ನವದೆಹಲಿ: ಲೋಕಸಭೆ ಚುನಾವಣೆಗೆ ಇತ್ತೀಚೆಗಷ್ಟೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಬುಧವಾರ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಎರಡನೇ ಪಟ್ಟಿಯಲ್ಲಿ ಉತ್ತರಪ್ರದೇಶದ 16 ಕ್ಷೇತ್ರಗಳಿಗೆ ಹಾಗೂ ಮಹಾರಾಷ್ಟ್ರದ 5 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಮುಖ್ಯವಾಗಿ ಮೊರಾದಾಬಾದ್ ಕ್ಷೇತ್ರದಿಂದ ಉತ್ತರಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜ್ ಬಬ್ಬರ್, ಕಾನ್ಪುರದಿಂದ ಮಾಜಿ ಕೇಂದ್ರ ಸಚಿವ ಶ್ರೀಪ್ರಕಾಶ್ ಜೈಸ್ವಾಲ್, ಸೋಲಾಪುರದಿಂದ ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮತ್ತು ಮುಂಬೈ ಉತ್ತರ-ಕೇಂದ್ರದಿಂದ ಬಾಲಿವುಡ್ ನಟ ಸಂಜಯ್ ದತ್ ಸಹೋದರಿ ಪ್ರಿಯಾ ದತ್ ಗೆ ಅವರ ಹೆಸರು ಪಟ್ಟಿಯಲ್ಲಿದೆ.
ಉಳಿದಂತೆ ನಾಗ್ಪುರದಿಂದ ಕಿಸಾನ್ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೇಲ್, ಮುಂಬೈ ದಕ್ಷಿಣದಿಂದ ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ, ಸುಲ್ತಾನಪುರದಿಂದ ಸಂಜಯ್ ಸಿಂಗ್ ಮತ್ತು ಉತ್ತರ ಪ್ರದೇಶದ ಭರಿಯಾಚ್ ಕ್ಷೇತ್ರದಿಂದ ಬಿಜೆಪಿಯಿಂದ ಕಾಂಗ್ರೆಸ್ಗೆ ಪಕ್ಷಾಂತರಗೊಂಡಿರುವ ಸಾವಿತ್ರಿ ಬಾಯಿ ಪುಲೆ ಸ್ಪರ್ಧಿಸಲಿದ್ದಾರೆ. ಉತ್ತರ ಪ್ರದೇಶ ಪೂರ್ವ ವಿಭಾಗದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಆಪ್ತ ವಲಯದಲ್ಲಿರುವ ಲಲಿತೇಶ್ ಪಾಟಿ ತ್ರಿಪಾಠಿಗೆ ಮಿರ್ಜಾಪುರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ.
Congress Central Election Committee announces the second list of candidates for the ensuing elections to the Lok Sabha. pic.twitter.com/apUjzhWyjq
— Congress (@INCIndia) March 13, 2019
ಕಾಂಗ್ರೆಸ್ ಮಾರ್ಚ್ 7ರಂದು ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ 15 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು. ಇದರಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಯ್ ಬರೇಲಿ ಕ್ಷೇತ್ರದಿಂದ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಲಾಗಿದೆ.