ಕೇರಳ ಪ್ರವಾಸಕ್ಕೆ ಹೊರಟಿದ್ದೀರಾ? ಹಾಗಿದ್ದರೆ ಈ ವಿಷಯ ತಿಳಿಯುವುದು ಅಗತ್ಯ!

ಪ್ರಸಿದ್ಧ ಪ್ರವಾಸಿ ತಾಣ ಮುನ್ನಾರ್ ರೆಸಾರ್ಟ್ ನ ಮಾರ್ಗಗಳು ಮುಚ್ಚಿ ಹೋಗಿದ್ದು, ಅಲ್ಲಿ 70 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

Last Updated : Aug 10, 2018, 06:42 PM IST
ಕೇರಳ ಪ್ರವಾಸಕ್ಕೆ ಹೊರಟಿದ್ದೀರಾ? ಹಾಗಿದ್ದರೆ ಈ ವಿಷಯ ತಿಳಿಯುವುದು ಅಗತ್ಯ! title=

ನವದೆಹಲಿ: ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ರಾಜ್ಯ ಎಂದರೆ ಅದು ಕೇರಳ. ಎಲ್ಲಿ ನೋಡಿದರೂ ಪ್ರಕೃತಿಯ ಸೊಬಗು, ಪ್ರಶಾಂತ ಹಸಿರು ವಾತಾವರಣ, ಕಡಲ ತಿರಗಳು, ಕಿನಾರೆಗಳು, ಕಲ್ಪವೃಕ್ಷಗಳು, ದೋಣಿ ವಿಹಾರಗಳು... ಒಂದೇ, ಎರಡೇ? ಹೀಗಾಗಿ ಪ್ರವಾಸ ಪ್ರಿಯರು ಪ್ರವಾಸಕ್ಕೆಂದು ಮೊದಲು ಆಯ್ಕೆಮಾಡಿಕೊಳ್ಳುವ ರಾಜ್ಯ ಎಂದರೆ ಅದು ಕೇರಳ ಎಂದೇ ಹೇಳಬಹುದು.

ಆದರೆ, ಇದೀಗ ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಅಲ್ಲದೆ, ನದಿಗಳು ತುಂಬಿ ಹರಿಯುತ್ತಿದ್ದ ಎಲ್ಲೆಡೆ ಪ್ರವಾಹ ಭೀತಿ ಎದುರಾಗಿದೆ. ಕೇರಳದ ಕಣ್ಣೂರು ಸೇರಿದಂತೆ ಅನೇಕ ಭಾಗಗಳಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕರಾವಳಿ ಭಾಗ ತತ್ತರಿಸಿದ್ದು, ಮುಖ್ಯಮಂತ್ರಿ ಪಿನರಾಯ್‌ ವಿಜಯನ್‌ ಎಲ್ಲ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಪ್ರವಾಹಕ್ಕೆ ಈ ವರೆಗೆ 26 ಮಂದಿ ಸಾವನ್ನಪ್ಪಿದ್ದಾರೆ. 

ಭಾರೀ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಕೇರಳದ ವಿವಿಧ ಭಾಗಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಣ್ಣೂರಿನ ಇರಿಟ್ಟಿ, ಕೋಜಿಕ್ಕೋಡ್‌'ನ ತಾಮರಶ್ಶೇರಿ, ಮಲಪ್ಪುರಂ ಮತ್ತು ವಯನಾಡ್‌ ಜಿಲ್ಲೆಗಳಿಗೆ ನಾಲ್ಕು ತುಕಡಿಗಳನ್ನು ರವಾನಿಸಲಾಗಿದೆ. ಮಿಲಿಟರಿ ಎಂಜಿನಿಯರಿಂಗ್ ಸರ್ವಿಸಸ್‌ ನಿಂದ ಮೂರು ತುಕಡಿಗಳನ್ನು, ಬೆಂಗಳೂರಿನಿಂದ ಎರಡು, ಹೈದರಾಬಾದ್‌ನಿಂದ ಒಂದು ತುಕಡಿಯನ್ನು ಕೇರಳಕ್ಕೆ ಕಳುಹಿಸಲಾಗಿದೆ. 

ವಯನಾಡ್‌ ಜಿಲ್ಲೆಯ ಪನಮರಮ್‌ನಲ್ಲಿ ಪ್ರವಾಹದ ನಡುವೆ ಸಿಕ್ಕಿಹಾಕಿಕೊಂಡ ಸುಮಾರು 50 ಮಂದಿಯನ್ನು ಭಾರತೀಯ ನೌಕಾಫಡೆ ರಕ್ಷಿಸಿದೆ. ನೌಕಾಪಡೆ ಕೂಡ ವಯನಾಡಿನಲ್ಲಿ ಎರಡು ತಂಡಗಳನ್ನು ನಿಯೋಜಿಸಿದೆ. ಅಲ್ಲದೆ ಇನ್ನೂ ಒಂದು ತಂಡವನ್ನು ಕಲಮಶ್ಶೇರಿಯಲ್ಲಿ ಸನ್ನದ್ಧವಾಗಿರಿಸಿದೆ. ಇನ್ನು, ಕೋಯಿಕ್ಕೋಡ್‌ನಲ್ಲಿ ಪ್ರವಾಹದಿಂದ ಹಲವು ರಸ್ತೆಗಳೇ ಕೊಚ್ಚಿ ಹೋಗಿದ್ದು, ರಸ್ತೆಗಳಲ್ಲಿ 5 ಅಡಿಗೂ ಹೆಚ್ಚು ನೀರು ಆವರಿಸಿದೆ. 

ಅಷ್ಟೇ ಅಲ್ಲದೆ, ಪ್ರಸಿದ್ಧ ಪ್ರವಾಸಿ ತಾಣ ಮುನ್ನಾರ್ ರೆಸಾರ್ಟ್ ನ ಮಾರ್ಗಗಳು ಮುಚ್ಚಿ ಹೋಗಿದ್ದು, ಅಲ್ಲಿ 70 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಇವರಲ್ಲಿ 20 ವಿದೇಶಿಯರು ಇದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾದ ಸೈನ್ಯವು ಹೆಲಿಕಾಪ್ಟರ್ ಬಳಸಿಕೊಂಡು ಹೆಚ್ಚುವರಿ ಪ್ರವಾಸಿಗರನ್ನು ಸ್ಥಳಾಂತರಿಸಿದೆ. ಮಳೆ ಮತ್ತು ಪ್ರವಾಹದಿಂದಾಗಿ ಅಪಾರ ಹಾನಿಗೊಳಗಾದ ಕೇರಳಕ್ಕೆ ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕಾಗಿ ಸಾಧ್ಯವಿರುವ ಎಲ್ಲಾ ಸಹಾಯವನ್ನೂ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. 

ಹೀಗಾಗಿ ಕೇರಳಕ್ಕೆ ಪ್ರವಾಸ ತೆರಳುವ ಪ್ಲಾನ್ ಮಾಡಿದ್ದರೆ ಇದು ಸೂಕ್ತ ಸಮಯ ಅಲ್ಲ. ಪ್ರವಾಸಕ್ಕೆ ತೆರಳಿ ಸಂಕಷ್ಟದಲ್ಲಿ ಸಿಲುಕುವ ಮುನ್ನ ಒಮ್ಮೆ ಆಲೋಚಿಸಿ!
 

Trending News