ಬೆಂಗಳೂರು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನೌಕರರೊಂದಿಗೆ ಸಂವಾದ ನಡೆಸಲು ಇಂದು ಬೆಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಎಚ್ಎಎಲ್ ನೌಕರರನ್ನುದ್ದೇಶಿಸಿ ಮಾತನಾಡಿದರು. ನನ್ನ ದೃಷ್ಟಿಯಲ್ಲಿ ಎಚ್ಎಎಲ್ ಅಂದರೆ ಕಂಪೆನಿ ಅಲ್ಲ. ಇದು ದೇಶದ ಶಕ್ತಿ ಇದ್ದಂತೆ. ದೇಶದ ವೈಮಾನಿಕ ಕ್ಷೇತ್ರದಲ್ಲಿ ಹೆಚ್ಎಎಲ್ ಕೊಡುಗೆ ಅಪಾರ ಇಲ್ಲಿಗೆ ಬಂದು ಮಾತನಾಡುತ್ತಿರೋದು ಹೆಮ್ಮೆಯ ವಿಷಯ ಎಂದರು. ತಮ್ಮ ಸಂವಾದದಲ್ಲಿ ಯಾವುದೇ ಸಚಿವರ ಮೇಲಾಗಲಿ, ರಾಜಕೀಯ ಪಕ್ಷದ ಮೇಲಾಗಲಿ ಆರೋಪ ಮಾಡದೆ ಎಚ್ಎಎಲ್ನ ಸಾಮರ್ಥ್ಯದ ಬಗ್ಗೆ ಮಾತ್ರವೇ ಮಾತನಾಡುವ ಮೂಲಕ ರಾಹುಲ್ ಘನತೆ ಮೆರೆದರು.
ಇಲ್ಲಿ ನಾನು ಭ್ರಷ್ಟಾಚಾರವಾಗಲಿ, ಕೇಂದ್ರ ಸರ್ಕಾರದ ನೀತಿಗಳ ಬಗ್ಗೆಯಾಗಲಿ ನಾನು ಮಾತನಾಡುವುದಿಲ್ಲ. ಆದರೆ ನಿಮ್ಮ ಸಾಮರ್ಥ್ಯದ ಬಗ್ಗೆ ಮಾತ್ರವೇ ಮಾತನಾಡುತ್ತಿದ್ದೇನೆ. ನಿಮ್ಮ ಬೆಂಬಲಕ್ಕೆ ನಾನು ಸದಾ ಸಿದ್ಧ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು
ಅಮೆರಿಕದ ಅಧ್ಯಕ್ಷ ಓಬಮ ಅವರಿಗೆ ಚೀನಾ ಮತ್ತು ಭಾರತದ ಬಗೆಗೆ ಹೆದರಿಕೆಯಿದೆ. ಭಾರತದ ಬಗೆಗೆ ಓಬಮ ಅವರಿಗೆ ಭಯ ಬಂದಿದ್ದರೆ ಅದಕ್ಕೆ ಕಾರಣ ನಮ್ಮ ಹೆಮ್ಮೆಯ ಎಚ್ಎಎಲ್ ಎಂದು ರಾಹುಲ್ ಹೆಮ್ಮೆಯಿಂದ ನುಡಿದರು.
ನಾನು ಇಲ್ಲಿ ಬಂದಿರುವುದು ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳಲೇ ಹೊರತು ನನ್ನ ಮಾತುಗಳನ್ನು ಆಡಲಲ್ಲ, ನಿಮ್ಮ ಅನುಮಾನಗಳು ಏನೇ ಇರಲಿ ಕೇಳಿ ಉತ್ತರ ನೀಡುತ್ತೇನೆ ಎಂದ ರಾಹುಲ್, ಆಧುನಿಕ ಭಾರತದ ದೇವಸ್ಥಾನಗಳಾದ ಸಾರ್ವಜನಿಕ ವಲಯಗಳ ಮೇಲೆ ದಾಳಿ ಮಾಡಲು ನಾವು ಬಿಡುವುದಿಲ್ಲ. ನಿಮ್ಮ ಗೋರಿಯ ಮೇಲೆ ಬೇರೆಯವರು ಸೌಧ ಕಟ್ಟಲು ನಾವು ಬಿಡುವುದಿಲ್ಲ ಎಂದು ಎಚ್ಎಎಲ್ ಸಿಬ್ಬಂದಿಗೆ ಧೈರ್ಯ ತುಂಬಿದರು.
