ಜೈಪುರ್: ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಗುದ್ದಾಟಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಇಂದು ತನ್ನ ತೀರ್ಪು ನೀಡಿದೆ. ರಾಜಸ್ಥಾನ ಹೈಕೋರ್ಟ್ ಯಥಾಸ್ಥಿತಿ ಮುಂದುವರೆಸಿಕೊಂಡು ಹೋಗಲು ನಿರ್ದೇಶನ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಪೈಲಟ್ ಬಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಆಲಿಸಿದೆ. ಇಂದು ಬೆಳಗ್ಗೆ 10,30 ರ ಸುಮಾರಿಗೆ ನ್ಯಾಯಾಲಯವು ತನ್ನ ತೀರ್ಪು ಪ್ರಕಟಿಸಬೇಕಿತ್ತು. ಆದರೆ, ತೀರ್ಪು ಪ್ರಕಟಿಸುವಲ್ಲಿ ಸ್ವಲ್ಪ ವಿಳಂಬವಾಗಿದ್ದು ಸ್ಪೀಕರ್ ನೀಡಿರುವ ನೋಟಿಸ್ ಕುರಿತು ತೀರ್ಪು ನೀಡಿರುವ ಹೈಕೋರ್ಟ್ ಯಥಾಸ್ಥಿತಿ ಕಾಯ್ದಿರಿಸುವಂತೆ ನ್ಯಾಯಪೀಠ ಆದೇಶ ನೀಡಿದೆ. ಅಂದರೆ, ಸ್ಪೀಕರ್ ಪೈಲಟ್ ಬಣದ ಶಾಸಕರ ಮೇಲೆ ಕ್ರಮ ಕೈಗೊಳ್ಳಲು ಇದರಿಂದ ಸಾಧ್ಯವಾಗುವುದಿಲ್ಲ. ಇದೆ ವೇಳೆ ಸ್ಪೀಕರ್ ಅವರನ್ನು ಅನರ್ಹಗೊಳಿಸುವ ವಿಷಯ ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದೂ ಕೂಡ ನ್ಯಾಯಾಲಯ ಹೇಳಿದೆ.
ನ್ಯಾಯಾಲಯ ನೀಡಿರುವ ಈ ಆದೇಶದಿಂದ ಪೈಲಟ್ ಬಣಕ್ಕೆ ಭಾರಿ ನೆಮ್ಮದಿ ಸಿಕ್ಕಂತಾಗಿದೆ ಎನ್ನಲಾಗುತ್ತಿದೆ. ಆದರೆ, ಈ ಕುರಿತಾದ ಮುಂದಿನ ವಿಚಾರಣೆ ಹೈಕೋರ್ಟ್ ನಲ್ಲಿ ಯಾವಾಗ ನಡೆಯಲಿದೆ ಎಂಬುದರ ಕುರಿತು ನ್ಯಾಯಾಲಯ ಏನನ್ನೂ ಸ್ಪಷ್ಟಪಡಿಸಿಲ್ಲ. ಇನ್ನೊಂದೆಡೆ ಈ ಕುರಿತಾದ ಮುಂದಿನ ವಿಚಾರಣೆ ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದೆ. ಹೀಗಾಗಿ ಪೈಲಟ್ ಬಣದ ವಿರುದ್ಧ ಸ್ಪೀಕರ್ ಕ್ರಮ ಕೈಗೊಳ್ಳಬಹುದೇ ಅಥವಾ ಇಲ್ಲವೇ ಎಂಬುದು ಇನ್ನು ಸುಪ್ರೀಂ ಕೋರ್ಟ್ ನಲ್ಲಿಯೇ ನಿರ್ಧಾರವಾಗಲಿದೆ.
ಆದರೆ, ಏತನ್ಮಧ್ಯೆ ರಾಜ್ಯ ವಿಧಾನಸಭೆಯ ಅಧಿವೇಶನ ನಡೆಸಿದರೆ ಮತ್ತು ಕಾಂಗ್ರೆಸ್ ಪಕ್ಷ ವ್ಹಿಪ್ ಜಾರಿಗೊಳಿಸಿದರೆ ಮತ್ತು ಪೈಲೆಟ್ ಬಣ ಈ ವ್ಹಿಪ್ ಅನ್ನು ಉಲ್ಲಂಘಿಸಿದರೆ ಪೈಲೆಟ್ ಬಣದ ವಿರುದ್ದ ಸ್ಪೀಕರ್ ಕ್ರಮ ಜರುಗಿಸಬಹುದಾಗಿದೆ ಮತ್ತು ಇದು ಮೊದಲಿನ ನೋಟಿಸ್ ಗಿಂತ ಭಿನ್ನ ಪ್ರಕರಣವೆಂದು ಪರಿಗಣಿಸಲಾಗುವುದು.
ಇದಕ್ಕೂ ಮೊದಲು ರಾಜಸ್ಥಾನದಲ್ಲಿ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಬಣಗಳ ನಡುವಿನ ಹೋರಾಟವು ಹೈಕೋರ್ಟ್ಗೆ ತಲುಪಿದೆ. ಸ್ಪೀಕರ್ ಸ್ವೀಕರಿಸಿದ ಅನರ್ಹತೆ ನೋಟಿಸ್ ವಿರುದ್ಧ ಸಚಿನ್ ಪೈಲಟ್ ಸೇರಿದಂತೆ 19 ಶಾಸಕರು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.