ಐಎನ್ಎಸ್ ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ, ಓರ್ವ ಅಧಿಕಾರಿ ಸಾವು

ಯುದ್ಧ ನೌಕೆಯ ಬಾಯ್ಲರ್ ಕಂಪಾರ್ಟ್​ಮೆಂಟ್​ನಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದ ನೌಕಾಪಡೆ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ಡಿ.ಎಸ್.ಚೌಹಾನ್ ಸಾವನ್ನಪ್ಪಿದ್ದಾರೆ. 

Updated: Apr 26, 2019 , 05:00 PM IST
ಐಎನ್ಎಸ್ ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ, ಓರ್ವ ಅಧಿಕಾರಿ ಸಾವು
file photo

ಕಾರವಾರ: ಐಎನ್ಎಸ್ ವಿಕ್ರಮಾದಿತ್ಯ ಯುದ್ಧ ನೌಕೆಯನ್ನು ಹೊತ್ತೊಯ್ಯುತ್ತಿದ್ದ ಹಡಗಿನಲ್ಲಿ ಶುಕ್ರವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಓರ್ವ ತಾಂತ್ರಿಕ ಸಿಬ್ಬಂದಿ ಮೃತಪಟ್ಟಿರುವ ಘಟನೆ ಉತ್ತರಕನ್ನಡದ ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಸಂಭವಿಸಿದೆ. 

ಯುದ್ಧ ನೌಕೆಯ ಬಾಯ್ಲರ್ ಕಂಪಾರ್ಟ್​ಮೆಂಟ್​ನಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದ ನೌಕಾಪಡೆ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ಡಿ.ಎಸ್.ಚೌಹಾನ್ ಸಾವನ್ನಪ್ಪಿದ್ದಾರೆ. ಹಡಗಿನ ಇತರ ಸಿಬ್ಬಂದಿಯ ಪ್ರಯತ್ನದಿಂದಾಗಿ ಬೆಂಕಿ ತೀವ್ರತೆ ನಿಯಂತ್ರಣಕ್ಕೆ ಬಂದಿದ್ದು, ಭಾರೀ ಅನಾಹುತ ತಪ್ಪಿದೆ.

ಭಾರತ ಸರ್ಕಾರದ ರಕ್ಷಣಾ ವಿಭಾಗದ ಹೇಳಿಕೆಯ ಪ್ರಕಾರ,  ಲೆಫ್ಟಿನೆಂಟ್ ಡಿ.ಎಸ್.ಚೌಹಾನ್ ಅವರು ಅಗ್ನಿಶಾಮಕ ಪ್ರಯತ್ನಗಳನ್ನು ಬಹಳ ಧೈರ್ಯದಿಂದ ಮುನ್ನಡೆಸಿದರು. ಬೆಳಿಗ್ಗೆ 9 ರಿಂದ 9.30ರ ನಡುವೆ ಸಂಭವಿಸಿದ ಬೆಂಕಿ ಅವಘಡದಲ್ಲಿ ದಟ್ಟವಾದ ಹೊಗೆ ಆವರಿಸಿದ್ದರಿಂದ ಪ್ರಜ್ಞೆ ತಪ್ಪಿದ ಲೆಫ್ಟಿನೆಂಟ್ ಅವರನ್ನು ಕಾರವಾರದ INHS ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು ಎನ್ನಲಾಗಿದೆ. ಈಗಾಗಲೇ ನೌಕಾಪಡೆಯು ಘಟನೆ ಬಗ್ಗೆ ತನಿಖೆಗೆ ಆದೇಶಿಸಿದೆ.