ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣಾವಧಿಯ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದೆ. ರಾಷ್ಟ್ರಪತಿ ಆದ ಬಳಿಕ ಮೊದಲ ಬಾರಿಗೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಮಾನಾಥ್ ಕೋವಿಂದ್ ಈ ವರ್ಷ 'ಭಾರತದ ಕನಸು ನನಸಾಗಲಿದೆ' ಎಂದು ಹೇಳಿದರು.
ಸಂಸತ್ತಿನ ಸೆಂಟ್ರಲ್ ಹಾಲಿನಲ್ಲಿ ಎರಡೂ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಮಾನಾಥ್ ಕೋವಿಂದ್, 2018 ರ ವರ್ಷದಲ್ಲಿ ಹೊಸ ಭಾರತದ ಕನಸು ನಿಜವಾಗುವುದು. 2019 ರಲ್ಲಿ ನಾವು ಮಹಾತ್ಮಾ ಗಾಂಧಿಯವರ 150 ನೇ ವಾರ್ಷಿಕೋತ್ಸವವನ್ನು ಆಚರಿಸುವಾಗ, ನಮ್ಮ ದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ತ್ರಿವಳಿ ತಲಾಖ್ ಮಸೂದೆ ಶೀಘ್ರದಲ್ಲೇ ಜಾರಿಯಾಗುತ್ತದೆ ಎಂದು ನಾನು ಆಶಿಸುತ್ತೇನೆ. ಮಸೂದೆ ಜಾರಿಯಾಗುವುದರಿಂದ ಮುಸ್ಲಿಂ ಮಹಿಳೆಯರ ಘನತೆ ಹೆಚ್ಚುವುದರ ಜೊತೆಗೆ, ಭಯವಿಲ್ಲದೆ ಜೀವನ ನಡೆಸಬಹುದು ಎಂದು ಕೋವಿಂದ್ ಅಭಿಪ್ರಾಯಪಟ್ಟರು.
2022 ರ ಹೊತ್ತಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ ಕೋವಿಂದ್, ರೈತರ ಆದಾಯವನ್ನು ಹೆಚ್ಚಿಸಲು, ಹೈನುಗಾರಿಕೆ ಕ್ಷೇತ್ರದಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪರಿಚಯಿಸಲಾಗಿದೆ. ಅದರ ಅಡಿಯಲ್ಲಿ 'ಡೈರಿ ಪ್ರೊಸೆಸಿಂಗ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಫಂಡ್'ಗಾಗಿ 11 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಜೊತೆಗೆ 'ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ' ಅಡಿಯಲ್ಲಿ ಅಭಿವೃತ್ತಿಯತ್ತ ಸಾಗಲು ನಿರ್ಧರಿಸಲಾಗಿದೆ. 2014 ರಲ್ಲಿ ಕೇವಲ 56 ಪ್ರತಿಶತ ಗ್ರಾಮಗಳು ರಸ್ತೆಗಳಿಗೆ ಸಂಪರ್ಕ ಹೊಂದಿದ್ದವು, ಇಂದು 82 ಪ್ರತಿಶತದಷ್ಟು ಗ್ರಾಮಗಳಿಗೆ ಬಹುತೇಕ ರಸ್ತೆ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಎಲ್ಲರಿಗೂ ನೀರು-ವಿದ್ಯುತ್-ಶೌಚಾಲಯ ಸೌಕರ್ಯಗಳ ಲಭ್ಯತೆಯೊಂದಿಗೆ ವಸತಿ ಒದಗಿಸುವ ಕಡೆಗೆ ಸಾಗಿದ್ದು, 2022 ರ ಹೊತ್ತಿಗೆ ಬಡವರಿಗೆ ಮತ್ತು ಮನೆಯಿಲ್ಲದವರಿಗೆ ಮನೆ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.