ್ವಾಧೀನ ವೆಚ್ಚದ ಐದರಿಂದ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಹಂಚಿಕೆ ಮಾಡಲಾಗುತ್ತದೆ. ಬೊಕ್ಕಸಕ್ಕೆ ಇಷ್ಟೊಂದು ನಷ್ಟ ಮಾಡಿಕೊಂಡು ಜುಜುಬಿ ಬೆಲೆಗೆ ಹೆಸರೇ ಕೇಳದೆ ಇದ್ದ ಸಂಸ್ಥೆಗೆ ಜಮೀನು ನೀಡುವ ಅಗತ್ಯವೇನಿತ್ತು? ಈ ಚಾಣಕ್ಯ ವಿವಿ ಸ್ಥಾಪಿಸಲು ಉದ್ದೇಶಿಸಿರುವುದು ಸೆಸ್ (ಸೆಂಟರ್ ಫಾರ್ ಎಜುಕೇಶನ್ ಎಂಡ್ ಸೋಷಿಯಲ್ ಸ್ಟಡೀಸ್) ಎಂಬ ಸಂಸ್ಥೆ. ಹೊಸದಾಗಿ ಹುಟ್ಟಿಕೊಡಿರುವ ಸಂಸ್ಥೆಗೆ ಇಲ್ಲಿಯವರೆಗೆ ಬೇರೆ ಶಾಲೆ, ಕಾಲೇಜು ಯಾವುದನ್ನೂ ನಡೆಸಿಲ್ಲ. ಹೀಗಿರುವಾಗ ಯಾವ ಅರ್ಹತೆ ಮೇಲೆ ರಿಯಾಯಿತಿ ಬೆಲೆಯಲ್ಲಿ ಜಮೀನು ನೀಡಲಾಗಿದೆ’ ಎಂದು ಸಿದ್ದರಾಮಯ್ಯ(Siddaramaiah) ಪ್ರಶ್ನಿಸಿದ್ದಾರೆ.

‘ಕಳೆದ ಏಪ್ರಿಲ್ ತಿಂಗಳಲ್ಲಿ ಇಡೀ ರಾಜ್ಯ ಕೊರೊನಾ ರೋಗದಿಂದ ತತ್ತರಿಸುತ್ತಿದ್ದಾಗ ರಾಜ್ಯ ಸರ್ಕಾರದ ಸಚಿವ ಸಂಪುಟದ ಸಭೆಯಲ್ಲಿ ಚಾಣಕ್ಯ ವಿವಿಗೆ ಜಮೀನು ನೀಡುವ ಬಗ್ಗೆ ನಿರ್ಣಯ ಕೈಗೊಂಡಿದೆಯೆಂದರೆ ಈ ಭೂ ಹಗರಣದ ಹಿಂದಿನ ಕಾಣದ ಕೈಗಳ ಪ್ರಭಾವವನ್ನು ಕಾಣಲು ಸಾಧ್ಯವಿದೆ. ಚಾಣಕ್ಯ ವಿವಿಗೆ ನೀಡಿರುವ ಜಮೀನು ಏರೋಸ್ಪೇಸ್ ಹಾಗೂ ರಕ್ಷಣಾ ಸಾಮಗ್ರಿಗಳ ಕಾರ್ಖಾನೆ ಸ್ಥಾಪನೆಯ ಉದ್ದೇಶಕ್ಕಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ರೈತರಿಂದ ಈ ಭೂಮಿ ಪಡೆಯುವಾಗ ಎಕರೆಗೆ 1.5 ಕೋಟಿ ರೂ.ನಂತೆ ಒಟ್ಟು 116 ಎಕರೆಗೆ 174 ಕೋಟಿ ರೂ. ಪರಿಹಾರ ನೀಡಲಾಗಿದೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಆತ್ಮಸಾಕ್ಷಿಯೇ ಸತ್ತು ಹೋಗಿರುವ ಕಾಂಗ್ರೆಸ್ ಪಕ್ಷದಲ್ಲಿ ಸತ್ಯಕ್ಕೆ ಬೆಲೆಯಿದೆಯೇ: ಬಿಜೆಪಿ ಪ್ರಶ್ನೆ

‘ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಮ್ಮ ಕುರ್ಚಿ ಉಳಿಸಿಕೊಳ್ಳಲು  RSS ನಾಯಕರನ್ನು ಓಲೈಸಲು ಚಾಣಕ್ಯ ವಿವಿಗೆ ಜುಜುಬಿ ದರದಲ್ಲಿ ಜಮೀನು ನೀಡಿದ್ದರು. ಈಗಿನ ಸಿಎಂ ಬೊಮ್ಮಾಯಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಆ ಜಮೀನು ಮಂಜೂರಾತಿಯನ್ನು ಅನುಮೋದಿಸಿ ವಿವಿ ಸ್ಥಾಪನೆಗೆ ಅಂಗೀಕಾರ ನೀಡಿದ್ದಾರೆ. ಇದು ಮನುವಾದಿಗಳ ವಿವಿ, ಚಾಣಕ್ಯ ಕೂಡ ಮನುವಾದಿ ಕುಟುಂಬಕ್ಕೆ ಸೇರಿದವರು. ಶಿಕ್ಷಣ ಮತ್ತು ಸಂಸ್ಕೃತಿಯ ಹೆಸರಲ್ಲಿ RSSನ ಗುಪ್ತ ಅಜೆಂಡಾವನ್ನು ಜನಪ್ರಿಯಗೊಳಿಸುವ ಹುನ್ನಾರ ಈ ವಿವಿ ಸ್ಥಾಪನೆಯ ದುರುದ್ದೇಶವಾಗಿದೆ’ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News