ರಫೆಲ್ ಒಪ್ಪಂದ ಎಚ್ಎಎಲ್ನ ಹಕ್ಕು:
ರಫೆಲ್ ಒಪ್ಪಂದ ಎಚ್ಎಎಲ್ನ ಹಕ್ಕು, ಆ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಇದ್ದ ಏಕೈಕ ಸಾರ್ವಜನಿಕ ಸಂಸ್ಥೆ ಎಚ್ಎಎಲ್ ಮಾತ್ರ ಇದೆ ಎಂದು ರಾಹುಲ್ ಈ ಸಂದರ್ಭದಲ್ಲಿ ನುಡಿದರು.
ರಾಹುಲ್ಗಾಂಧಿ ಎದುರು ಎಚ್ಎಎಲ್ ಸಿಬ್ಬಂದಿ ಹೇಳಿದ್ದೇನು?
- ನಿರ್ಮಲಾ ಸೀತಾರಾಮನ್ ಅವರು ಜೆಟ್ ಹಾರಾಟ ನಡೆಸಿದ ಮೊದಲ ರಕ್ಷಣಾ ಮಂತ್ರಿ ಎನಿಸಿಕೊಂಡರು ಆದರೆ ಅವರು ಹಾರಿದ್ದು ಎಚ್ಎಎಲ್ ತಯಾರಿಸಿದ ಜೆಟ್ ವಿಮಾನದಲ್ಲಿ ಎಂಬುದನ್ನು ಅವರು ನೆನೆಪಿಸಿಕೊಂಡು ಆ ನಂತರ ಎಚ್ಎಎಲ್ ಮೇಲೆ ಆರೋಪ ಮಾಡಬೇಕು- ನಿವೃತ್ತ ಎಚ್ಎಎಲ್ ಎಂಜಿನಿಯರ್
- ಒಂದೂವರೆ ವರ್ಷದಿಂದ ಎಚ್ಎಎಲ್ನ ಕೆಲವು ವಿಭಾಗಗಳು ಕೆಲಸವಿಲ್ಲದೆ ಕೂತಿದೆ. ಆದರೆ ಸರ್ಕಾರ ನಮ್ಮ ಕೆಲಸವನ್ನು ಹೊರಗುತ್ತಿಗೆ ನೀಡಿದೆ- ಎಚ್ಎಎಲ್ ನ ಎಸ್ಸಿ/ಎಸ್ಟಿ ಸಿಬ್ಬಂದಿಗಳ ಅಧ್ಯಕ್ಷರ ಆರೋಪ
- 75 ವರ್ಷದ ಕಾರ್ಯಕ್ಷಮತೆಯನ್ನು ಕೆಲವು ರಾಜಕಾರಣಿಗಳು ಮಣ್ಣು ಮುಕ್ಕಿಸಿದ್ದಾರೆ - ನಿವೃತ್ತ ವಾಯುಸೇನೆಯ ಎಂಜಿನಿಯರ್ ಆಕ್ರೋಶ
- ಎಚ್ಎಎಲ್ನಲ್ಲಿ ಇದೇ ಮೊದಲ ಬಾರಿಗೆ ಸಿಬ್ಬಂದಿಗೆ ಈ ಕಾರ್ಯಕ್ರಮದಲ್ಲಿ (ಸಂವಾದ) ಭಾಗಿ ಆಗಬೇಡಿ ಎಂದು ಸೂಚನೆ ಹೊರಡಿಸಿದ್ದಾರೆ. ಎಚ್ಎಎಲ್ ವ್ಯವಸ್ಥಾಪನೆಯನ್ನು ನಾನು ವಿರೋಧಿಸುತ್ತೇನೆ- ನಿವೃತ್ತ ಎಎಚ್ಎಲ್ ಅಧಿಕಾರಿ
- ವಿಮಾನ ತಯಾರಿಕೆಯಲ್ಲಿ ನೈಪುಣ್ಯತೆ ಹೊಂದಿರುವ ಎಚ್ಎಎಲ್ ಬಿಟ್ಟು, ಹನ್ನೇರಡು ದಿನಗಳ ಅನುಭವವಿರುವ ಕಂಪನಿಗೆ ರಫೇಲ್ ಗುತ್ತಿಗೆ ನೀಡಿದ್ದು ನಮಗೆ ನೋವಾಗಿದೆ- ಎಎಚ್ಎಲ್ ಸಿಬ್ಬಂದಿ.