ನವದೆಹಲಿ: ಮಾಜಿ ಕೇಂದ್ರ ಸಚಿವ ಮತ್ತು ಆರ್ಜೆಡಿ ನಾಯಕ ಶರದ್ ಯಾದವ್ ಅವರು ಗುರುವಾರದಂದು ತಮ್ಮ 75 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಪುತ್ರಿ ಸುಭಾಷಿಣಿ ಶರದ್ ಯಾದವ್ ಅವರು ಟ್ವಿಟರ್ನಲ್ಲಿ "ಪಾಪಾ ನಹೀ ರಹೇ "ಎಂದು ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಇತ್ತೀಚಿಗೆ ಅವರ ಆರೋಗ್ಯ ಹದಗೆಟ್ಟಿದ್ದರಿಂದಾಗಿ, ಅವರನ್ನು ಗುರುಗ್ರಾಮ್ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶರದ್ ಯಾದವ್ ಅವರನ್ನು ಪ್ರಜ್ಞಾಹೀನ ಮತ್ತು ಸ್ಪಂದಿಸದ ಸ್ಥಿತಿಯಲ್ಲಿ ತುರ್ತು ವಿಭಾಗಕ್ಕೆ ಕರೆತರಲಾಯಿತು ಮತ್ತು ಅವರಿಗೆ ಯಾವುದೇ ನಾಡಿಮಿಡಿತ ಅಥವಾ ರೆಕಾರ್ಡ್ ಮಾಡಬಹುದಾದ ರಕ್ತದೊತ್ತಡ ಇರಲಿಲ್ಲ.ಆರೋಗ್ಯ ಅಧಿಕಾರಿಗಳ ಉತ್ತಮ ಪ್ರಯತ್ನದ ಹೊರತಾಗಿಯೂ ಯಾದವ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ರಾತ್ರಿ 10:19 ಕ್ಕೆ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
ಶರದ್ ಯಾದವ್ ಅವರು 1999 ಮತ್ತು 2004 ರ ನಡುವೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದಾರೆ. 2003 ರಲ್ಲಿ, ಯಾದವ್ ಅವರು ತಮ್ಮ ಮಾಜಿ ಅನುಯಾಯಿಯಾದ ನಿತೀಶ್ ಕುಮಾರ್ ಅವರನ್ನು ಒಳಗೊಂಡಿರುವ ಸಂಯುಕ್ತ ಜನತಾದಳದ ಅಧ್ಯಕ್ಷರಾಗಿದ್ದರು.2004ರ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ನಿತೀಶ್ ಕುಮಾರ್ ಅವರಿಗೆ ರಾಜ್ಯಸಭಾ ಸ್ಥಾನ ಪಡೆಯಲು ನೆರವಾದರು.
Pained by the passing away of Shri Sharad Yadav Ji. In his long years in public life, he distinguished himself as MP and Minister. He was greatly inspired by Dr. Lohia’s ideals. I will always cherish our interactions. Condolences to his family and admirers. Om Shanti.
— Narendra Modi (@narendramodi) January 12, 2023
2009 ರಲ್ಲಿ, ಶರದ್ ಯಾದವ್ ಮತ್ತೆ ಮಾಧೇಪುರದಿಂದ ಲೋಕಸಭೆಗೆ ಆಯ್ಕೆಯಾದರು. ಆದರೆ 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಯು ಸೋಲಿನ ನಂತರ, ನಿತೀಶ್ ಕುಮಾರ್ ಅವರೊಂದಿಗಿನ ಯಾದವ್ ಅವರ ಸಂಬಂಧವು ಹದಗೆಟ್ಟಿತು.
2017 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಜೆಪಿಯೊಂದಿಗೆ ಮೈತ್ರಿಮಾಡಿಕೊಂಡಾಗ ಅವರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರು.ಇದಕ್ಕಾಗಿ ಜೆಡಿಯು ಅವರನ್ನು ರಾಜ್ಯಸಭೆಯಿಂದ ಹೊರಹಾಕಲು ಪ್ರಯತ್ನಿಸಿತು.
ನಂತರ, ಶರದ್ ಯಾದವ್ ನಿತೀಶ್ ಕುಮಾರ್ ಅವರಿಂದ ಬೇರ್ಪಟ್ಟಿದ್ದರು ಇದಾದ ನಂತರ 2018 ರಲ್ಲಿ ತಮ್ಮದೇ ಆದ ಪಕ್ಷವಾದ ಲೋಕತಾಂತರಿಕ್ ಜನತಾ ದಳ (ಎಲ್ಜೆಡಿ) ಅನ್ನು ಸ್ಥಾಪಿಸಿದರು.
ಅವರು ಮಾರ್ಚ್ 2022 ರಲ್ಲಿ, ಹಿಂದಿನ ಜನತಾ ದಳದ ವಿವಿಧ ಶಾಖೆಗಳನ್ನು ಒಗ್ಗೂಡಿಸುವ ಪ್ರಯತ್ನಗಳ ಭಾಗವಾಗಿ ಎಲ್ಜೆಡಿ ರಾಷ್ಟ್ರೀಯ ಜನತಾ ದಳದೊಂದಿಗೆ ವಿಲೀನಗೊಳ್ಳಲಿದೆ ಎಂದು ಶರದ್ ಯಾದವ್ ಘೋಷಿಸಿದ್ದರು.
ಈಗ ಶರದ್ ಯಾದವ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ “ಶರದ್ ಯಾದವ್ ಅವರ ನಿಧನದಿಂದ ನೋವಾಗಿದೆ. ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಅವರು ಸಂಸದ ಮತ್ತು ಸಚಿವರಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು. ಅವರು ಡಾ. ಲೋಹಿಯಾ ಅವರ ಆದರ್ಶಗಳಿಂದ ಬಹಳ ಪ್ರೇರಿತರಾಗಿದ್ದರು.ಅವರ ಜೊತೆಗಿನ ಸಂವಾದವನ್ನು ನಾನು ಸದಾ ಗೌರವಿಸುತ್ತೇನೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ.” ಎಂದು ಅವರು ಕಂಬನಿ ಮಿಡಿದಿದ್ದಾರೆ.