ಡ್ಯಾನ್ಸ್ ರಿಯಾಲಿಟಿ ಶೋ ಸ್ಪರ್ಧಿ ಮೇಲೆ ಆಸಿಡ್ ಅಟ್ಯಾಕ್!

ಅಮೆರಿಕಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುವ ಮುನ್ನ ನಡೆದ ಆಸಿಡ್ ದಾಳಿಯಿಂದಾಗಿ ಆಕೆಯ ಕಣ್ಣಿನ ದೃಷ್ಟಿ ಮಂಜಾಗಿದೆ.

Updated: Sep 19, 2018 , 04:37 PM IST
ಡ್ಯಾನ್ಸ್ ರಿಯಾಲಿಟಿ ಶೋ ಸ್ಪರ್ಧಿ ಮೇಲೆ ಆಸಿಡ್ ಅಟ್ಯಾಕ್!

ಭೋಪಾಲ್: ಡ್ಯಾನ್ಸ್ ರಿಯಾಲಿಟಿ ಶೋನ 21 ವರ್ಷದ ಸ್ಪರ್ಧಿ ರೂಪಾಲಿ ನಿರಾಪುರೆ ಮೇಲೆ ಹಾಡಹಗಲೇ ಆಸಿಡ್ ದಾಳಿ ನಡೆದಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂಧೋರ್'ನಲ್ಲಿ ಮಂಗಳವಾರ ನಡೆದಿದೆ. 

ಅಮೆರಿಕಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುವ ಮುನ್ನ ನಡೆದ ಆಸಿಡ್ ದಾಳಿಯಿಂದಾಗಿ ಆಕೆಯ ಕಣ್ಣಿನ ದೃಷ್ಟಿ ಮಂಜಾಗಿದೆ. ಈ ಸಂಬಂಧ ಆರೋಪಿ ಮಹೇಂದ್ರ ಅಲಿಯಾಸ್ ಸೋನು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮಹೇಂದ್ರ, ರೂಪಾಳಿ ನೃತ್ಯ ಕಲಿಯುತ್ತಿದ್ದ ಶಾಲೆಯಲ್ಲಿಯೇ ನೃತ್ಯಾಭ್ಯಾಸ ಮಾಡುತ್ತಿದ್ದ. ಅಲ್ಲದೆ, ಆಕೆಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದ್ದಳು ಎನ್ನಲಾಗಿದೆ. ಜತೆಗೆ ಆರೋಪಿ ತಾನು 20 ರೂ. ನೀಡಿ ಆಸಿಡ್ ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. 

"ರೂಪಾಲಿ ಓರ್ವ ಡ್ಯಾನ್ಸರ್. ಆರೋಪಿ ಆಕೆಯನ್ನು ಹೊರಬರುವಂತೆ ಕರೆದಿದ್ದಾನೆ. ಆಕೆ ಹೊರಗೆ ಬಂದಿದ್ದಾಳೆ. ಕೂಡಲೇ ಆತ ಆಕೆಯ ಮುಖದ ಮೇಲೆ ಆಸಿಡ್ ರೀತಿಯ ದ್ರವವನ್ನು ಎರಚಿದ್ದಾನೆ. ಆದರೆ ವೈದ್ಯರು ಹೇಳುವಂತೆ ಆಕೆಯ ಮುಖದ ಮೇಲೆ ಆಸಿಡ್ ಗುರುತುಗಳೇನೂ ಕಂಡುಬಂದಿಲ್ಲ. ಆದರೆ, ಆಕೆ ಕಣ್ಣಿನ ದೃಷ್ಟಿ ಮಂಜಾಗಿದೆ" ಎಂದು ಪೊಲೀಸ್ ಅಧಿಕಾರಿ ಪ್ರಶಾಂತ್ ಪ್ರಶಾಂತ್ ಚುಬೇ ಹೇಳಿದ್ದಾರೆ.