ಲಕ್ನೋ: ದೇಶದಲ್ಲಿ ಬುಲೆಟ್ ರೈಲಿನ ಸಂಚಾರಕ್ಕೆ ಆದ್ಯತೆ ನೀಡುವುದಕ್ಕಿಂತ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ಒದಗಿಸುವ ಅಗತ್ಯವಿದೆ ಎಂದು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಲಕ್ನೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬುಲೆಟ್ ರೈಲು ಯೋಜನೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಇಂದು ದೇಶದಲ್ಲಿ ಬುಲೆಟ್ ರೈಲಿನ ಅಗತ್ಯಕ್ಕಿಂತ ದೇಶ ಕಾಯುವ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ಒದಗಿಸುವುದು ಬಹಳ ಮುಖ್ಯ" ಎಂದಿದ್ದಾರೆ.
ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಕಳೆದ ಗುರುವಾರ ಭಯೋತ್ಪಾದಕರು ನಡೆಸಿದ ಭೀಕರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40ಕ್ಕೂ ಅಧಿಕ ಯೋಧರು ಹುತಾತ್ಮರಾದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಖಿಲೇಶ್, ದೇಶದ ಗಡಿಭಾಗದಲ್ಲಿ ದಿರ್ಘಕಾಲಕ್ಕೆ ಒಪ್ಪುವಂತಹ ರಕ್ಷಣಾ ತಂತ್ರಗಳನ್ನು ಕೇಂದ್ರ ಸರ್ಕಾರ ರೂಪಿಸಬೇಕಿದೆ ಎಂದರು.
"ನಮ್ಮ ದೇಶದ ಗುಪ್ತಚರ ದಳ ಏಕೆ ವಿಫಲವಾಗಿದೆ? ಈಗಾಗಲೇ ಹುತಾತ್ಮರಾದ ಯೋಧರ ಜೀವನವನ್ನು ನೀವು ಮತ್ತೆ ಹಿಂತಿರುಗಿಸಲು ಸಾಧ್ಯವಿಲ್ಲ. ಇಡೀ ರಾಷ್ಟ್ರ ಯೋಧರು ಮತ್ತು ರಕ್ಷಣಾ ಪಡೆಗಲಿಂದಾಗಿ ನಿಂತಿದೆ. ಒಂದು ವೇಳೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ, ಆಡಳಿತ ಪಕ್ಷ ನಮ್ಮ ದೇಶದ ಗಡಿಯನ್ನು ರಕ್ಷಿಸಲು ಸುದೀರ್ಘಾವಧಿಯ ಕಾರ್ಯತಂತ್ರವನ್ನು ರೂಪಿಸಸುವಂತೆ ಮಾಡಬೇಕು"ಎಂದು ಅಖಿಲೇಶ್ ಹೇಳಿದರು.