ಅಹ್ಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರಾಜ್ಯವಾದ ಗುಜರಾತ್ನಲ್ಲಿ ಮಂಗಳವಾರ ಕಾರ್ಯಕಾರಿಣಿ ಸಭೆ ಆಯೋಜಿಸಿದ್ದು, ರ್ಯಾಲಿಯನ್ನು ಹಮ್ಮಿಕೊಂಡಿದೆ. ಈ ಮೂಲಕ ಮೋದಿ ನಾಡಲ್ಲೇ ಇಂದು ಚುನಾವಣೆಗೆ ರಣಕಹಳೆ ಊದಲಿದೆ.
ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡ ಬಳಿಕ ಗುಜರಾತ್ನ ಗಾಂಧಿನಗರದ ಸಮೀಪ ಅದಾಲಜ್ ನ ತ್ರಿಮಂದಿರ್ ನಲ್ಲಿ ಹಮ್ಮಿಕೊಂಡಿರುವ "ಜೈ ಜವಾನ್, ಜೈ ಕಿಸಾನ್" ಜನಸಂಕಲ್ಪ ಸಮಾವೆಶದಲ್ಲಿಯೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಭಾಗಿಯಾಗಲಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೊದಲ ಬಾರಿಗೆ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
Gujarat: Congress President Rahul Gandhi, General Secretary UP-East Priyanka Gandhi Vadra and Sonia Gandhi arrive at Ahmedabad for Congress Working Committee (CWC) meeting. pic.twitter.com/Fgew4zDJYN
— ANI (@ANI) March 12, 2019
ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿ ಎರಡು ದಿನಗಳ ಬಳಿಕ ಸಿಡಬ್ಲ್ಯುಸಿ ಸಭೆ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಈ ಸಭೆಯಲ್ಲಿ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಸಭೆಯಲ್ಲಿ ಚುನಾವಣಾ ರಣತಂತ್ರ, ವಿವಿಧ ರಾಜ್ಯಗಳಲ್ಲಿ ಮೈತ್ರಿಯ ಧನಾತ್ಮಕ-ಋಣಾತ್ಮಕ ಪರಿಣಾಮ, ಪ್ರಚಾರ ತಂತ್ರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಿದ್ದಾರೆ.
58 ವರ್ಷಗಳ ನಂತರ ಗುಜರಾತ್ನಲ್ಲಿ ಈ ಸಭೆಯನ್ನು ನಡೆಸಲಾಗುತ್ತಿದೆ. 1961 ರಲ್ಲಿ ಭಾವನಗರದಲ್ಲಿ ಕೊನೆಯ ಕಾರ್ಯಕಾರಿಣಿ ಸಭೆ ನಡೆದಿತ್ತು. ಮಹಾತ್ಮ ಗಾಂಧಿಯವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೊಸ ಅಧ್ಯಾಯ ಆರಂಭಿಸಿದ 'ದಂಡಿ ಉಪ್ಪಿನ ಸತ್ಯಾಗ್ರಹ' ಮಾರ್ಚ್ 12, 1930ರಂದು ಆರಂಭಿಸಿದ್ದರು. ಅದರ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾವು ಕಾಂಗ್ರೆಸ್ ಕಾರ್ಯಕಾರಿಣಿ ನಡೆಸುತ್ತಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಸತಾವ್ ಹೇಳಿದ್ದಾರೆ.
ಮೊದಲ ಬಾರಿಗೆ "ರಾಹುಲ್, ಸೋನಿಯಾ, ಪ್ರಿಯಾಂಕಾ ಮತ್ತು ಮನಮೋಹನ್ ಸಿಂಗ್ ಸೇರಿದಂತೆ ಹಲವು ಘಟಾನುಘಟಿ ನಾಯಕರು ಒಂದೇ ವೇದಿಕೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ" ಎಂದು ಸತಾವ್ ತಿಳಿಸಿದರು.
ಕಾರ್ಯಕಾರಿಣಿ ಸಭೆಯು ಅತ್ಯಂತ ಮಹತ್ವದ್ದಾಗಿದ್ದು, ಸಬರಮತಿ ಆಶ್ರಮದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಕಾಂಗ್ರೆಸ್ ನಾಯಕರು ನಮನ ಸಲ್ಲಿಸುವ ಮೂಲಕ ಗುಜರಾತ್ ಭೇಟಿ ಆರಂಭವಾಗಲಿದೆ.ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆ ಹಾಗೂ ಪ್ರಚಾರದ ಕುರಿತಂತೆ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.