ನವ ದೆಹಲಿ: ಓಖಿ ಚಂಡಮಾರುತ ತಮಿಳುನಾಡು ಹಾಗೂ ಕೇರಳ ಕರಾವಳಿಗೆ ಅಪ್ಪಳಿಸಿ 15 ದಿನ ಕಳೆದಿದ್ದರೂ ಎರಡೂ ರಾಜ್ಯಗಳ 600ಕ್ಕೂ ಹೆಚ್ಚು ಮೀನುಗಾರರು ಇನ್ನೂ ಪತ್ತೆಯಾಗಿಲ್ಲ ಎಂದು ಗುರುವಾರ ಗೃಹ ಸಚಿವಾಲಯ ತಿಳಿಸಿದೆ.
ತಮಿಳುನಾಡಿನ 433 ಮೀನುಗಾರರು ಹಾಗೂ ಕೇರಳದ 186 ಮೀನುಗಾರರು ಇನ್ನೂ ನಾಪತ್ತೆಯಾಗಿದ್ದು, ಅವರ ಪತ್ತೆಯಾಗಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ, ಡಿಸೆಂಬರ್ 2ರಂದು ಓಖಿ ಚಂಡಮಾರುತ ಅಪ್ಪಳಿಸಿದ ನಂತರ ನಾಪತ್ತೆಯಾಗಿರುವವರ ಅಧಿಕೃತ ಸಂಖ್ಯೆಯನ್ನು ಎರಡೂ ರಾಜ್ಯಗಳು ಇನ್ನೂ ನೀಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಪ್ರತಿ ಮನೆಗೂ ತೆರಳಿ ಪರಿಶೀಲಿಸಲಾಗುತ್ತಿದ್ದು, ಪರಿಶೀಲನೆ ಕಾರ್ಯ ಮುಗಿದ ನಂತರ ಎಷ್ಟು ಮೀನುಗಾರರು ನಾಪತ್ತೆಯಾಗಿದ್ದಾರೆ ಎಂಬುದರ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಓಖಿ ಚಂಡಮಾರುತದ ಸುಳಿಗೆ ಸಿಲುಕಿದ ನೂರಾರು ಮೀನುಗಾರರು ಸಮುದ್ರದ ನಡುವೆಯೇ ದಿನ ಕಳೆಯುತ್ತಿದ್ದು, ಹಲವರನ್ನು ರಕ್ಷಿಸಲಾಗಿದ್ದು, ಇನ್ನೂ ರಕ್ಷಣಾ ಕಾರ್ಯ ಮುಂದುವರೆದಿದೆ. ಇದುವರೆಗೂ ಕೇರಳದ 63 ಮೀನುಗಾರರು, ತಮಿಳುನಾಡಿನ 14 ಮೀನುಗಾರರು ಚಂಡಮಾರುತದಿಂದಾಗಿ ಮೃತಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ, ಕನ್ಯಾಕುಮಾರಿಯನ್ನು ಸಂಪೂರ್ಣವಾಗಿ ಹಾನಿಗೊಳಿಸಿದ ಚಂಡಮಾರುತವನ್ನು ನೈಸರ್ಗಿಕ ವಿಕೋಪ ಎಂದು ಪರಿಗಣಿಸಿ ಪರಿಹಾರ ಮತ್ತು ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಡಿಎಂಕೆ ಪಕ್ಷ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಒತ್ತಾಯಿಸಿದೆ.