ಹೈದರಾಬಾದ್: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿರುವುದರಿಂದ ಪೆಥಾಯ್ ಚಂಡಮಾರುತ ಮುನ್ಸೂಚನೆ ಬೆನ್ನಲ್ಲೇ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜೆಲ್ಲೆಯಲ್ಲಿ ಚಂಡಮಾರುತ ತನ್ನ ರೌದ್ರತೆ ಮೆರೆದಿದೆ.
ಸೋಮವಾರ ಮಧ್ಯಾಹ್ನ 12.25ಕ್ಕೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಕಟ್ರೆನಿಕೋನಾ ಪ್ರದೇಶಕ್ಕೆ ಚಂಡಮಾರುತ ಬೀಸಿದ್ದು, ಭಾರೀ ಮಳೆಯಾಗುತ್ತಿದೆ. ಹಲವೆಡೆ ಭೂ ಕುಸಿತ ಉಂಟಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ವಿಶಾಖಪಟ್ಟಣ ಜಿಲ್ಲೆಯ ನರಸೀಪಟ್ಟಣಂನಲ್ಲಿ ಗಾಳಿಯ ರಭಸಕ್ಕೆ ಮನೆ, ವಾಹನಗಳ ಮೇಲೆ ಮರಗಳು ಉರುಳಿವೆ. ಸಮುದ್ರದ ತೀರದಲ್ಲಿ ವಾಸಿಸುತ್ತಿರುವವರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಪೆಥಾಯ್ ಚಂಡಮಾರುತದಿಂದ ಮುಂದೆ ಎದುರಾಗಲಿರುವ ಭೀಕರ ಸಂದರ್ಭವನ್ನು ಎದುರಿಸಲು ಸಾವಿರಾರು ರಕ್ಷಣಾ ಸಿಬ್ಬಂದಿ ಹೆಚ್ಚಿನ ಆಸ್ತಿ, ಜೀವ ಹಾನಿಯಾಗದಂತೆ ತಡೆಯಲು ಕಾರ್ಯೋನ್ಮುಖರಾಗಿದ್ದಾರೆ.
Andhra Pradesh: Trees were uprooted in Visakhapatnam district's Narsipatnam after strong winds and rainfall hit the region. Roads are being cleared by the local administration. #CyclonePhethai pic.twitter.com/PRssp7R1Rr
— ANI (@ANI) December 17, 2018
ಕರಾವಳಿ ಭಾಗದಲ್ಲಿರುವ ಕಾಕಿನಾಡು, ಮಚಲೀಪಟ್ಟಣಂ ನಡುವೆ ಪೆಥಾಯ್ ಚಂಡಮಾರುತ ಹಾದುಹೋಗಿದೆ. ಇಲ್ಲಿನ 300 ಹಳ್ಳಿಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಒಂದು ಸಾವಿರ ಪೊಲೀಸರು ಸೇರಿದಂತೆ ಸುಮಾರು 10 ಸಾವಿರ ರಕ್ಷಣಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ
ಶಾಲಾ-ಕಾಲೇಜುಗಳಿಗೆ ರಜೆ : ಆಂಧ್ರಪ್ರದೇಶದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಾಜ್ಯದೆಲ್ಲೆಡೆ ನಿಗಾ ವಹಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಕರಾವಳಿ ಭಾಗಗಳಲ್ಲಿರುವ ಶಾಲಾ-ಕಾಲೇಜುಗಳಿಗೆ ರಜಾ ಘೋಷಿಸಲಾಗಿದೆ. ಇದುವರೆಗೂ 23ಕ್ಕೂ ಅಧಿಕ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಜಿಲ್ಲಾಧಿಕಾರಿಗಳಿಗೆ ಕರಾವಳಿ ಭಾಗಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಆಂಧ್ರ ಪ್ರದೇಶದ ಒಟ್ಟು ಒಂಬತ್ತು ಕರಾವಳಿ ಜಿಲ್ಲೆಗಳ ಪೈಕಿ ಏಳು ಜಿಲ್ಲೆಗಳಲ್ಲಿ ಸೋಮವಾರ ಮತ್ತು ಮಂಗಳವಾರ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಆಂಧ್ರದ ಕಾಕಿನಾಡ ಕಡೆ ಗಂಟೆಗೆ 70ರಿಂದ 80 ಕಿ.ಮೀ.ವೇಗದಲ್ಲಿ ಪೆಥಾಯ್ ಚಂಡಮಾರುತ ಬೀಸುತ್ತಿದ್ದು, ಈ ವೇಗ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.