ಪಾಕಿಸ್ತಾನ ಪರ ಘೋಷಣೆ: ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲು..!

ಗುರುಗ್ರಾಮ್‌ನ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Written by - Puttaraj K Alur | Last Updated : Sep 1, 2021, 02:23 PM IST
  • ಗುರುಗ್ರಾಮ್‌ನ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ
  • ವ್ಯಕ್ತಿಯೊಬ್ಬನ ವಿರುದ್ಧ ಎಫ್‌ಐಆರ್ ದಾಖಲಿಸಿದ ಹರಿಯಾಣ ಪೊಲೀಸರಿಂದ ತನಿಖೆ
  • ತನ್ನ ಪತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆಂದು ಪೊಲೀಸರಿಗೆ ತಿಳಿಸಿರುವ ವ್ಯಕ್ತಿಯ ಪತ್ನಿ
ಪಾಕಿಸ್ತಾನ ಪರ ಘೋಷಣೆ: ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲು..! title=
ಪಾಕ್ ಪರ ಘೋಷಣೆ ಕೂಗಿದ ವ್ಯಕ್ತಿ (Photo Courtesy: @Zee news)

ಗುರುಗ್ರಾಮ: ಗುರುಗ್ರಾಮ್‌ನ( Gurugram) ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ನಿಂತುಕೊಂಡು ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಹರಿಯಾಣ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ನೆರೆಹೊರೆಯವರ ದೂರಿನ ಮೇರೆಗೆ ಅನ್ವರ್ ಸೈಯದ್ ಫೈಜುಲ್ಲಾ ಹಶ್ಮಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ದೇಶದಲ್ಲಿ ‘ಪಾಕಿಸ್ತಾನ ಜಿಂದಾಬಾದ್’(Pakistan Zindabad) ಘೋಷಣೆ ಕೂಗಿದ ಆರೋಪದ ಮೇರೆಗೆ ಅನ್ವರ್ ಸೈಯದ್ ಫೈಜುಲ್ಲಾ ಹಶ್ಮಿ ವಿರುದ್ಧ ರಾಜೇಂದ್ರ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 153 B ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ಆರೋಪಿಯು ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡಕಾಟ ನಡೆಸಲಾಗುತ್ತಿದೆ ಎಂದು ಹರಿಯಾಣ ಪೊಲೀಸರು ಹೇಳಿದ್ದಾರೆ.

ಗುರುಗ್ರಾಮದ ವಸತಿ ಸಮುಚ್ಛಯವೊಂದರಲ್ಲಿ ಆರೋಪಿಯು ಪಾಕಿಸ್ತಾನ ಪರ ಘೋಷಣೆ ಕೂಗುವಂತೆ ಮಗುವಿಗೆ ಕೇಳುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿದೆ. ಭಾರತದಲ್ಲಿದ್ದುಕೊಂಡು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆಂದು ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಏನಿದು ಹೊಸ 'ಬಿಎಚ್' ಭಾರತ್ ಸರಣಿ?: ಪ್ರಯೋಜನೆಗಳು, ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ…

ತನ್ನ ಮನೆಯ ಬಾಲ್ಕನಿಯಲ್ಲಿ ನಿಂತುಕೊಂಡು ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆಗಳನ್ನು ಕೂಗುತ್ತಿರುವ ವ್ಯಕ್ತಿಯ ವಿಡಿಯೋ ಕ್ಲಿಪ್ ನೊಂದಿಗೆ ಗುರುಗ್ರಾಮದ ‘ಇಂಪೀರಿಯಲ್ ಗಾರ್ಡನ್ಸ್ ಸೊಸೈಟಿ’(Imperial Garden Society) ನಿವಾಸಿಗಳಿಂದ ದೂರು ಸ್ವೀಕರಿಸಲಾಗಿದೆ ಎಂದು ಗುರುಗ್ರಾಮದ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ) ಧೀರಜ್ ಸೆಟಿಯಾ ಹೇಳಿದ್ದಾರೆ.  

ಈ ಮಧ್ಯೆ ಪಾಕ್ ಪರ ಘೋಷಣೆ ಕೂಗಿರುವ ಆ ವ್ಯಕ್ತಿಯ ಪತ್ನಿ ನೆರೆಹೊರೆಯವರ ವಿರುದ್ಧ ನೀಡಿರುವ ಪ್ರತಿದೂರಿನಲ್ಲಿ ತನ್ನ ಪತಿ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಧನ್ಕೋಟ್ ಪೋಲಿಸ್ ಪೋಸ್ಟ್ ನಲ್ಲಿ ‘ಇಂಪೀರಿಯಲ್ ಗಾರ್ಡನ್ಸ್ ಸೊಸೈಟಿ’ ನಿವಾಸಿಗಳ ವಿರುದ್ಧ ಆರೋಪಿತನ ಪತ್ನಿ ಕಿರುಕುಳದ ದೂರು ನೀಡಿದ್ದಾರೆ.

‘ನನ್ನ ಪತಿ ಖಿನ್ನತೆಯಿಂದ ಬಳಲುತ್ತಿದ್ದಾನೆ. ಆದರೆ ನಮ್ಮ ನೆರೆಹೊರೆಯವರು ನಮ್ಮ ಮನೆಗೆ ಬಂದು ಅನಗತ್ಯವಾಗಿ ಬೆದರಿಕೆ ಹಾಕಲು ಆರಂಭಿಸಿದ್ದಾರೆ. ಇದರಿಂದ ನನಗೆ ತುಂಬಾ ಭಯವಾಗಿದೆ. ನನ್ನ ಪತಿಯ ಮಾನಸಿಕ ಸ್ಥಿತಿಗತಿ ಸರಿಯಿಲ್ಲ. ಹೀಗಾಗಿ ಆತ ಈ ರೀತಿ ವರ್ತಿಸಬಹುದು. ಖಿನ್ನತೆಗೆ ಒಳಗಾಗಿರುವ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಇದಲ್ಲದೆ ತನ್ನ ಪತಿ ವಿರುದ್ಧವೇ ಆಕೆ ಕೌಟುಂಬಿಕ ದೌರ್ಜನ್ಯದ ದೂರು ಕೂಡ ನೀಡಿದ್ದಾಳೆ ಅಂತಾ ತಿಳಿದುಬಂದಿದೆ.

ಇದನ್ನೂ ಓದಿ: Smartphone Tips: ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಟ್ರೈ ಮಾಡಿ

‘ಅನ್ವರ್ ನಿಜವಾಗಿಯೂ ಖಿನ್ನತೆಯಿಂದ ಬಳಲುತ್ತಿದ್ದಾನೋ ಇಲ್ಲವೋ ಎಂಬುದರ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಅವರ ವೈದ್ಯಕೀಯ ಸ್ಥಿತಿಗತಿಯ ಬಗ್ಗೆ ಪರಿಶೀಲಿಸಲಾಗುತ್ತಿದೆ. ಸದ್ಯ ತಲೆಮೆರೆಸಿಕೊಂಡಿರುವ ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ. ಆತನನ್ನು ವಶಕ್ಕೆ ಪಡೆದ ನಂತರವೇ ನಿಜಾಂಶ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News