ನವದೆಹಲಿ: ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆದ ನಾಲ್ಕನೇ ಸುತ್ತಿನ ಮಾತುಕತೆ ಕೂಡ ರೈತರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ತಾರ್ಕಿಕ ಅಂತ್ಯಕ್ಕೆ ಬರಲು ಸಾಧ್ಯವಾಗದೆ ವಿಫಲವಾಗಿದ್ದರಿಂದ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿದ್ದಾರೆ.
ಇದರಿಂದ ದೆಹಲಿ ಗಡಿಯಲ್ಲಿ ರೈತರು (Farmers) ನಡೆಸುತ್ತಿದ್ದ ಅನಿರ್ದಿಷ್ಟವಾಧಿ ಧರಣಿ 9ನೇ ದಿನಕ್ಕೆ ಕಾಲಿಟ್ಟಿದೆ. ಇನ್ನೊಂದೆಡೆ ನಾಳೆ (ಡಿಸೆಂಬರ್ 5ಕ್ಕೆ) ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Narendra Singh Tomar), ಪಿಯೂಷ್ ಗೋಯಲ್, ಕಿರಿಯ ಕೈಗಾರಿಕಾ ಸಚಿವ ಸೋಮ್ ಪ್ರಕಾಶ್ ಹಾಗೂ ರೈತ ಸಂಘಟನೆಗಳ 35 ಮಂದಿ ಪ್ರತಿನಿಧಿಗಳ ನಡುವೆ ದೆಹಲಿಯ ವಿಜ್ಞಾನ ಭವನದಲ್ಲಿ ಸಭೆ ನಡೆದಿತ್ತು. ಸುಮಾರು 7 ಗಂಟೆ ಸಭೆ ನಡೆಯಿತಾದರೂ ತಾರ್ಕಿಕ ಅಂತ್ಯಕ್ಕೆ ಬರಲು ಸಾಧ್ಯವಾಗದೆ ಡಿಸೆಂಬರ್ 5ರಂದು ಮತ್ತೆ ಸಭೆ ಸೇರಿ ಸಮಾಲೋಚನೆ ನಡೆಸಲು ನಿರ್ಧರಿಸಲಾಯಿತು. ಅಲ್ಲಿಯವರೆಗೆ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮುಂದುವರೆಸಲು ರೈತರು ನಿರ್ಧರಿಸಿದ್ದಾರೆ.
ತೀವ್ರಗೊಂಡ ರೈತರ ಪ್ರತಿಭಟನೆ, ಸಮಸ್ಯೆ ಬಗೆ ಹರಿಸಲು ಕೇಂದ್ರಕ್ಕೆ ಪಂಜಾಬ್ ಸಿಎಂ ಮನವಿ
'ರೈತರ ಪಾಲಿಗೆ ಮರಣಶಾಸನವಾಗಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ರೈತ ಬೆಳೆಯುವ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ (MSP) ಕಾನೂನು ಜಾರಿಗೊಳಿಸಬೇಕು. ರೈತರಿಗೆ ಪೂರಕವಾಗಿಲ್ಲದ ವಿದ್ಯುತ್ ಕಾಯಿದೆಯನ್ನು ಹಿಂಪಡೆಯಬೇಕು. ಜೊತೆಗೆ ರೈತ ಬೆಳೆಯುವ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು' ಎಂಬುದು ರೈತರ ಹಕ್ಕೊತ್ತಾಯವಾಗಿದೆ.
ಇನ್ನೊಂದೆಡೆ 'ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸಲಾಗುವುದು' ಎಂದು ಕೇಂದ್ರ ಸರ್ಕಾರ (Central Government) ಹೇಳಿದೆ. ರೈತರ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಒಪ್ಪಿಲ್ಲ. ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ರೈತರು ಒಪ್ಪಿಲ್ಲ.
ರೈತರಿಗೆ ಬೆಂಬಲ ವ್ಯಕ್ತಪಡಿಸಿ ಪದ್ಮಭೂಷಣ ಪ್ರಶಸ್ತಿ ಹಿಂದಿರುಗಿಸಿದ ಸಂಸದ ಸುಖದೇವ್ ಧಿಂಡ್ಸಾ
ನಿನ್ನೆ ನಡೆದ ಸಭೆಯ ವೇಳೆ ಮಧ್ಯಾಹ್ನದ ಊಟದ ಬಿಡುವಿನಲ್ಲಿ ರೈತ ಮುಖಂಡರಿಗೆ ಸರ್ಕಾರ ವ್ಯವಸ್ಥೆ ಮಾಡಿದ್ದ ಊಟದ ವ್ಯವಸ್ಥೆಯನ್ನು ರೈತರು ತಿರಸ್ಕರಿಸಿದ್ದಾರೆ. ಅಲ್ಲದೆ ತಮ್ಮ ಊಟದ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳುತ್ತೇವೆಂದು ದೆಹಲಿಯ ಗುರುದ್ವಾರದಲ್ಲಿ ಸಾರ್ವಜನಿಕರಿಗೆ ಊಟ ಬಡಿಸುವ ಲಂಗರ್ ನಿಂದ ಊಟ ತರಿಸಿಕೊಂಡು ವಿಜ್ಞಾನ ಭವನದ ಆವರಣದಲ್ಲಿ ನೆಲದ ಮೇಲೆ ಕೂತು ಉಣ್ಣುವ ಮೂಲಕ ಸ್ವಾಭಿಮಾನ ಮೆರೆದಿದ್ದಾರೆ.
ನಾಳೆ ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಮತ್ತೊಂದು ಸುತ್ತಿನ ಮಾತಕತೆ ನಡೆಯಲಿದ್ದು ಆ ಸಭೆಯೂ ವಿಫಲವಾದರೆ ಮಹಾರಾಷ್ಟ್ರದಿಂದ ದೆಹಲಿಗೆ ರೈತರು ಮೆರವಣಿಗೆ ಪ್ರಾರಂಭಿಸುವುದಾಗಿ ಮಹಾರಾಷ್ಟ್ರ ರೈತ ಗುಂಪುಗಳು ಕೇಂದ್ರಕ್ಕೆ ಎಚ್ಚರಿಕೆ ನೀಡಿವೆ. ಇದರಿಂದ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.