ಇಂದೋರ್ : ಸ್ವಯಂಘೋಷಿತ ದೇವ ಮಾನವ, ಧಾರ್ಮಿಕ ಗುರು ಭಯ್ಯೂಜಿ ಮಹಾರಾಜ್ ತಲೆಗೆ ಗುಂಡು ಹಾರಿಸಿಕೊಂಡು ಮಂಗಳವಾರ ಮಧ್ಯಾಹ್ನ 2.50ರ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಡಲೇ ಅವರನ್ನು ಬಾಂಬೆ ಆಸ್ಪತ್ರೆಗೆ ದಾಖಲಾಯಿಸಲಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
50 ವರ್ಷ ವಯಸ್ಸಿನ ಭಯ್ಯೂಜಿ ಮಹಾರಾಜ್ ಅವರು ಸಿಲ್ವರ್ ಸ್ಪ್ರಿಂಗ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ, ಸ್ಥಳದಲ್ಲಿ ಅವರು ಬರೆದಿರುವ ಡೆತ್ ನೋಟ್ ಸಹ ದೊರೆತಿದ್ದು, ತಮ್ಮ ಕುಟುಂಬದ ಜವಾಬ್ದಾರಿಯನ್ನು ಯಾರಾದರೂ ನೋಡಿಕೊಳ್ಳಿ. ನಾನು ಸಾಕಷ್ಟು ನೊಂದಿದ್ದೇನೆ. ಹಾಗಾಗಿ ಹೋಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ" ಎಂದು ಪೋಲಿಸ್ ಅಧಿಕಾರಿ ಜಯಂತ್ ರಾಥೋರ್ ಮಾಹಿತಿ ನೀಡಿದ್ದಾರೆ.
ಬಾಲಿವುಡ್'ನಲ್ಲಿ ಮಾಡೆಲ್ ಆಗಿದ್ದ ಉದಯ್ ಸಿಂಗ್ ದೇಶ್ಮುಖ್, ನಂತರದ ದಿನಗಳಲ್ಲಿ ಆಧ್ಯಾತ್ಮಕ್ಕೆ ತೆರಳಿ, ದೇವಮಾನವ ಎಂದು ಸ್ವಯಂ ಘೋಷಿಸಿಕೊಂಡಿದ್ದರು. ಅಲ್ಲದೆ, ಸಾಕಷ್ಟು ರಾಜಕಾರಣಿಗಳಿಗೆ ಸಲಹೆಗಾರರಾಗಿಯೂ ಇದ್ದರು. ಹಾಗಾಗಿ ರಾಜಕೀಯ ಮತ್ತು ಕೌಟುಂಬಿಕ ಒತ್ತಡಗಳಿಂದ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಈ ಹಿಂದೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭಯ್ಯೂಜಿ ಮಹಾರಾಜ್ ಅವರಿಗೆ ರಾಜ್ಯ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು. ಆದರೆ ಅದನ್ನು ಮಹಾರಾಜ್ ನಿರಾಕರಿಸಿದ್ದರು. ಆದರೆ 2016ರಲ್ಲಿ ಅವರು ಸಾರ್ವಜನಿಕ ಜೀವನದಿಂದ ನಿವೃತ್ತಿ ಹೊಂದುತ್ತಿರುವುದಾಗಿ ಘೋಷಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.
ಸಿಬಿಐ ತನಿಖೆಗೆ ಮಧ್ಯಪ್ರದೇಶ ತನಿಖೆಗೆ ಕಾಂಗ್ರೆಸ್ ಆಗ್ರಹ
ಧಾರ್ಮಿಕ ಗುರು ಭಯ್ಯೂಜಿ ಮಹಾರಾಜ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿರುವ ಮಧ್ಯಪ್ರದೇಶ್ ಕಾಂಗ್ರೆಸ್ ಘಟಕ, ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದೆ.