ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ದೇಶದ ಮೊದಲ ಬಂಗಾಳಿ ಪ್ರಧಾನಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ. ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ವಿರುದ್ಧ ಕಠಿಣ ಹೋರಾಟಕ್ಕೆ ಬಿಜೆಪಿ ನಿಂತಿರುವ ಬೆನ್ನಲ್ಲೇ ರಾಜ್ಯಾಧ್ಯಕ್ಷರು ಶನಿವಾರ ಈ ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ ದಿಲೀಪ್ ಘೋಷ್, ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಕೂಡ ಬಂಗಾಳದಿಂದ ಮೊದಲ ಪ್ರಧಾನ ಮಂತ್ರಿಯಾಗಬಹುದಿತ್ತು. ಆದರೆ, ಅದಕ್ಕೆ ಅವರ ಪಕ್ಷವೇ(ಸಿಪಿಐ-ಎಂ) ಬಿಡಲಿಲ್ಲ. ಪ್ರಧಾನ ಮಂತ್ರಿ ಆಯ್ಕೆಯನ್ನು ಪಶ್ಚಿಮ ಬಂಗಾಳದಿಂದ ಮಾಡುವುದಾದರೆ ಮಮತಾ ಅವರಿಗೆ ಉತ್ತಮ ಅವಕಾಶವಿದೆ ಎಂದಿದ್ದಾರೆ.
"ಅವರು ಎಲ್ಲಾ ರೀತಿಯಲ್ಲೂ ಸದೃಢರಾಗಿರಬೇಕು. ಹಾಗಿದ್ದರೆ ಮಾತ್ರ ಕೆಲಸ ಮಾಡಲು ಸಾಧ್ಯ. ನಾನು ಅವರ ಉತ್ತಮ ಆರೋಗ್ಯ ಮತ್ತು ಯಶಸ್ಸಿಗಾಗಿ ಪ್ರಾರ್ಥಿಸುತ್ತೇನೆ. ಏಕೆಂದರೆ ಪಶ್ಚಿಮ ಬಂಗಾಳದ ಹಣೆಬರಹ ಮಮತಾ ಬ್ಯಾನರ್ಜಿ ಅವರ ಯಶಸ್ಸಿನ ಮೇಲೆ ನಿರ್ಧರಿತವಾಗಿದೆ. ಪಶ್ಚಿಮ ಬಂಗಾಳದಿಂದ ಮೊದಲ ರಾಷ್ಟ್ರಪತಿಯಾಗಿ ಪ್ರಣಬ್ ಮುಖರ್ಜಿ ಆಯ್ಕೆಯಾಗಿದ್ದರು. ಈಗ ಪ್ರಧಾನ ಮಂತ್ರಿ ಸರದಿ... ಹಾಗಾಗಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಧಾನಿಯಾಗುವ ಎಲ್ಲಾ ಸಾಧ್ಯತೆ ಇದೆ" ಎಂದು ದಿಲೀಪ್ ಘೋಷ್ ಹೇಳಿದ್ದಾರೆ.