ಪಾಟ್ನಾ: ಬಿಹಾರದ ಆಡಳಿತಾರೂಢ ಜೆಡಿಯು ಪಕ್ಷದ ನೂತನ ರಾಷ್ಟ್ರೀಯ ಉಪಾಧ್ಯಕ್ಷರಾಗದ ಪ್ರಶಾಂತ್ ಕಿಶೋರ್ ಮಂಗಳವಾರದಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮುಂದಿನ 10 ವರ್ಷಗಳಿಂದ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಪಕ್ಷದ ಯುವ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಶಾಂತ್ ಕಿಶೋರ್" ನಾನು ಮುಂದಿನ 10 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಅದು ಲೋಕಸಭೆಯಾಗಲಿ ಅಥವಾ ರಾಜ್ಯಸಭೆಯಾಗಲಿ ಸ್ಪರ್ಧೆಯಲ್ಲಿ ಸ್ಪರ್ಧಿಸುವುದಿಲ್ಲ, ಬಿಹಾರ್ ರಾಜ್ಯವನ್ನು ದೇಶದ ಹತ್ತು ಅಭಿವೃದ್ಧಿ ರಾಜ್ಯಗಳಲ್ಲಿ ಒಂದನ್ನಾಗಿ ಮಾಡುವುದು ತಮ್ಮ ಗುರಿ" ಎಂದು ತಿಳಿಸಿದರು.
2014 ರ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ಪಕ್ಷವು ಪೂರ್ಣ ಬಹುಮತ ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಶಾಂತ್ ಕಿಶೋರ್, ನಂತರದ ದಿನಗಳಲ್ಲಿ ಬಿಜೆಪಿಯಿಂದ ದೂರ ಉಳಿದಿದ್ದರು.
ಇತ್ತೀಚೆಗಷ್ಟೇ ಜೆಡಿಯು ಸೇರಿದ್ದ ಅವರು ಒಮ್ಮೆಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಈಗ ಬಿಹಾರದ ಸಿಎಂ ನಿತೀಶ್ ಕುಮಾರ್ ಅವರು ಪ್ರಶಾಂತ್ ಕಿಶೋರ್ ಅವರನ್ನು ರಾಜ್ಯಸಭೆಗೆ ಕಳುಹಿಸುವ ಸಂಭವವಿದೆ ಎಂದು ಹೇಳಲಾಗುತ್ತಿದೆ.ಆದರೆ ಕಿಶೋರ್ ಇದನ್ನು ಅಲ್ಲಗಳೆದು ತಮ್ಮ ಗುರಿ ದೇಶದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಯುವಕರನ್ನು ಆಕರ್ಷಿಸುವ ಕೆಲಸದಲ್ಲಿ ತಾವು ತೊಡಗಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.