ರಾಜ್ಯಪಾಲರ ಆಡಳಿತ ಜಾರಿಯಿಂದ ಸೇನಾ ಕಾರ್ಯಾಚರಣೆಗೆ ಯಾವುದೇ ತೊಂದರೆಯಿಲ್ಲ: ಸೇನಾ ಮುಖ್ಯಸ್ಥ

ಸೇನಾ ಕಾರ್ಯಾಚರಣೆ ಎಂದಿನಂತೆ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಬುಧವಾರ ಹೇಳಿದ್ದಾರೆ. 

Updated: Jun 20, 2018 , 04:02 PM IST
ರಾಜ್ಯಪಾಲರ ಆಡಳಿತ ಜಾರಿಯಿಂದ ಸೇನಾ ಕಾರ್ಯಾಚರಣೆಗೆ ಯಾವುದೇ ತೊಂದರೆಯಿಲ್ಲ: ಸೇನಾ ಮುಖ್ಯಸ್ಥ
Pic Courtesy:ANI

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿ ಮಾಡಿರುವುದರಿಂದ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಯಾವುದೇ ತೊಂದರಯಾಗುವುದಿಲ್ಲ, ಎಂದಿನಂತೆ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಬುಧವಾರ ಹೇಳಿದ್ದಾರೆ. 

ರಾಜಧಾನಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ ಬಳಿಕ ಎಎನ್ಐ ಜೊತೆ ಮಾತನಾಡಿದ ಅವರು, ರಂಜಾನ್ ತಿಂಗಳಿನಲ್ಲಿ ಕದನ ವಿರಾಮ ಘೋಷಣೆ ಮಾಡಿದ್ದರಿಂದಾಗಿ ನಾವೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದೆವು. ಆದರೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ರಾಜ್ಯದಲ್ಲಿ ರಾಜ್ಯಪಾಲರ ಆಡಳಿತವನ್ನು ಹೇರಲಾಗಿದೆ. ಆದರೆ, ಸೇನಾ ಕಾರ್ಯಾಚರಣೆ ಎಂದಿನಂತೆ ಮುಂದುವರೆಯಲಿದೆ. ಇದರಿಂದ ಭಾರತೀಯ ಸೇನೆಗೆ ರಾಜಕೀಯ ಹಸ್ತಕ್ಷೇಪ ಎದುರಾಗುವುದಿಲ್ಲ ಎಂದು ಹೇಳಿದ್ದಾರೆ. 

ಮಂಗಳವಾರ ಪಿಡಿಪಿ ಜೊತೆಗಿನ ಮೈತ್ರಿಯಿಂದ ಬಿಜೆಪಿ ಹೊರಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ರಾಜಿನಾಮೆ ನೀಡಿದ್ದರು. ಇದರಿಂದಾಗಿ ರಾಜ್ಯಪಾಲರ ಆಡಳಿತ ಜಾರಿ ಮಾಡಲು ರಾಜ್ಯಪಾಲ ಎನ್.ಎನ್.ವೋಹ್ರಾ ರಾಷ್ಟ್ರಪತಿಗೆ ಪತ್ರ ಬರೆದಿದ್ದರು. ಇದಕ್ಕೆ ಇಂದು ಬೆಳಿಗ್ಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅನುಮೋದನೆ ನೀಡಿದ್ದು, ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಗಿದೆ.