ಬೆಂಗಳೂರು: ಪಾಟೀದಾರ್ ಸಮುದಾಯದವರ ಬೇಡಿಕೆಯನ್ನು ಪರಿಗಣಿಸಿ ಒಂದು ಒಬಿಸಿ ಕಮಿಷನ್ ನೇಮಿಸಿ ಅದು ನೀಡುವ ವರದಿಯನ್ನು ಜಾರಿಮಾಡಬೇಕೆಂದು ಆಗ್ರಹಿಸಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗುಜರಾತಿನಲ್ಲಿ ನಡೆಯುತ್ತಿರುವ ಪಾಟೀದಾರ್ ಸಮುದಾಯದ ಪ್ರತಿಭಟನೆಗಳನ್ನು ಮಾಧ್ಯಮಗಳ ಮುಖೇನ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ.
ಇದೇ ಸಮುದಾಯದ ಒಬ್ಬ ಯುವ ಮುಖಂಡ ಹಾರ್ದಿಕ್ ಪಟೇಲ್ ಅವರು ಸುಮಾರು 3 ವರ್ಷಗಳಿಂದ ಹೋರಾಟವನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಅವರು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಅವರಿಗೆ ಕೇವಲ 25 ವರ್ಷಗಳು ಈ ಚಿಕ್ಕ ವಯಸ್ಸಿನಲ್ಲೇ ಅವರು ಒಂದು ಸಮಾಜದ ಹಿತಕ್ಕೋಸ್ಕರ ಹಗಲು-ರಾತ್ರಿ ಹೋರಾಟವನ್ನು ಮಾಡುತ್ತಿದ್ದಾರೆ. ಅದರಿಂದ ಅವರ ಆರೋಗ್ಯದ ಬಗ್ಗೆ ಗಮನಹರಿಸಿ ಮತ್ತು ಆತನ ಸಮಾಜಮುಖಿ ಕಾರ್ಯವನ್ನು ಮನಗಂಡು ಕೇಂದ್ರ ಸರ್ಕಾರ ಹಾಗೂ ಅಲ್ಲಿನ ರಾಜ್ಯ ಸರ್ಕಾರ ಅದರ ಕಡೆ ಗಮನ ಹರಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ ಎಂದು ದೇವೇಗೌಡರು ಪತ್ರದಲ್ಲಿ ಬರೆದಿದ್ದಾರೆ.
1996ರಲ್ಲಿ ನಾನು ಪ್ರಧಾ ಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜಸ್ತಾನ ರಾಜ್ಯದ ಜಾಟ್ ಸಮುದಾಯದವರು ನನಗೆ ಒಂದು ಮನವಿಯನ್ನು ಸಲ್ಲಿಸುತ್ತಾರೆ, ಜಾಟ್ ಸಮುದಾಯವು ಆರ್ಥಿಕವಾಗಿ ಬಹಳ ಹಿಂದುಳಿದ ಸಮುದಾಯವಾಗಿದೆ. ಅದರಿಂದ ಆ ಸಮುದಾಯವನ್ನು ಒಬಿಸಿ ಗೆ ಸೇರಿಸಬೇಕೆಂದು ಮನವಿ ಮಾಡಿಕೊಳ್ಳುತ್ತಾರೆ.
ಆ ಸಂದರ್ಭದಲ್ಲಿ ನಾನು ಒಂದು ಒಬಿಸಿ ಕಮಿಷನ್ ನೇಮಿಸಿ ಸೂಕ್ತ ವರದಿ ಸಲ್ಲಿಸುವಂತೆ ಸೂಚಿಸುತ್ತೀನಿ. ಆದ ಕಾರಣ ಕಮಿಷನ್ ರವರು ಅಧ್ಯಯನ ನಡೆಸಿ ಜಾಟ್ ಸಮುದಾಯದವರು ಎಲ್ಲಾ ಕ್ಷೇತ್ರಗಳಲ್ಲೂ ಬಹಳ ಹಿಂದುಲಿದಿರುವುದರಿಂದ ಆ ಸಮುದಾಯವನ್ನು ಒಬಿಸಿಗೆ ಸೇರಿಸಬಹುದೆಂದು ವರದಿ ಸಲ್ಲಿಸುತ್ತದೆ. ಈ ಆಧಾರದ ಮೇಲೆ ನಾನು ಜಾಟ್ ಸಮುದಾಯವನ್ನು ಒಬಿಸಿಗೆ ಸೇರಿಸುತ್ತೀನಿ.
ನಮ್ಮ ಸರ್ಕಾರದ ಆದೇಶವನ್ನು ಕೋರ್ಟ್ ತಡೆಹಿಡಿಯುತ್ತದೆ. ನಂತರ ಕೋರ್ಟ್ ನಲ್ಲಿ ನಾವು ಸೂಕ್ತವಾದ ವರದಿ ನೀಡಿ ಜಾಟ್ ಸಮುದಾಯವನ್ನು ಒಬಿಸಿಗೆ ಸೇರಿಸುವಲ್ಲಿ ಯಶಸ್ವಿಯಾಗುತ್ತೀವಿ. ಇದೇ ಮಾದರಿಯಲ್ಲಿ ತಾವು ಪಾಟೀದಾರ್ ಸಮುದಾಯದವರ ಬೇಡಿಕೆಯನ್ನು ಪರಿಗಣಿಸಿ ಒಂದು ಒಬಿಸಿ ಕಮಿಷನ್ ನೇಮಿಸಿ ಅದು ನೀಡುವ ವರದಿಯನ್ನು ಜಾರಿಮಾಡಬೇಕೆಂದು ಈ ಮುಖೇನ ತಮ್ಮನ್ನು ಆಗ್ರಹಿಸುತ್ತೇನೆ ಎಂದು ದೇವೇಗೌಡರು ಪತ್ರದಲ್ಲಿ ಬರೆದಿದ್ದಾರೆ.